ಕರ್ನಾಟಕದಲ್ಲಿ 55 ರೈಲ್ವೆ ನಿಲ್ದಾಣ ಅಭಿವೃದ್ಧಿ: 'ಗದಗ ರೈಲು ನಿಲ್ದಾಣ' ಕಾಮಗಾರಿ ಅಪ್ಡೇಟ್ ಕೊಟ್ಟ ರೈಲ್ವೆ ಸಚಿವಾಲಯ
ಗದಗ, ನವೆಂಬರ್ 21: ಕೇಂದ್ರ ಸರ್ಕಾರದ 'ಅಮೃತ್ ಭಾರತ್ ನಿಲ್ದಾಣ ಯೋಜನೆ' (Amrit Bharat Station Scheme) ಯಡಿ ಕರ್ನಾಟಕದ 55 ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡುತ್ತಿದೆ. ಈ ಮೂಲಕ ಬಹುವರ್ಷಗಳಿಂದ ಹಳೆಯ ಮೂಲಸೌಕರ್ಯಗಳನ್ನೇ ಹೊಂದಿದ್ದ ರೈಲ್ವು ನಿಲ್ದಾಣಗಳು ಮೇಲ್ದರ್ಜೆಗೆ ಏರಲಿವೆ. ಆಧುನಿಕ ಸೌಲಭ್ಯ ಪಡೆದುಕೊಳ್ಳಲಿವೆ. ಸದ್ಯ ಈ ಯೋಜನೆಯಡಿಯಲ್ಲಿಯೇ ಗದಗ ರೈಲು ನಿಲ್ದಾಣ ಸಹ ಅಭಿವೃದ್ಧಿಗೆ ಒಳಗಾಗಿದೆ.
ಗದಗ ಜಂಕ್ಷನ್ ರೈಲು ನಿಲ್ದಾಣವು ನೈಋತ್ಯ ರೈಲ್ವೆ ವಿಭಾಗ (SWR) ಅಡಿಯಲ್ಲಿ ಬರುತ್ತದೆ. ಗದಗ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾರ್ಯವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಇತ್ತೀಚೆಗೆ ರೈಲ್ವೆ ಸಚಿವಾಲಯವು ಅಭಿವೃದ್ಧಿ ಕಾರ್ಯಪ್ರಗತಿ ವರದಿಯನ್ನು ಹಂಚಿಕೊಂಡಿದೆ. ನಿಲ್ದಾಣದಲ್ಲಿ ಕಾಮಗಾರಿ ಚುರುಕು ಪಡೆದಿದೆ ಎಂದು ತಿಳಿಸಿದೆ.

ಸದ್ಯ ಗದಗ ನಿಲ್ದಾಣದನಿಲ್ದಾಣದ ಕಟ್ಟಡ ಹೊಸದಾಗಿ ನಿರ್ಮಾಣವಾಗುತ್ತಿದೆ. ಈ ಸಂಬಂಧ ಹಳೆಯ ಕಟ್ಟಡ ಧ್ವಂಸಗೊಳಿಸಿ ನಿರ್ಮಿಸಲಾಗುತ್ತಿದೆ. ಬುನಾದಿ ಕೆಲಗಳು ಪೂರ್ಣಗೊಂಡಿವೆ. ಪ್ಲಾಟ್‌ಫಾರ್ಮ್ ಗಳ ಅಭಿವೃದ್ಧಿ, ನೆಲವನ್ನು ಕಾಂಕ್ರೀಟು ಹಾಕಿ ಗಟ್ಟಿಗೊಳಿಸಲಾಗುತ್ತಿದೆ. ಪ್ರಯಾಣಿಕರು ಒಂದು ಹಳಿ ದಾಟದಂತೆ ನೋಡಿಕೊಳ್ಳಲು ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದರ ಕಡೆಗೆ ತೆರಳಲು ಅನುಕೂಲಕ್ಕಾಗಿ 12 ಮೀಟರ್ ಅಗಲದ ಮೇಲ್ಸೇತುವೆ (Foot Over Bridge)ನಿರ್ಮಿಸಲಾಗುತ್ತಿದೆ.
ನಿಲ್ದಾಣದಲ್ಲಿ 9 ಹಳಿ, 3ಪಿಎಫ್
ಈ ರೈಲು ನಿಲ್ದಾಣವು (GDG) ಗದಗ ಮತ್ತು ಗದಗ-ಬೆಟಗೇರಿಗೆ ಸೇವೆ ಸಲ್ಲಿಸುತ್ತದೆ. ಮೂಲತಃ ಗದಗ ಜಂಕ್ಷನ್ ಆಗಿದ್ದು, ಒಟ್ಟು 9 ರೈಲು ಹಳಿಗಳನ್ನು ಹೊಂದಿದೆ. ಪ್ರಸ್ತುತ, ರೈಲು ನಿಲ್ದಾಣವು 03 ಪ್ಲಾಟ್‌ಫಾರ್ಮ್‌ಗಳಿವೆ. ಇದು ಗದಗ-ಹೊಟಗಿ ರೈಲು ಮಾರ್ಗವನ್ನು ಸಂಪರ್ಕಿಸುತ್ತದೆ.

