ಬಡ್ಡಿ ಚನ್ನಪ್ಪನಿಂದ ಸಾಲ ಪಡೆದು ದೇವೇಗೌಡರು ಕೊಟ್ಟಿದ್ದು ಯಾರಿಗೆ?
ಬೆಂಗಳೂರು, ಮಾ. 16: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 2004ರಲ್ಲಿ ರಾಜಾಜಿನಗರದ ಬಡ್ಡಿ ಚನ್ನಪ್ಪನಿಂದ ಬಡ್ಡಿಗೆ 5-10 ಲಕ್ಷ ರೂ. ಸಾಲ ತಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚಕ್ಕೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುರಿತು ಕುತೂಹಲದ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊರಹಾಕಿದ್ದಾರೆ.
ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ನಡೆಯುತ್ತಿರುವ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆಯ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.
ನಾನು ದೇವೇಗೌಡರಂತಲ್ಲ. ನಾನು ರಾಜಕೀಯದಲ್ಲಿ ಕೊಟ್ಟಿದ್ದೇನೆ ತೆಗೆದುಕೊಂಡಿದ್ದೇನೆ. ಆದರೆ ಆಸ್ತಿ ಮಾಡಿಲ್ಲ. ಜನರ ಪ್ರೀತಿಯ ಆಸ್ತಿ ಸಂಪಾದಿಸಿದ್ದೇನೆ ಎಂದು ಸದನದ ಸದಸ್ಯರಿಗೆ ದೇವೇಗೌಡರ ಪ್ರಾಮಾಣಿಕತೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿಕೊಟ್ಟರು.

ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ ಎಂದ ಎಚ್‌ಡಿಕೆ
ಡಾಕ್ಟರ್ ಮಗ ಡಾಕ್ಟರ್, ನ್ಯಾಯಾಧೀಶರ ಮಗ ನ್ಯಾಯಾಧೀಶ ಆಗಬೇಕು ಅಂತಾರೆ. ಈಗ ರಾಜಕಾರಣಿ ಮಗ ರಾಜಕಾರಣಿ ಆಗಬೇಕು ಅಂತ ಹೇಳುವ ಕಾಲ ಬಂದಿದೆ ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಸಿನಿಮಾ ರಂಗದಲ್ಲಿ ಇದ್ದೆ. ರಾಜಕೀಯಕ್ಕೆ ಬಂದ ಮೇಲೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ. ಜನ ಬಯಸಿದರೆ ಮಾತ್ರ ರಾಜಕೀಯಕ್ಕೆ ಬರಬಹುದು, ಮುಂದುವರಿಯಬಹುದು. ಇಂದಿನ ಚುನಾವಣೆ ಎಲ್ಲಿಗೆ ಬಂದಿದೆ ಎಂದು ಎಲ್ಲವನ್ನು ಓಪನ್ ಆಗಿ ಮಾತಾಡೋಕೆ ಆಗಲ್ಲ. ಶಾಸಕ ಯತ್ನಾಳ್ ಅವರು ಸಾವಿರಾರು ಕೋಟಿ ಲೂಟಿ ಮಾಡಿದ್ರಿ ಅಂತಾರೆ. ದೇವೇಗೌಡರು ಬಡ್ಡಿ ಸಾಲ ತಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚಕ್ಕೆ ದುಡ್ಡು ಹೊಂದಿಸಿದ್ದರು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಚರ್ಚೆ ಸಂದರ್ಭದಲ್ಲಿ ಹೇಳಿದ್ರು.

