Ganesha Chaturthi; ಖಾಸಗಿ ಬಸ್‌ಗೆ ಸಾರಿಗೆ ಇಲಾಖೆಯ ಖಡಕ್ ಎಚ್ಚರಿಕೆ
ಬೆಂಗಳೂರು, ಸೆಪ್ಟೆಂಬರ್ 14; ಗಣೇಶ ಚತುರ್ಥಿ 2023ರ ಆಚರಣೆಗೆ ಸಿದ್ಧತೆಗಳು ಜೋರಾಗಿವೆ. ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಅನೇಕರು ಹಬ್ಬದ ಆಚರಣೆಗಾಗಿ ಊರಿಗೆ ಹೋಗಬೇಕು ಎಂದು ಯೋಜನೆ ರೂಪಿಸುತ್ತಿದ್ದಾರೆ. ಆದರೆ ಖಾಸಗಿ ಬಸ್‌ಗಳ ದುಪ್ಪಟ್ಟು ದರಗಳು ಅವರ ಜೇಬಿಗೆ ಕತ್ತರಿ ಹಾಕಿದೆ. ವಿಮಾನ ಪ್ರಯಾಣಕ್ಕಿಂತ ಬಸ್ ಪ್ರಯಾಣವೇ ದುಬಾರಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಗೌರಿ-ಗಣೇಶ ಮತ್ತು ವಾರಾಂತ್ಯದ ರಜೆಗಳು ಒಟ್ಟಿಗೆ ಬಂದಿವೆ. ನೂರಾರು ಜನರು ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ಅವಕಾಶ ಬಳಕೆ ಮಾಡಿಕೊಂಡು ಖಾಸಗಿ ಬಸ್‌ಗಳು, ಖಾಸಗಿ ವಾಹನಗಳ ಮಾಲೀಕರು ದುಪ್ಪಟ್ಟು ದರಗಳನ್ನು ವಸೂಲಿ ಮಾಡುತ್ತಿದ್ದಾರೆ. ಜನರು ಈ ಕುರಿತು ಸಾರಿಗೆ ಇಲಾಖೆಗೆ ದೂರು ನೀಡಿದ್ದಾರೆ.

ಸಾರಿಗೆ ಇಲಾಖೆ ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇಲಾಖೆಯ ಆಯುಕ್ತರು ಈ ಕುರಿತು ಖಾಸಗಿ ವಾಹನಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ದುಪ್ಪಟ್ಟು ದರಗಳನ್ನು ವಸೂಲಿ ಮಾಡಿದರೆ ಪ್ರಕರಣಗಳನ್ನು ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಕಟಣೆ ಮೂಲಕ ಮಾಹಿತಿ; ಸಾರಿಗೆ ಇಲಾಖೆ ಆಯುಕ್ತರು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಪತ್ರಿಕೆಗಳಲ್ಲಿ ವಾರಾಂತ್ಯ, ಹಬ್ಬ ಹರಿದಿನಗಳಂದು ಖಾಸಗಿ ಪ್ರಯಾಣಿಕರ ವಾಹನಗಳ ಪ್ರಯಾಣ ದರಗಳಲ್ಲಿ ವಿಪರೀತ ಹೆಚ್ಚಳ ಮಾಡಿ ಪ್ರಯಾಣಿಕರ ಸುಲಿಗೆ ಮಾಡುತ್ತಿರುವ ಕುರಿತು ವರದಿಯಾಗಿರುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.
ಈ ವಿಷಯದ ಕುರಿತು ಸಾರಿಗೆ ಇಲಾಖೆಗೆ ಸಾರ್ವಜನಿಕರಿಂದ ಹಲವು ದೂರುಗಳು ಸಹ ಬಂದಿರುತ್ತವೆ. ಆದ್ದರಿಂದ ಖಾಸಗಿ ಪ್ರಯಾಣಿಕರ ವಾಹನಗಳ ಮಾಲೀಕರುಗಳು ಮತ್ತು ಆನ್‌ಲೈನ್ ಟಿಕೆಟ್ ನೀಡುವ ವಿತರಕರಿಗೆ ವಾರಾಂತ್ಯ ಹಾಗೂ ಸರದಿ ಹಬ್ಬ ಹರಿದಿನಗಳಲ್ಲಿ ಪ್ರಯಾಣ ದರಗಳಲ್ಲಿ ವಿಪರೀತ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಅನಾನುಕೂಲತೆ ಮಾಡಬಾರದೆಂದು ಸೂಚಿಸಲಾಗಿದೆ.
ಪತ್ರಿಕಾ ಪ್ರಕಟಣೆ - ಹಬ್ಬ ಹರಿದಿನಗಳಲ್ಲಿ ಖಾಸಗಿ ವಾಹನಗಳ ವಿಪರೀತ ದರ ಬಗ್ಗೆ @RLR_BTM pic.twitter.com/JPJwVnbZiV
— ಸಾರಿಗೆ ಇಲಾಖೆ ,Transport Department Karnataka (@tdkarnataka) September 14, 2023
ಪ್ರಯಾಣಿಕರ ವಾಹನಗಳಲ್ಲಿ ಇತರೆ ಸರಕುಗಳನ್ನು ಅನಧಿಕೃತವಾಗಿ ಸಾಗಿಸದಿರಲು ಈ ಮೂಲಕ ತಿಳಿಸಲಾಗಿದೆ. ಮುಂದುವರೆದು ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರ/ ಆನ್‌ಲೈನ್ ಟಿಕೆಟ್ ನೀಡುವ ವಿತರಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.
ಈ ಬಾರಿಯ ಗಣೇಶ ಚತುರ್ಥಿ ಸೆಪ್ಟೆಂಬರ್ 18ರ ಸೋಮವಾರವಿದೆ (ಕೆಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 19). ಸೆಪ್ಟೆಂಬರ್ 15 ಶುಕ್ರವಾರ, ಸೆಪ್ಟೆಂಬರ್ 16 ಶನಿವಾರ ಮತ್ತು ಸೆಪ್ಟೆಂಬರ್ 17 ಭಾನುವಾರ ಬರುತ್ತದೆ. ಆದ್ದರಿಂದ ವಾರಾಂತ್ಯ ಮತ್ತು ಹಬ್ಬದ ರಜೆಗಳು ಒಟ್ಟಿಗೆ ಬಂದಿದ್ದು, ನೂರಾರು ಜನರು ಪ್ರಯಾಣ ನಡೆಸುತ್ತಾರೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವಿನ ಪ್ರಯಾಣ ದರ 700 ರಿಂದ 1000 ರೂ. ಇರುತ್ತದೆ. ಆದರೆ ಈಗ 1,500 ರಿಂದ 2,500 ರೂ.ಗೆ ಖಾಸಗಿ ಬಸ್ ಟಿಕೆಟ್ ಮಾರಾಟವಾಗುತ್ತಿದೆ. ಬೆಂಗಳೂರು-ಮಂಗಳೂರು ದರ 700 ರಿಂದ 950 ರೂ. ಇರುತ್ತದೆ. ಆದರೆ ಈಗ 1,400 ರಿಂದ 2 ಸಾವಿರ ರೂ. ಆಗಿದೆ ಎಂದು ಜನರು ದೂರಿದ್ದಾರೆ.
ಬೆಂಗಳೂರು-ಶಿರಸಿ ನಡುವಿನ ದರ 700 ರಿಂದ 800 ಇರುವುದು ಈಗ 1,850 ರಿಂದ 2,100 ರೂ.ಗೆ ತಲುಪಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಹಿನ್ನಲೆಯಲ್ಲಿ ಕೆಎಸ್ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ. ಆದರೆ ಖಾಸಗಿ ಬಸ್‌ಗಳ ಟಿಕೆಟ್‌ಗಾಗಿ ಬೇಡಿಕೆಯೂ ಹೆಚ್ಚಿದೆ.
ಭಾರತೀಯ ರೈಲ್ವೆಯೂ ಸಹ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಬೆಂಗಳೂರು ನಗರದಿಂದ ವಿವಿಧ ನಗರಕ್ಕೆ ಹೆಚ್ಚುವರಿ ರೈಲುಗಳನ್ನು ಓಡಿಸುತ್ತಿದೆ. ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿಯನ್ನು ಅಳವಡಿಕೆ ಮಾಡುತ್ತಿದೆ. ಆದರೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಿದೆ. ಇದರಿಂದಾಗಿ ಖಾಸಗಿ ವಾಹನಗಳ ಮೇಲೆ ಅವಲಂಬಿಸುವುದು ಅನಿವಾರ್ಯವಾಗಿದೆ.












Click it and Unblock the Notifications