ಬಿಎಸ್ವೈ ಕಾಲ್ಗುಣ ಸ್ವಲ್ಪ ಜಾಸ್ತಿಯಾಯಿತು: ಸದನದಲ್ಲಿ ಎಚ್ಡಿಕೆ ಕಾಮಿಡಿ ಪಂಚ್
ಬೆಂಗಳೂರು, ಅ 11: ಮೂರು ದಿನಗಳ ಚಳಿಗಾಲದ ಅಸೆಂಬ್ಲಿ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲೆಳೆದಿದ್ದಾರೆ.
"ನನ್ನ ಬಿಜೆಪಿ ಮಿತ್ರರು ಹೇಳುತ್ತಿದ್ದರು, ಯಡಿಯೂರಪ್ಪನವರ ಕಾಲ್ಗುಣ ಚೆನ್ನಾಗಿದೆ. ರಾಜ್ಯದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು. ಆದರೆ, ಉತ್ತರ ಕರ್ನಾಟಕದ ಪ್ರವಾಹದ ನಂತರ, ನನಗನಿಸಿದ್ದು, ಅವರ ಕಾಲ್ಗುಣ ಸ್ವಲ್ಪ ಜಾಸ್ತಿ ಆಯಿತೇನೋ" ಎಂದು ಕುಮಾರಸ್ವಾಮಿ ಸದನದಲ್ಲಿ ಲೇವಡಿ ಮಾಡಿದ್ದಾರೆ.
"ಬರ ಪರಿಹಾರ ಅತ್ಯಂತ ಸೂಕ್ಷ್ಮ ವಿಚಾರ. ನಾವು, ನೀವು ಎಲ್ಲಾ ರಾಜಕೀಯ ಮಾಡೋಣ. ಆದರೆ, ಅದು ಇಲ್ಲಿ ಅಲ್ಲ. ಸದನವನ್ನು ಜನರ ಸಮಸ್ಯೆಗೆ ಮೀಸಲಿಡೋಣ" ಎಂದು ಕುಮಾರಸ್ವಾಮಿ ಮನವಿ ಮಾಡಿದರು.

"ಕಷ್ಟದಲ್ಲಿರುವ ಜನರಿಗೆ ಆತ್ಮಸ್ಥೈರ್ಯ ತುಂಬ ಬೇಕಾದ ಯಡಿಯೂರಪ್ಪನವರು, ಖಜಾನೆ ಖಾಲಿಯಾಗಿದೆ, ಲೂಟಿ ಹೊಡೆದಿದ್ದಾರೆ ಎನ್ನುವ ಸುಳ್ಳುಕಥೆಯನ್ನು ಹೇಳುತ್ತಿದ್ದಾರೆ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
"ಯಡಿಯೂರಪ್ಪನವರೇ, ನಿಮ್ಮ ಬಗ್ಗೆ ನನಗೆ ಏನೂ ಬೇಸರವಿಲ್ಲ. ಹೋರಾಟದಿಂದ ಬಂದವರು ನೀವು. ಬಡವರ ಬಗ್ಗೆ ಕಾಳಜಿಯಿದ್ದವರು. ಅತಿವೃಷ್ಟಿಯಿಂದ ಆಗಬಾರದ್ದು ಆಗಿಹೋಗಿದೆ. ಇದಕ್ಕೆ ಮುಖ್ಯಮಂತ್ರಿಯಾಗಿ ಸರಿಯಾಗಿ ಸ್ಪಂದಿಸಿ" ಎಂದು ಕುಮಾರಸ್ವಾಮಿ ಮನವಿ ಮಾಡಿದರು.
"ನಾನು ಸಿಎಂ ಆಗಿದ್ದಾಗ, ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಎಂದು ಬೇಧಬಾವ ಮಾಡಿಲ್ಲ. ಬೆಳೆವಿಮೆಯ ವಿಚಾರದಲ್ಲಿ ರೈತರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ, ಇದು ವಾಸ್ತವತೆ. ಇಂತಹ ಸಂದರ್ಭದಲ್ಲಿ ಹೃದಯ ವೈಶಾಲ್ಯತೆ ಮೆರೆಯಿರಿ ಎನ್ನುವುದು ನನ್ನ ಮನವಿ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications