ರಾಜ್ಯಪಾಲರ ಭಾಷಣದಲ್ಲಿ ಗ್ಯಾರಂಟಿ ವರ್ಣನೆ: ಇದೊಂದು ಸುಳ್ಳಿನ ತುತ್ತೂರಿ ಎಂದ ಸಿ.ಟಿ ರವಿ
ಬೆಂಗಳೂರು, ಫೆಬ್ರವರಿ 12: ಇಂದು ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ನಡೆಸಿದ ಭಾಷಣದಲ್ಲಿ ರಾಜ್ಯ ಸರ್ಕಾರ ಗೌರವಾನ್ವಿತ ರಾಜ್ಯಪಾಲರಿಂದ ಸುಳ್ಳು ಹೇಳಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ ರವಿ ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಮುನ್ಸೂಚಿಯಾಗಬೇಕಾಗಿದ್ದ ಭಾಷಣವನ್ನು ದೇಶವನ್ನು ಮತ್ತೊಮ್ಮೆ ವಿಭಜಿಸುವ ಕಾಂಗ್ರೆಸ್ಸಿನ ಒಳ ಹುನ್ನಾರದ ಭಾಗವನ್ನಾಗಿ ಮಾಡಿರುವುದು ದುರಂತ ಎಂದಿದ್ದಾರೆ.

ಹಿಂದಿಗಿಂತ ಹೆಚ್ಚು ತೆರಿಗೆ ಹಣ ರಾಜ್ಯದ ಬೊಕ್ಕಸಕ್ಕೆ ಕೇಂದ್ರ ಸರ್ಕಾರದಿಂದ ಸಂದಾಯ ಮಾಡಿದರು ಅದನ್ನು ಮುಚ್ಚಿಟ್ಟು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಮಿಥ್ಯಾರೋಪ ಮಾಡಿರುವುದು ವಿಷಾದನೀಯ. ಐದು ಗ್ಯಾರೆಂಟಿಯಲ್ಲಿ ನಾಲ್ಕನ್ನು ಅರೆಬರೆ ಜಾರಿಗೆ ತಂದು, ಇನ್ನೊಂದನ್ನು ಕಡತದಲ್ಲಿಯೇ ಇಟ್ಟು, ಐದು ಗ್ಯಾರೆಂಟಿಗಳನ್ನು ನೀಡಿದ್ದೇವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದು ಸರ್ಕಾರಕ್ಕೆ ನಾಚಿಕೆಯ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು
ಕೇಂದ್ರ ಸರ್ಕಾರ ರಾಜ್ಯದಾದ್ಯಂತ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಚ್ಚಿಟ್ಟು, ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ರಾಜ್ಯಪಾಲರ ಭಾಷಣದ ಮೂಲಕ ಹೇಳಿಸಿ ಮತ್ತೊಂದು ಕೆಟ್ಟ ಪರಂಪರೆಗೆ ನಾಂದಿ ಹಾಕಿಸಲಾಗಿದೆ.
ಜಲಜೀವನ್ ಮಿಷನ್, ಸ್ಮಾರ್ಟ್ ಸಿಟಿ, ಕಿಸಾನ್ ಸಮ್ಮಾನ್, ಅಯುಷ್ಮಾನ್ ಮುಂತಾದ ಯೋಜನೆಗಳನ್ನು, DBTಉಪಕ್ರಮ, ನೂತನ ರೈಲು ಮಾರ್ಗಗಳು, ರೈಲು ಮಾರ್ಗಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ವಿಶೇಷ ಕಾರಿಡಾರ್‌ಗಳ ನಿರ್ಮಾಣ ಸೇರಿದಂತೆ ರಾಜ್ಯಕ್ಕೆ ದೊರಕುತ್ತಿರುವ ಯೋಜನೆಗಳ ಉಲ್ಲೇಖವನ್ನೂ ಮಾಡದೆ ಮರೆಮಾಚಿರುವುದು ಕಡೆಗೆ ಕೇಂದ್ರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ನೀಡುವುದು ನಮ್ಮ ಸರ್ಕಾರ ಹೇಳಿಸುವ ಕಾರ್ಯ ಮಾಡಿದ್ದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಆಡಳಿತದಲ್ಲಿ ಮಧ್ಯವರ್ತಿಗಳ ಕಾಟ ಯಾವ ರೀತಿ ಇದೆ ಎಂಬುದು ಕಾಂಗ್ರೆಸ್ಸಿನ ಮಾಜಿ ಮಂತ್ರಿ ಗಂಡಸಿ ಶಿವರಾಂ ಮತ್ತು ಗುತ್ತಿಗೆದಾರ ಸಂಘದ ಕೆಂಪಣ್ಣ ಹೇಳಿದ್ದಾರೆ. ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ಬಿಟ್ಟು , ರಾಜ್ಯದಲ್ಲಿ ಮಧ್ಯವರ್ತಿಗಳ ಕಾಟ ಇಲ್ಲ ಎಂದು ಹೇಳಿ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಬೇಕಾಗಿ ಬಂದದ್ದು ಮೇಲಿನ ಆರೋಪಗಳಿಗೆ ಮೌನಂ ಸಮ್ಮತಿ ಲಕ್ಷಣಂ ಎಂಬಂತಿದೆ. ರಾಜ್ಯದ ಅಭಿವೃದ್ಧಿ, ಯೋಜನೆ, ಭವಿಷ್ಯದ ದೃಷ್ಟಿಕೋನಗಳಿಗೆ ಮುನ್ಸೂಚಿಯಾಗಬೇಕಿದ್ದ ರಾಜ್ಯಪಾಲರ ಭಾಷಣ ರಾಜ್ಯ ಸರ್ಕಾರದ ಅಜೆಂಡಾ ಪೊಲಿಟಿಕ್ಸ್‌ಗೆ ಬಲಿಯಾಗಿದ್ದು ದುರಂತವಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.












Click it and Unblock the Notifications