Dr.Nagareddy Patil: ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ್ ನಿಧನ
ಕಲಬುರಗಿ, ಮೇ 06: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕಲಬುರಗಿ ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕರಾದ ಡಾ. ನಾಗರೆಡ್ಡಿ ಪಾಟೀಲ್ (79) ಅವರು ಇಂದು ಬೆಳಗಿನ ಜಾವ 3 ಗಂಟೆಗೆ ಅವರು ಹೃದಯಾಘಾತದಿಂದ ನಿಧನರಾದರು.
ಹಿರಿಯ ಮುತ್ಸದ್ದಿ , ಶಿಕ್ಷಣ ಪ್ರೇಮಿ ಎನಿಸಿಕೊಂಡಿರುವ ಡಾ.ನಾಗರೆಡ್ಡಿ ಪಾಟೀಲ್ ಎರಡು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದರು. ಇನ್ನೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯರಾದ ನಾಗರೆಡ್ಡಿ ಅವರು ಪಕ್ಷ ಕಟ್ಟುವಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಿದ್ದಾರೆ. ನಾಗರೆಡ್ಡಿ ಅವರ ಪುತ್ರ ಶಿವಶರಣರೆಡ್ಡಿ ಪಾಟೀಲ್ ಸದ್ಯ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ನಾಗರೆಡ್ಡಿ ಅವರು ಸಹೋದರ ಮತ್ತು ಸಹೋದರಿಯರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಇಂದು ಮಧ್ಯಾನ್ಹ 3.30ಕ್ಕೆ ಸೇಡಂ ಪಟ್ಟಣದ ಆಶ್ರಯ ಕಾಲೋನಿ ಪಕ್ಕದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ. ನಾಗರೆಡ್ಡಿ ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಸೇಡಂ ನ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ನಾಗರೆಡ್ಡಿ ಪಾಟೀಲರು ಹಾಗೂ ತಾವು ಮೊದಲಬಾರಿ 1983 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದುದನ್ನು ಮುಖ್ಯಮಂತ್ರಿಯವರು ಸ್ಮರಿಸಿದ್ದಾರೆ.
ಪಾಟೀಲರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರು. ಅವರ ನಿಧನದಿಂದ ಒಬ್ಬ ಜನಾನುರಾಗಿ ಮುತ್ಸದ್ದಿ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಬಣ್ಣಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications