Siddaramaiah: ಕಾವೇರಿ ನಿವಾಸವೇ ಸಿಎಂಗಳಿಗೆ ಅದೃಷ್ಟದ ನಿವಾಸ ಯಾಕೆ!? ಕಾವೇರಿಗೆ ಸಿದ್ದು ಶಿಫ್ಟ್! ಬಿಎಸ್ವೈ ವಾಸ್ತವ್ಯ ಎಲ್ಲಿ?
ಬೆಂಗಳೂರು, ಜೂನ್ 02: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಕಾವೇರಿ ನಿವಾಸವನ್ನು ಖಾಲಿ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದ ಕುಮಾರ ಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಕಾವೇರಿಯನ್ನು ಮಾಜಿ ಸಿಎಂ ಯಡಿಯೂರಪ್ಪ ತೊರೆದಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನಿವಾಸದಲ್ಲಿ ವಾಸ್ತವ್ಯವಾಗಿದ್ದು, ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿಯೂ ಕಾವೇರಿಯಲ್ಲೇ ಯಡಿಯೂರಪ್ಪ ಅವರು ವಾಸ್ತವ್ಯ ಹೂಡಿದ್ದರು.

ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸವನ್ನು ತೊರೆದಿದ್ದು, ತಮ್ಮ ಖಾಸಗಿ ನಿವಾಸವಾದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಧವಳಗಿರಿ ನಿವಾಸಕ್ಕೆ ಶಿಫ್ಟ್ ಆಗಿದ್ದು, ಸರ್ಕಾರದ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲ ದಿನಗಳಲ್ಲಿ ಶಿಫ್ಟ್ ಆಗಲಿದ್ದಾರೆ.
ಇನ್ನೂ ಕಾಂಗ್ರೆಸ್ ಸರ್ಕಾರ ರಚನೆಯಾದ 11 ದಿನಗಳಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾವೇರಿ ನಿವಾಸವನ್ನು ತೆರವು ಮಾಡಿದ್ದಾರೆ. ಇನ್ನೂ ಬಿಜೆಪಿ ನಾಯಕರ ರಾಜಕೀಯ ಚಟುವಟಿಕೆ ಕೇಂದ್ರವಾಗಿದ್ದ ಕಾವೇರಿ ನಿವಾಸವನ್ನ ಬಿಎಸ್‌ವೈ ತೊರೆದ ಹಿನ್ನೆಲೆಯಲ್ಲಿ ಧವಳಗಿರಿ ನಿವಾಸದಲ್ಲಿ ಇನ್ನೂ ಮುಂದೆ ರಾಜಕೀಯ ಚಟುವಟಿಕೆಗಳು ಹೆಚ್ಚಾಗಲಿದೆ. ಈ ಹಿಂದೆ ಸಿದ್ದರಾಮಯ್ಯ ಅವರಿಂದ ಯಡಿಯೂರಪ್ಪ ಪಾಲಾಗಿದ್ದ ಕಾವೇರಿ ಮತ್ತೆ ಇದೀಗ ಸಿದ್ದರಾಮಯ್ಯ ಕೈ ಸೇರಿದೆ.
ಕಾವೇರಿ ನಿವಾಸ ಅದೃಷ್ಟದ ನಿವಾಸ ಯಾಕೆ?
ಸಹಜವಾಗಿಯೇ ಕಾವೇರಿ ನಿವಾಸವನ್ನು ರಾಜಕೀಯ ವಲಯದಲ್ಲಿ ಅದೃಷ್ಟದ ನಿವಾಸ ಎಂದು ಕರೆಯಲಾಗುತ್ತಿದೆ. ಈ ಹಿಂದೆ 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಅವರು ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ.

ಇನ್ನೂ 2013ರಲ್ಲಿ ಸಿದ್ದರಾಮಯ್ಯ ಈ ಮನೆಯಲ್ಲಿಯೇ ಇದ್ದರು. 2019ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಯಡಿಯೂರಪ್ಪ ಈ ಮನೆಗೆ ತೆರಳಲು ಬಯಸಿದ್ದರು. ಆದರೆ ಸಿದ್ದರಾಮಯ್ಯ ಮನೆ ತೊರೆಯಲು ಒಪ್ಪಿರಲಿಲ್ಲ. ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವೆ ಕಾವೇರಿ ಜಟಾಪಟಿ ತಾರಕಕ್ಕೆ ಏರಿತ್ತು. ಕೊನೆಗೆ ಸಿದ್ದರಾಮಯ್ಯ ಕಾವೇರಿ ನಿವಾಸವನ್ನು ತೊರೆದಿದ್ದರು.
ಇನ್ನೂ ಕಾವೇರಿ ನಿವಾಸ ಅದೃಷ್ಟದ ನಿವಾಸ ಎಂದು ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರು ನಂಬಿದ್ದಾರೆ. ಸಿದ್ದರಾಮಯ್ಯರ ರಾಜಕೀಯ ಏಳಿಗೆಯಲ್ಲಿ ಈ ಮನೆ ಮಹತ್ವದ ಪಾತ್ರ ವಹಿಸಿದೆ.
ಕಾವೇರಿ ನಿವಾಸ ಮುಖ್ಯಮಂತ್ರಿಗಳ ಅಧಿಕೃತ ನಿವಾಸ. ಏಕೆಂದರೇ ಕಾವೇರಿ ನಿವಾಸದ ಪಕ್ಕದಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾ ಇದೆ. ಸಹಜವಾಗಿ ಮುಖ್ಯಮಂತ್ರಿಯಾದವರು ಇದೆ ನಿವಾಸದಲ್ಲಿ ಇರುತ್ತಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದರು. ಬಳಿಕ 2018 ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿಯೇ ಉಳಿದುಕೊಂಡಿದರು. ಇದೀಗ ಮುಖ್ಯಮಂತ್ರಿಯಾದ ಬೆನ್ನಲೇ ಮತ್ತೆ ಕಾವೇರಿ ನಿವಾಸಕ್ಕೆ ಶೀಘ್ರದಲ್ಲೇ ಶಿಫ್ಟ್ ಆಗಲಿದ್ದಾರೆ.












Click it and Unblock the Notifications