ಗಣೇಶ ಚತುರ್ಥಿ: ಸಿಕಂದರಾಬಾದ್- ಯಶವಂತಪುರ ಮಧ್ಯೆ ವಿಶೇಷ ರೈಲು
ಬೆಂಗಳೂರು, ಆ.25: ಗಣೇಶ ಚತುರ್ಥಿ ಅಂಗವಾಗಿ ಹೈದರಾಬಾದ್‌ನ ಸಿಕಂದರಾಬಾದ್ ಮತ್ತು ಬೆಂಗಳೂರಿನ ಯಶವಂತಪುರ ಮಧ್ಯೆ ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) ಒಂದು ಬಾರಿಯ ವಿಶೇಷ ರೈಲು ಓಡಿಸಲಿದೆ.
ರೈಲು ಸಂಖ್ಯೆ 07193 ಸಿಕಿಂದರಾಬಾದ್-ಯಶವಂತಪುರ ವಿಶೇಷ ರೈಲು ಆ.29ರಂದು ಮಧ್ಯಾಹ್ನ 3.15ಕ್ಕೆ ಹೊರಟು ಮರುದಿನ ಬೆಳಗ್ಗೆ 4ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ. ಮರಳಿ (ರೈಲು ಸಂಖ್ಯೆ: 07194) ಆ.30ರ ಸಂಜೆ 5.20 ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 6.45ಕ್ಕೆ ಸಿಕಂದರಾಬಾದ್ ಸೇರುತ್ತದೆ.
ಕಾಚಿಗುಡ, ಉಮದಾನಗರ್, ಜಡ್ಚೆರ್ಲಾ, ಮಹಬೂಬ್ ನಗರ, ವನಪರ್ತಿ ರಸ್ತೆ, ಗದ್ವಾಲ್, ಕರ್ನೂಲ್, ಅನಂತಪುರ, ಧರ್ಮಾವರಂ, ಹಿಂದುಪುರ, ಯಲಂಹಕ ಮಾರ್ಗವಾಗಿ ಸಂಚರಿಸುತ್ತದೆ. ಈ ರೈಲು ಎರಡು ದ್ವಿತೀಯ ದರ್ಜೆ ಎಸಿ, ಐದು ತೃತೀಯ ದರ್ಜೆ ಎಸಿ, 10 ಸ್ಲೀಪರ್ ದರ್ಜೆ ಹಾಗೂ ಎರಡು ಸಾಮಾನ್ಯ ದರ್ಜೆ ಬೋಗಿಗಳನ್ನು ಒಳಗೊಂಡಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಸೆಂಟ್ರಲ್ ರೈಲ್ವೆ ಈಗಾಗಲೇ ಗಣಪತಿ ಹಬ್ಬದ ಪ್ರಯುಕ್ತ 212 ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಈಗ ಘೋಷಿಸಿರುವ ರೈಲುಗಳಿಂದ ಈ ವರ್ಷ ಒಟ್ಟಾರೆ ಗಣಪತಿ ಹಬ್ಬದ ವಿಶೇಷ ರೈಲುಗಳ ಸಂಖ್ಯೆ 218 ಆಗಿರುತ್ತದೆ. ಗಣೇಶ ಚತುರ್ಥಿಯನ್ನು ಆಗಸ್ಟ್ 31 ರಂದು ಆಚರಿಸಲಾಗುತ್ತದೆ. ಈ ಹಬ್ಬವು ಸೆಪ್ಟೆಂಬರ್ 9 ರಂದು ಕೊನೆಗೊಳ್ಳಲಿದೆ.
ಗಣಪತಿ ಉತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೇಂದ್ರ ರೈಲ್ವೆ 32 ಹೆಚ್ಚುವರಿ ಗಣಪತಿ ವಿಶೇಷ ರೈಲುಗಳನ್ನು ಓಡಿಸಿತ್ತು. ಇದು ಈಗಾಗಲೇ ಘೋಷಿಸಲಾದ 74 ಗಣಪತಿ ವಿಶೇಷ ರೈಲುಗಳಿಗೆ ಹೆಚ್ಚುವರಿಯಾಗಿದೆ. ಗಣಪತಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹಬ್ಬದ ಋತುವಿನಲ್ಲಿ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪಶ್ಚಿಮ ರೈಲ್ವೆಯು ಸಹ ವಿವಿಧ ಸ್ಥಳಗಳಿಗೆ ವಿಶೇಷ ದರದಲ್ಲಿ 6 ಜೋಡಿ ವಿಶೇಷ ರೈಲುಗಳನ್ನು 60 ಬಾರಿ ಸೇವೆಗೆ ಬಿಡಲಿದೆ.












Click it and Unblock the Notifications