ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಸಾಲವೆಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು, ನವೆಂಬರ್ 13: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ಹಾಗೂ ಆರೋಪಗಳನ್ನ ಮಾಡಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಸಾಲದ ಕುರಿತು ಪ್ರಸ್ತಾಪಿಸಿದ್ದಾರೆ.
ಹೌದು, ಈ ಕುರಿತು ಮಾತನಾಡಿದ ಅವರು, ತೆಲಂಗಾಣದಲ್ಲಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಅವರು ಚಾಲೆಂಜ್ ಮಾಡಿದ್ದಾರೆ. ನನ್ನ ಹೆಸರು ಕೇಳಿದರೆ ಅವರಿಗೆ ಭಯ, ಸಾಲದಿಂದ ದೇಶ ದಿವಾಳಿಯಾಗಿದೆ ಎಂದಿದ್ದಾರೆ. ಆದರೆ, ಇವರ ಸರಕಾರದಲ್ಲಿ ಏನಾಗಿದೆ? ಎಷ್ಟು ಸಾಲ ಮಾಡಿದ್ದಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಈಗ 85,815 ಕೋಟಿ ರೂ. ಸಾಲ ಮಾಡಲು ಹೊರಟಿದ್ದಾರೆ. ನನ್ನ 20 ತಿಂಗಳ ಆಡಳಿತದಲ್ಲಿ 3,500 ಕೋಟಿ ಸಾಲ ಮಾಡಲಾಗಿತ್ತು. ಕಳೆದ 12 ವರ್ಷದಲ್ಲಿ ಇದ್ದ ಸರಕಾರಗಳು 1 ಲಕ್ಷ ಕೋಟಿ ಸಾಲ ಮಾಡಿವೆ. ಹಿಂದೆ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ 2,45,000 ಕೋಟಿ ರೂ. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ಇವರಿಗೆ ಯಾವ ನಿಮಗೆ ಯಾವ ನೈತಿಕತೆ ಇದೆ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಈಗ ರಾಜ್ಯದ ಸಾಲ ಪ್ರಮಾಣ 5,71,600 ಕೋಟಿ ರೂ.ಗಳಷ್ಟಿದೆ. ಹೊಸದಾಗಿ ಇವರು ಬಜೆಟ್ʼನಲ್ಲಿ 85,815 ಕೋಟಿ ರೂ. ಸಾಲದ ಗುರಿ ಇಟ್ಟುಕೊಂಡಿದ್ದಾರೆ. ಪ್ರತೀ ವರ್ಷ 56,000 ಕೋಟಿ ರೂ. ಬಡ್ಡಿ ಕಟ್ಟಬೇಕು ಎಂದು ಸ್ವತಃ ಸಿಎಂ ಹೇಳಿದ್ದಾರೆ. ನಿಮ್ಮ ಸರ್ಕಾರದ ಅಧಿಕಾರಿಗಳೇ ರಾಜ್ಯದ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎನ್ನುತ್ತಿದ್ದಾರೆ. ಇದನ್ನೇ ತೆಲಂಗಾಣಕ್ಕೆ, ಇನ್ನಿತರೆ ರಾಜ್ಯಗಳಿಗೆ ವಿಸ್ತರಿಸುತ್ತೀರಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ಧಾರೆ.
ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದರೂ ಕಪ್ಪುಹಣಕ್ಕೆ ಕೊರತೆ ಇಲ್ಲ, ಕಲೆಕ್ಷನ್ನಿಗೂ ಸಮಸ್ಯೆ ಇಲ್ಲ. ಖಜಾನೆಯಲ್ಲಿ ದುಡ್ಡಿಲ್ಲ, ಅದರೆ ಆಯ್ದ ವ್ಯಕ್ತಿಗಳ ಮನೆಯಲ್ಲಿ ದುಡ್ಡಿದೆ. ಮೊನ್ನೆಯ ಐಟಿ ದಾಳಿಯಲ್ಲಿ ಯಾರಯಾರ ಮನೆಯಲ್ಲಿ ಎಷ್ಟೆಷ್ಟು ಕೋಟಿ ಹಣ ಸಿಕ್ಕಿತು ಎನ್ನುವುದನ್ನು ಜನ ನೋಡಿದ್ದಾರೆ. ಕರ್ನಾಟಕದ ದುಡ್ಡಿನಲ್ಲಿ ಕಾಂಗ್ರೆಸ್ ಪಕ್ಷ ಐದು ರಾಜ್ಯಗಳ ಚುನಾವಣೆ ನಡೆಸುತ್ತಿದೆ. ಇದು ಸತ್ಯ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚು ಹಣ ಕೊಡುತ್ತಾರೆ ಅವರು ಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಯಾರು ಕೊಡುವುದಿಲ್ಲವೋ ಅವರು ಮಂತ್ರಿಗಳಾಗಿರೋದಿಲ್ಲ. ಹಣ ಕೊಟ್ಟವರಿಗೆ ಅಧಿಕಾರ ಇರುತ್ತದೆ. ಇಲ್ಲಿ ಅಧಿಕಾರ ಹಂಚಿಕೆ ಎನ್ನುವುದು ಇಲ್ಲವೇ ಇಲ್ಲ. ಹಣ ಕೊಟ್ಟವರಿಗೆ ಅಧಿಕಾರ ಅಷ್ಟೇ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಇದನ್ನೇ ಹೇಳಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯದ ನಾಯಕರು ತೆಲಂಗಾಣದಲ್ಲಿ 200 ಯುನಿಟ್ ಬಗ್ಗೆ ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಕರ್ನಾಟಕದ ಪರಿಸ್ಥಿತಿ ಏನಿದೆ ಎನ್ನುವುದ ಐದೂ ರಾಜ್ಯಗಳ ಜನರಿಗೆ ಹೇಳಬೇಕಿದೆ. ಕರ್ನಾಟಕ ಈಗ ಕಗ್ಗತ್ತಲ ಕರ್ನಾಟಕ ಆಗಿದೆ. ಫ್ರೀ ವಿದ್ಯುತ್ ಎಂದು ಹೇಳಿ ಏಕಾಏಕಿ ದರ ಏರಿಕೆ ಮಾಡಿದರು. ಕಳೆ ಐದು ತಿಂಗಳಲ್ಲಿ ರಾಜ್ಯ ಕಗ್ಗತ್ತಲಲ್ಲಿದೆ. ಅಧಿಕಾರಿಗಳು, ಸಚಿವರು ಮೊಬೈಲ್ ಲೈಟ್ ಹಾಕಿಕೊಂಡು ಸಭೆ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೊದಲು "ಮಹಾದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ.., ಕಾಕಾ ಪಾಟೀಲ್ ನಿಂಗೂ ಫ್ರೀ" ಎಂದು ಇವರು ಭಾಷಣ ಮಾಡಿದ್ದರು. ಈಗ ನೋಡಿದರೆ "ಮಹಾದೇವಪ್ಪ ನಿಂಗೂ ಕತ್ತಲು ಫ್ರೀ, ನಂಗೂ ಕತ್ತಲು ಫ್ರೀ.., ಕಾಕಾ ಪಾಟೀಲ್ ನಿಂಗೂ ಕತ್ತಲು ಫ್ರೀ" ಎನ್ನುವಂಥ ದುಸ್ಥಿತಿ ಸೃಷ್ಟಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.












Click it and Unblock the Notifications