ಡಿ.ಕೆ.ಶಿವಕುಮಾರ್ ಸಿಎಂ ಆಗುವುದಾದರೆ ಸಂಪೂರ್ಣ ಬೆಂಬಲ ಎಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ!
ಕರ್ನಾಟಕ ರಾಜಕಾರಣದಲ್ಲಿ ಸಂಚಲನದ ಸುದ್ದಿಗಳು ಮುಂದುವರಿದಿವೆ. ಅದ್ರಲ್ಲೂ ಹಾಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಪಕ್ಷದ ಒಳಗೆ ನೂರಾರು ಸಮಸ್ಯೆ ಭುಗಿಲೇಳುತ್ತಿವೆ. ಇನ್ನು ಕಾಂಗ್ರೆಸ್ ಶಾಸಕರು & ಸಚಿವರು ನೀಡುತ್ತಿರುವ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವು ತರಿಸುತ್ತಿದೆ. ಹೀಗೆ ಸಿಎಂ ಖುರ್ಚಿ ವಿಚಾರಕ್ಕೆ ಕಾಂಗ್ರೆಸ್ ಕಿರಿಕಿರಿ ಜೋರಾಗಿರುವ ಸಮಯದಲ್ಲೇ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಈಗ ಭರ್ಜರಿ ಆಫರ್ ಕೊಟ್ಟಿದ್ದಾರೆ.
ಹೌದು, ಈ ಸುದ್ದಿ ಸರ್ಪ್ರೈಸ್ ಅನಿಸಿದರೂ ನಿಜ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಹೀಗೆ ಭರ್ಜರಿ ಆಫರ್ ನೀಡಿದ್ದಾರೆ. ಪದೆ ಪದೆ ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಅಂತಾ ಹೇಳುತ್ತಿದ್ದಾರೆ, ಅಕಸ್ಮಾತ್ ಡಿಸಿಎಂ ಡಿ.ಕೆ.ಶಿವಕುಮಾರ್ ನಾಳೆಯೇ ಸಿಎಂ ಆಗುತ್ತಾರೆ ಅಂತಾ ಹೇಳಿದರೆ ಜೆಡಿಎಸ್ ಪಕ್ಷದ 19 ಶಾಸಕರ ಬೆಂಬಲವನ್ನು ನಾನೇ ಕೊಡಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಟೆಂಪ್ರವರಿ ಸಿಎಂ & ಡೂಪ್ಲಿಕೇಟ್ ಸಿಎಂ?
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಅಲ್ಲದೆ ಇದೇ ಸಮಯದಲ್ಲಿ, ಆಪರೇಷನ್ ಹಸ್ತದ ಬಗ್ಗೆಯೂ ಪರೋಕ್ಷವಾಗಿ ಗುಡುಗಿದರು. ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಷ್ಟು ಜನ ಸಿಎಂ ಆಗುತ್ತಾರೆ ಗೊತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಈ ಸರ್ಕಾರಕ್ಕೆ ಒಂದು ಹೆಸರು ಇಡಬಹುದು. ಟಿಸಿಎಂ ಮತ್ತು ಡಿಸಿಎಂ ಸರ್ಕಾರ ಎಂದು ಕರೆಯಬಹುದು. ಟಿಸಿಎಂ ಅಂದರೆ ಟೆಂಪ್ರವರಿ ಸಿಎಂ & ಡಿಸಿಎಂ ಅಂದರೆ ಡೂಪ್ಲಿಕೇಟ್ ಸಿಎಂ ಅಂತಾ ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಕರ್ನಾಟಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ವಿರುದ್ಧವೂ ಕುಮಾರಸ್ವಾಮಿ ಗರಂ
ಇದೇ ವೇಳೆ ಹಾಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಗರಂ ಆದ ಮಾಜಿ ಸಿಎಂ HDK, ಸಿಎಂ ಸಿದ್ದರಾಮಯ್ಯ ಗದಗ ಜಿಲ್ಲೆಗೆ ಹೋಗಿ ಡಾನ್ಸ್ ಮಾಡಿ ಬಂದಿದ್ದಾರೆ. ಆ ಜಿಲ್ಲೆಯಲ್ಲಿ ಬರ ಇದೆ, ಏನು ಪರಿಹಾರ ಕೊಟ್ಟು ಬಂದಿದ್ದೀರಿ? ಗ್ಯಾರಂಟಿ ಕಾರ್ಯಕ್ರಮಕ್ಕಾಗಿ ಕೇಂದ್ರ ಯೋಜನೆ ನಿಲ್ಲಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ರೈತರು ಬೆಳೆದಿದ್ದ ಭತ್ತ ಒಣಗಿ ಹೋಗಿದೆ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಪೂರ್ಣ ನಾಶವಾಗಿದೆ. ಬಿಜೆಪಿ ಲೀಡರ್ ಲೆಸ್ & ಜೆಡಿಎಸ್ ಪೀಪಲ್ ಲೆಸ್ ಎಂದಿದ್ದಾರೆ. ಯಾವುದು ಪೀಪಲ್ ಲೆಸ್ ಅಂತಾ ಮುಂದೆ ಎಲ್ಲವೂ ಗೊತ್ತಾಗುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.

ಬರ ಪರಿಹಾರ ವಿಚಾರದಲ್ಲೂ ಆಕ್ರೋಶ
ಹಾಗೇ ರಾಜ್ಯದ ಬರ ಪರಿಹಾರ ವಿಚಾರವನ್ನೂ ಪ್ರಸ್ತಾಪ ಮಾಡಿದ ಮಾಜಿ ಸಿಎಂ ಎಚ್‌ಡಿಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಗರಂ ಆದರು. ಮುಂಗಾರು ಕೊರತೆಯಿಂದ 60 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಜಿಲ್ಲಾ ಪ್ರವಾಸ ಮಾಡಿ ಸಿಎಂ, ಸಚಿವರು ಕೂಡ ವರದಿ ಕೊಟ್ಟಿದ್ದಾರೆ. ಬರಪರಿಹಾರ ಕೊಡಿಸಿ ಎಂದು ಬಿಜೆಪಿಯವರಿಗೆ ಸಿಎಂ ಹೇಳಿದ್ದಾರೆ. ಕೇಂದ್ರ ಬರ ಅಧ್ಯಯನ ತಂಡ ಕೂಡ ವರದಿ ಪಡೆದು ಹೋಗಿದೆ. 17 ಸಾವಿರ ಕೋಟಿ ರೂ. ಬರ ಪರಿಹಾರ ಹಣಕ್ಕೆ ಮನವಿ ಮಾಡಿದ್ದಾರೆ. ಆದರೆ ಇವರು ಕೇಳಿದಷ್ಟು ನೆರವು, ರಾಜ್ಯಕ್ಕೆ ಈವರೆಗೆ ಎಂದೂ ಬಂದಿಲ್ಲ ಎಂದಿದ್ದಾರೆ ಎಚ್‌ಡಿಕೆ. ಈ ಮೂಲಕ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ ಹೊರಹಾಕಿದ್ದಾರೆ.
ಒಟ್ನಲ್ಲಿ ರಾಜ್ಯದಲ್ಲಿ ಸಿಎಂ & ಡಿಸಿಎಂ ಸ್ಥಾನಕ್ಕೆ ಕಿರಿಕ್ ಜೋರಾಗಿರುವ ಸಮಯದಲ್ಲಿ, ಈ ರೀತಿ ಕುಮಾರಸ್ವಾಮಿ ಅವರು ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಮುಂದೆ ಇದಕ್ಕೆ ಕಾಂಗ್ರೆಸ್ ನಾಯಕರು ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ? ಅಂತಾ ಕಾದು ನೋಡಬೇಕಿದೆ. ಅಲ್ಲದೆ ಇದೇ ವಿಚಾರ ಇಟ್ಟುಕೊಂಡು, ಬಿಜೆಪಿ + ಜೆಡಿಎಸ್ VS ಕಾಂಗ್ರೆಸ್ ಫೈಟ್ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಹೊಸ ಕಿಚ್ಚು ಹೊತ್ತಿಸುವ ನಿರೀಕ್ಷೆ ಕೂಡ ಹಬ್ಬಿದೆ.












Click it and Unblock the Notifications