ಜೂ.24ರ ಕೊರೊನಾ ವೈರಸ್ ಅಪ್ ಡೇಟ್; ನಾಲ್ಕು ಜಿಲ್ಲೆಗಳ ವರದಿ...
ಬೆಂಗಳೂರು, ಜೂನ್ 24 : ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇಂದು ಹೊಸದಾಗಿ 397 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿಕೆಯಾಗಿದ್ದು, ಈವರೆಗೆ 164 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ.
ಕೊರೊನಾ ವೈರಸ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಇಂದು 149 ಜನರು ಬಿಡುಗಡೆಯಾಗಿದ್ದಾರೆ. ದಾವಣಗೆರೆಯಲ್ಲಿ ಇಂದು 8 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಮೂರು ಜನ ಮಕ್ಕಳು ಸೇರಿದಂತೆ 8 ಜನರಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿಯಲ್ಲದೇ ದಾವಣಗೆರೆಗೂ ಜಿಂದಾಲ್ ಸೋಂಕಿನ ನಂಟು ಇರುವುದಾಗಿ ತಿಳಿದುಬಂದಿದೆ. ನಾಲ್ಕು ಜಿಲ್ಲೆಗಳ ಕೊರೊನಾ ವೈರಸ್ ಪ್ರಕರಣಗಳ ವರದಿ ಇಲ್ಲಿದೆ...
Recommended Video

ದಾವಣಗೆರೆಯಲ್ಲೂ ಜಿಂದಾಲ್ ನಂಟು
ದಾವಣಗೆರೆಯಲ್ಲಿ ಇಂದು ಎಂಟು ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ದಾವಣಗೆರೆಗೂ ಬಳ್ಳಾರಿ ಜಿಂದಾಲ್ ನ ವೈರಸ್ ನಂಟು ಅಂಟುಕೊಂಡಿದೆ. ಬಳ್ಳಾರಿ (ಜಿಂದಾಲ್) ನಿಂದ ಬಂದ 35 ವರ್ಷದ ಮಹಿಳೆ ಹಾಗೂ 10 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇದೀಗ 41 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ.

ಬಳ್ಳಾರಿಯಲ್ಲಿ ಬ್ಯಾಂಕ್ ಮ್ಯಾನೇಜರ್ ತಂದ ಆಪತ್ತು
ಬಳ್ಳಾರಿಯಲ್ಲಿ ಬ್ಯಾಂಕ್ ಮ್ಯಾನೇಜರ್ ನಿರ್ಲಕ್ಷ್ಯ ಆತಂಕ ತಂದಿದೆ. ಕೊವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದ ಈ ವ್ಯಕ್ತಿಯು ವರದಿ ಬರದೇ ಇದ್ದರೂ ಕೆಲಸಕ್ಕೆ ಹಾಜರಾಗುವ ಮೂಲಕ ಬ್ಯಾಂಕ್ ಗ್ರಾಹಕರಲ್ಲೂ ಆತಂಕ ಮೂಡಿಸಿದ್ದಾರೆ. ಬಳ್ಳಾರಿಯ ಜಿಲ್ಲೆಯ ಸಿರುಗುಪ್ಪದಲ್ಲಿ ಬ್ಯಾಂಕ್ ನ ಮ್ಯಾನೇಜರ್ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಆರೋಗ್ಯ ಇಲಾಖೆ ವರದಿ ಕೊಡುವ ಮುಂಚೆಯೇ ಕೆಲಸಕ್ಕೆ ಹಾಜರಾಗಿದ್ದಾರೆ. ಇವರಿಗೆ ಮೂರು ದಿನಗಳ ಹಿಂದೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಆದರೆ ಈ ಮೂರು ದಿನಗಳ ಅಂತರದಲ್ಲಿ ಬ್ಯಾಂಕ್ ಅಧ್ಯಕ್ಷನ ಮಗನ ಜೊತೆಯಲ್ಲಿ ಬೆಂಗಳೂರು ಸುತ್ತಿ ಬಂದಿದ್ದರು. ಜೊತೆಗೆ ಕೆಲಸಕ್ಕೆ ಹಾಜರಾಗಿದ್ದರು. ಇದೀಗ ಅವರ ವರದಿ ಪಾಸಿಟಿವ್ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬ್ಯಾಂಕ್ ನ 5 ಕೆಲಸಗಾರರನ್ನು ಕ್ವಾರೆಂಟೈನ್ ಮಾಡಲಾಗಿದೆ. ಬ್ಯಾಂಕ್ ಅನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದಾರೆ.

ಕೋಲಾರದ ವಿದ್ಯಾರ್ಥಿನಿಯಲ್ಲಿ ಸೋಂಕಿನ ಲಕ್ಷಣ
ನಾಳೆ SSLC ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯಲ್ಲಿ ಇಂದು ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಎನ್.ಜಿ ಹೊಸ್ಕೂರು ಗ್ರಾಮದ ವಿದ್ಯಾರ್ಥಿನಿಗೆ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದೆ. ಜೊತೆಗೆ ವಿದ್ಯಾರ್ಥಿನಿ ಜೊತೆ ಅದೇ ಗ್ರಾಮದ ನಾಲ್ಕು ಜನರು ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಸೋಂಕಿನ ಲಕ್ಷಣಗಳು ಕಂಡುಬಂದಿರುವ ವಿದ್ಯಾರ್ಥಿನಿಗೆ ಪರೀಕ್ಷೆ ಕೊಡದಿರಲು ನಿರ್ಧಾರ ಮಾಡಲಾಗಿದೆ ಎಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು 40ಕ್ಕೂ ಹೆಚ್ಚು ಜನರಿಗೆ ಕ್ವಾರಂಟೈನ್
ಬೆಂಗಳೂರಿನಿಂದ ಹಿಂದಿರುಗಿದ ಇಂಜಿನಿಯರ್ ನಿಂದ ಚಿಕ್ಕಮಗಳೂರಿನಲ್ಲಿ ವೈರಸ್ ಹರಡುವ ಭೀತಿ ಎದುರಾಗಿದೆ. ಈತನಿಂದ ಇಬ್ಬರು ಸರ್ಕಾರಿ ವೈದ್ಯರು, ಓರ್ವ ಖಾಸಗಿ ವೈದ್ಯ, ನರ್ಸ್ ಗಳು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 40ಕ್ಕೂ ಹೆಚ್ಚು ಜನರಿಗೆ ಕ್ವಾರಂಟೈನ್ ವಿಧಿಸಲಾಗಿದೆ. ಸೋಂಕಿತನ ಶುಶ್ರೂಷೆ ಮಾಡಿದ್ದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಇಂದು ಬಿಡುಗಡೆಯಾಗಿದ್ದಾರೆ. ನಗರದ ಹೊಸಮನೆ ಬಡಾವಣೆ, ಕುವೆಂಪುನಗರವನ್ನು ಸೀಲ್ ಡೌನ್ ಬೇಡ ಎಂಬ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ.












Click it and Unblock the Notifications