ಕೆಲಸ ಮಾಡದವರಿಗೆ ಗೇಟ್ ಪಾಸ್: ಕುಮಾರಸ್ವಾಮಿ ವಾರ್ನಿಂಗ್!
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭೀಕರ ಸೋಲು ಕಂಡಿರುವ JDS ಇದೀಗ ಮತ್ತೆ ಮೈಕೊಡವಿ ಎದ್ದು ಬರುವ ಮುನ್ಸೂಚನೆ ನೀಡಿದೆ. ಕೇವಲ 19 ಸ್ಥಾನದಲ್ಲಿ ಗೆಲ್ಲುವ ಮೂಲಕ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನ ಕಂಡಿತ್ತು ಜೆಡಿಎಸ್. ಈಗ ಆ ಸೋಲಿನ ಸುಳಿಯಿಂದ ಎದ್ದು ಬರಲು ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ.
ಇನ್ನೇನು ಲೋಕಸಭೆ ಚುನಾವಣೆ ಬಂದೇಬಿಡ್ತು. ಕೆಲ ತಿಂಗಳಲ್ಲಿ ಲೋಕಸಭೆಗೆ ಎಲೆಕ್ಷನ್ ನಡೆಯಲಿದೆ. ಈ ಹೊತ್ತಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಕಂಬ್ಯಾಕ್ ಮಾಡುವ ಹಿಂಟ್ ಕೊಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಮತ್ತು ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಜೆಡಿಎಸ್ ಸಜ್ಜುಗೊಳಿಸುವ ಸಂಕಲ್ಪದೊಂದಿಗೆ ಪಕ್ಷ ಸಂಘಟನೆ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈಗ ಖಡಕ್ ಸಂದೇಶ ನೀಡಿದ್ದಾರೆ. ಹಾಗಾದ್ರೆ ಏನದು ಜೆಡಿಎಸ್ ನಾಯಕರ ಆ ಕಠಿಣ ಕ್ರಮ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಖಡಕ್ ಮೆಸೇಜ್ ಕೊಟ್ಟ ಮಾಜಿ ಸಿಎಂ!
ಅಷ್ಟಕ್ಕೂ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ 4ನೇ ದಿನವು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜೆಡಿಎಸ್ ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡುತ್ತೇವೆ. ಯುವಜನರಿಗೆ ಆದ್ಯತೆ ನೀಡುತ್ತೇವೆ. ಪಕ್ಷ ಕಟ್ಟುವ ಉತ್ಸಾಹಿಗಳಿಗೆ ಅವಕಾಶ ಕೊಡ್ತೀವಿ. ಬದ್ಧತೆಯಿಂದ ಕೆಲಸ ಮಾಡುವವರಿಗೆ ಮಾತ್ರ ಅವಕಾಶ ನೀಡಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಇದು ಭಾರಿ ಬದಲಾವಣೆಯ ಮುನ್ಸೂಚನೆ ನೀಡುತ್ತಿದೆ.
ಪಕ್ಷದಲ್ಲಿ ಭಾರಿ ಬದಲಾವಣೆ ಸುಳಿವು!
ಹಾಗೇ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಕಟ್ಟುತ್ತೇವೆ, ಎದೆಗುಂದುವವರು ನಾವಲ್ಲ. ಬದ್ಧತೆ, ಪಕ್ಷ ಕಟ್ಟುವ ಛಲ, ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಕೊಡಲಾಗುವುದು. ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡುತ್ತೇನೆ. ಜಿಲ್ಲೆಗಳಲ್ಲಿ ಸಭೆ ಮಾಡಿ ಜಿಲ್ಲಾ ಘಟಕಗಳಿಗೆ ಸರಿಯಾದ ಚಿಕಿತ್ಸೆ ಕೊಡಲಾಗುವುದು. ಪಕ್ಷ ಸಂಘಟನೆ ಮಾಡದ ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಮಾಡುತ್ತೇವೆ. ಚುನಾವಣೆಗೆ ಸಮರ್ಥ ಅಭ್ಯರ್ಥಿ ತಯಾರು ಮಾಡಲಾಗದವನ್ನು ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ರಾಜ್ಯ ಘಟಕದಲ್ಲಿ ಭಾರಿ ಬದಲಾವಣೆಗೆ ಜನತಾ ದಳದ ವರಿಷ್ಠರು ