ಹಾರ, ನೆನಪಿನ ಕಾಣಿಕೆ ಬೇಡ; ಕಂದಾಯ ಸಚಿವರ ಟಿಪ್ಪಣಿ
ಬೆಂಗಳೂರು, ಜೂನ್ 30; ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ವಿವಿಧ ಇಲಾಖೆಗಳು ಈ ಕುರಿತು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇಲಾಖೆಯ ಸಭೆಯ ಹೆಸರಿನಲ್ಲಿ ನಡೆಯುವ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಕುರಿತು ಸಚಿವರು ಟಿಪ್ಪಣಿಯನ್ನು ಹೊರಡಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲಾಖೆಯ ಸಭೆಗಳಲ್ಲಿ ಹಾರ, ನೆನಪಿನ ಕಾಣಿಕೆ, ಕುಡಿಯುವ ನೀರಿನ ಪೂರೈಕೆ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ಭೂಮಿ), ಬೆಂಗಳೂರು ಇವರಿಗೆ ಟಿಪ್ಪಣಿಯೊಂದನ್ನು ಕಳಿಸಿದ್ದಾರೆ.

ಟಿಪ್ಪಣಿಯಲ್ಲಿ ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿದ್ದು, ಇಲಾಖಾ ವತಿಯಿಂದ ವಿವಿಧ ಹಂತಗಳಲ್ಲಿ ಸಭೆ, ಸಮಾರಂಭಗಳನ್ನು ನಿಯಮಿತವಾಗಿ ಏರ್ಪಡಿಸಲಾಗುತ್ತದೆ. ಕಂದಾಯ ಇಲಾಖೆಯಡಿ ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು/ ಸಿಬ್ಬಂದಿಗಳು ಅನುಸರಿಸಲು ಸೂಚಿಸಿದೆ ಎಂದು ಹೇಳಿದ್ದಾರೆ.
ಟಿಪ್ಪಣಿಯಲ್ಲಿ ಏನಿದೆ?; ಆಡಂಬರ ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಸಭೆ ಸಮಾರಂಭಗಳನ್ನು ಸರಳವಾಗಿ ನಡೆಸುವುದು. ಅನಗತ್ಯವಾಗಿ ಹಾರ, ನೆನಪಿನ ಕಾಣಿಕೆ ನೀಡದೇ ಅವಶ್ಯವಿದ್ದಲ್ಲಿ ತ್ರಿವರ್ಣ ಖಾದಿ ಹತ್ತಿಯ ಹಾರವನ್ನು ಮಾತ್ರ ಬಳಸುವುದು.
ಸಭೆ ಸಮಾರಂಭಗಳಲ್ಲಿ ಆತಿಥ್ಯಕ್ಕೆ, ಔಪಚಾರಿಕತೆಗೆ ಸಮಯ ವ್ಯರ್ಥ ಮಾಡದೇ, ಔಪಚಾರಿಕತೆಗೆ ಸಮಯವನ್ನು ಮಿತವಾಗಿರಿಸಿ, ಸಭೆ ಸಮಾರಂಭದ ಮೂಲ ವಿಷಯಕ್ಕೆ ಹೆಚ್ಚಿನ ಸಮಯ ಒದಗಿಸುವುದು.
ಕುಡಿಯುವ ನೀರಿಗೆ ಬಳಸಿ, ಬಿಸಾಡುವಂತ ಪ್ಲಾಸ್ಟಿಕ್ ಬಾಟಲ್/ ಕಪ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಿ, ಮರುಬಳಕೆ ಮಾಡುವ ಬಾಟಲ್, ಕಪ್ ಉಪಯೋಗಿಸುವುದು. ನೀರನ್ನು 20 ಲೀಟರ್ ಕ್ಯಾನ್ ಮುಖಾಂತರ ಖರೀದಿಸಿ, ಮರುಬಳಕೆ ಮಾಡಲಾಗುವ ಬಾಟಲ್‌ಗಳಲ್ಲಿ ನೀಡುವುದು.
ಪ್ಲಾಸ್ಟಿಕ್ ಬಾಟಲ್ ನಿಷೇಧಿಸಲಾಗಿದೆ; ಕರ್ನಾಟಕ ಸರ್ಕಾರ ಸರ್ಕಾರಿ, ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧಿಸಿದೆ. ಈ ಕುರಿತು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈ ಹಿಂದೆಯೇ ಆದೇಶ ಹೊರಡಿಸಿದೆ. ಆದರೆ ಆದೇಶ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬ ಆರೋಪವೂ ಇದೆ. ಅಲ್ಲದೇ ಸಭೆ, ಸಮಾರಂಭಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹಾರ, ನೆಪಿನ ಕಾಣಿಕೆ, ಕುಡಿಯುವ ನೀರು ಹೀಗೆ ಅನಗತ್ಯವಾಗಿ ವೆಚ್ಚವನ್ನು ಮಾಡಲಾಗುತ್ತದೆ.
ಈ ಹಿಂದೆ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ವಿಶ್ವವಿದ್ಯಾಲಯ ಹಾಗೂ ಸರ್ಕಾರದ ಅನುದಾನ ಪಡೆಯುವ ಸಂಸ್ಥೆ ನಡೆಸುವ ಸಭೆ, ಸಮಾರಂಭದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಾಟಲ್ ಬಳಕೆ ಮತ್ತು ಸರಬರಾಜು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.
ಪ್ಲಾಸ್ಟಿಕ್ ಬಾಟಲ್ ಬದಲಿಗೆ 20 ಲೀಟರ್ ಕ್ಯಾನ್ ಅಥವ ಹೆಚ್ಚಿನ ಸಾಮರ್ಥ್ಯದ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಗಾಜಿನ, ಸ್ಟೀಲ್ ಲೋಟದಲ್ಲಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಲೂ ಸಹ ಸರ್ಕಾರಿ ಸಭೆ, ಇಲಾಖೆಯ ಸಭೆಗಳಿಗೆ ಹಾರ, ಹೂಗುಚ್ಛ ತರದಂತೆ ಸೂಚನೆ ನೀಡಲಾಗಿತ್ತು. ವಿಧಾನಸೌಧದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸಬೇಕು. ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್, ಕಪ್ ಬಳಕೆ ಮಾಡದಂತೆ ಸುತ್ತೋಲೆಯನ್ನು ಹೊರಡಿಸಲಾಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಸಹ ಪರಿಸರ ಸ್ನೇಹಿ ಕ್ರಮಕ್ಕೆ ಮುಂದಾಗಿದ್ದವು. ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಲೋಟ, ಬಾಟಲ್ ಬಳಕೆಗೆ ಕಡಿವಾಣ ಹಾಕುವ ತೀರ್ಮಾನವನ್ನು ಕೈಗೊಂಡಿದ್ದವು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅಧಿಕಾರಿಗಳು, ಅಭಿಮಾನಿಗಳು, ಕಾರ್ಯಕರ್ತರಿಗೆ ಹಾರ, ತುರಾಯಿ ತರಬೇಡಿ. ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿ ಎಂದು ಮನವಿ ಮಾಡಿದ್ದರು.












Click it and Unblock the Notifications