2008ರ ಡಿಸೆಂಬರ್ ನಲ್ಲಿ ಗದಗ-ಹೊಟಗಿ ರೈಲು ಮಾರ್ಗವನ್ನು 'ಮೀಟರ್ ಗೇಜ್'ನಿಂದ 'ಬ್ರಾಡ್ ಗೇಜ್'ಗೆ ಪರಿವರ್ತಿಸಲಾಯಿತು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಗದಗ ರೈಲು ನಿಲ್ದಾಣದ ಎರಡು ಪ್ಲಾಟ್‌ಫಾರ್ಮ್‌ನಲ್ಲಿ (PF) ಎಸ್ಕಲೇಟರ್‌ಗಳು, ಪಿಎಫ್ 1 ಮತ್ತು ಪಿಎಫ್ 2 ರಲ್ಲಿ ಎಲಿವೇಟರ್‌ಗಳು, ಗಣಕೀಕೃತ ಕಾಯ್ದಿರಿಸುವಿಕೆ ಕಚೇರಿ, ವಿಶ್ರಾಂತಿ ಕೊಠಡಿ, ರೈಲ್ವೆ ಕೋಚ್ ಗಳು ಬಂದು ನಿಲ್ಲುವ ಡಿಸ್ಪ್ಲೈ, ಉಚಿತ ವೈ-ಫೈ ಸೌಲಭ್ಯ ಮತ್ತು ಬುಕ್‌ಸ್ಟಾಲ್‌ನಂತಹ ಸೌಕರ್ಯಗಳನ್ನು ಹೊಂದಿದೆ.
ಶೀಘ್ರವೇ ಕಾಮಗಾರಿ ಪೂರ್ಣ ನಿರೀಕ್ಷೆ
ನಿಲ್ದಾಣದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಉಪಹಾರ ಗೃಹ (ಹೋಟೆಲ್) ಹೊಂದಿದೆ. ಯೋಜನೆಯಡಿ ಮೇಲ್ದರ್ಜೆಗೇರಿದ ನಂತರ, ಪ್ರಯಾಣಿಕರು ಹಲವಾರು ಆಧುನಿಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ನಿಲ್ದಾಣ ಪೂರ್ಣವಾಗಿ ಅಭಿವೃದ್ಧಿಗೊಂಡು ಲೋಕಾರ್ಪಣೆಗೊಳ್ಳಲಿದೆ.
ಕೇಂದ್ರ ರೈಲ್ವೆ ಸಚಿವಾಲಯವು 'ಅಮೃತ್ ಭಾರತ್ ನಿಲ್ದಾಣ ಯೋಜನೆ' ಅಡಿಯಲ್ಲಿ ಭಾರತಾದ್ಯಂತ 1,309 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಕಾರ್ಯವನ್ನು ಆರಂಭಿಸಿದೆ. ಇವುಗಳಲ್ಲಿ ಗದಗ ಸೇರಿದಂತೆ 55 ರೈಲು ನಿಲ್ದಾಣಗಳು ಕರ್ನಾಟಕದ್ದಾಗಿವೆ. ಹಾಗಾದರೆ ಕರ್ನಾಟಕದ ಯಾವ ಯಾವ ರೈಲು ನಿಲ್ದಾಣಗಳು ಯೋಜನೆ ಅಭಿವೃದ್ಧಿ ಹೊಂದಲಿವೆ ಎಂಬ ಪಟ್ಟಿ ಇಲ್ಲಿದೆ.
ಮೇಲ್ದರ್ಜೆಗೇರಲಿರುವ ರಾಜ್ಯ 55 ರೈಲು ನಿಲ್ದಾಣಗಳ ಪಟ್ಟಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ನಿಲ್ದಾಣ), ಬೆಂಗಳೂರು ಕ್ಯಾಂಟ್, ಬಂಗಾರಪೇಟೆ, ಬಂಟವಾಳ, ಕೆಂಗೇರಿ, ಕೊಪ್ಪಳ, ಬೆಳಗಾವಿ, ಬೀದರ್, ಬಿಜಾಪುರ, ಚಾಮರಾಜನಗರ, ಚನ್ನಪಟ್ಟಣ, ಆಲಮಟ್ಟಿ, ಅಳ್ನಾವರ, ಯಾದಗಿರಿ, ಯಶವಂತಪುರ, ಮಾಲೂರು, ಬಾಗಲಕೋಟೆ, ಅರಸೀಕೆರೆ ಜಂಕ್ಷನ್, ವೈಟ್‌ಫೀಲ್ಡ್, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಗಂಗಾಪುರ ರಸ್ತೆ, ಘಟಪ್ರಭಾ, ಗೋಕಾಕ್ ರಸ್ತೆ, ಹರಿಹರ.
ಹಾಸನ, ಹೊಸಪೇಟೆ, ಕಲಬುರಗಿ, ಮೈಸೂರು, ರಾಯಚೂರು, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್, ಕೃಷ್ಣರಾಜಪುರ, ಮಲ್ಲೇಶ್ವರಂ, ಚನ್ನಸಂದ್ರ, ಚಿಕ್ಕಮಗಳೂರು, ಮುನಿರಾಬಾದ್, ಸಾಗರ ಜಂಬಗಾರು, ರಾಣಿಬೆನ್ನೂರು, ರಾಮನಗರ, ಸಕಲೇಶಪುರ, ಶಹಾಬಾದ್, ಶಿವಮೊಗ್ಗ ಟೌನ್, ಮಂಗಳೂರು ಜಂಕ್ಷನ್, ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ, ತಿಪಟೂರು, ತುಮಕೂರು, ವಾಡಿ, ಮಂಡ್ಯ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳು ಯೋಜನೆಯಡಿ ಅಭಿವೃದ್ಧಿಗೊಳ್ಳಲಿವೆ.











Click it and Unblock the Notifications