ಪಕ್ಷಾಂತರ ನಿಷೇಧ ಕಾಯ್ದೆ ಇರುವುದಾದ್ರು ಯಾಕೆ?
ಶಾಸಕರನ್ನು ಸಭಾಧ್ಯಕ್ಷರು ಅನರ್ಹಗೊಳಿಸಿದ್ದು ತಪ್ಪು ಎಂದಾದರೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವುದಾದರೂ ಏಕೆ ಎಂದು ಎಚ್‌ಡಿಕೆ ಚರ್ಚೆ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ರು. ಸಭಾಧ್ಯಕ್ಷರ ಸ್ಥಾನದಲ್ಲಿ ಕೂತು ರಮೇಶ್ ಕುಮಾರ್ ಕೈಗೊಂಡ ತೀರ್ಪಿನ ಬಗ್ಗೆ ಸುಪ್ರಿಂ ಕೋರ್ಟ್ ಏನು ಹೇಳಿದೆ? ಅದೇ ರೀತಿ 2010ರಲ್ಲಿ ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿದ ಸಂದರ್ಭದಲ್ಲಿ ಇದೇ ವಿಧಾನಸಭೆಯಲ್ಲಿ ಏನೆಲ್ಲಾ ಘಟನಾವಳಿಗಳಾದವು? ಗೂಳಿಹಟ್ಟಿ ಶೇಖರ್ ಮೇಜಿನ ಮೇಲೆ ಹತ್ತಿ ನಿಂತು ಏನು ಮಾಡಿದ್ರು ಎಂದು ನೋಡಿದ್ದೇವೆ. ಮುಂದಿನ ದಿನಗಳಲ್ಲಿ 150 ಸ್ಥಾನಗಳನ್ನು ಗೆದ್ದರೂ ಸ್ಥಿರ ಸರ್ಕಾರ ನೀಡುವ ಪರಿಸ್ಥಿತಿ ಇಲ್ಲ. ನಮ್ಮ ರಾಜ್ಯದಲ್ಲಿ ಆಗಿದ್ದೇ ಇನ್ನೂ ಒಂದೆರಡು ರಾಜ್ಯಗಳಲ್ಲಿ ಆಗುತ್ತಿದೆ. ನಾನು ಮನಸ್ಸು ಮಾಡಿದ್ದಿದ್ದರೆ ಬಿಜೆಪಿ ಶಾಸಕರನ್ನೇ ಖರೀದಿ ಮಾಡಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಆದರೆ ಬೇಡ ಎಂದು ಸುಮ್ಮನಾದೆವು ಎಂದು ಎಚ್‌ಡಿಕೆ ಮಾತನಾಡಿದ್ರು.

ಒಂದು ಬಾರಿ ಓದಿದ್ರೆ ನಮ್ಮ ಸಂವಿಧಾನ ಅರ್ಥ ಆಗಲ್ಲ
ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನಮ್ಮ ಸಂವಿಧಾನವನ್ನು ಒಂದು ಸಲ ಓದಿದ್ರೆ ಅರ್ಥವಾಗಲ್ಲ.ಪದೇ ಪದೇ ಓದಬೇಕು. ಸಂವಿಧಾನ ಅರ್ಥವಾಗಬೇಕಾದರೆ ದೇಶವನ್ನು ಅರ್ಥಮಾಡಿಕೊಂಡಿರಬೇಕು. ಯಾರು ದೇಶವನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರಿಂದ ಸಂವಿಧಾನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಜಂತರ್ ಮಂತರ್‌ನಲ್ಲಿ ಕೆಲವರು ಸಂವಿಧಾನ ಪ್ರತಿ ಸುಟ್ಟು ಹಾಕಿದ್ರು
ಜಂತರ್ ಮಂತರ್‌ನಲ್ಲಿ ಕೆಲವರು ಸಂವಿಧಾನ ಪ್ರತಿಯನ್ನೆ ಸುಟ್ಟು ಹಾಕಿದ್ರು. ಸಂವಿಧಾನ ಸಮಾನತೆಯನ್ನು ಕಲ್ಪಿಸಿಕೊಡುತ್ತದೆ ಎಂಬ ಕಾರಣಕ್ಕೆ ಅವರು ಸಂವಿಧಾನ ಸುಟ್ಟಿರಬಹುದು. ಒಬ್ಬರು ಮಂತ್ರಿ ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳಿದ್ರು. ಆದರೆ ಭಾರತ ಸಂವಿಧಾನ, ಅಮೇರಿಕಾ ಸಂವಿಧಾನದಂತೆ ಕಠಿಣ ಅಲ್ಲ, ಹೊಂದಿಕೊಳ್ಳುವ ಸಂವಿಧಾನ. ಆದರೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ತೀರ್ಪುಕೊಟ್ಟಿದೆ. ಅದರ ಪ್ರಕಾರ ಸಂವಿಧಾನದ ಮೂಲಸ್ವರೂಪವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಈ ವಿಷಯ ಆ ಮಂತ್ರಿಗೆ ಗೊತ್ತಿಲ್ಲ ಎನಿಸುತ್ತದೆ ಎಂದು ಸಂವಿಧಾನ ಬದಲಾವಣೆ ಮಾಡುವ ಮಾತುಗಳ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಮಾಡಿದ್ರು.












Click it and Unblock the Notifications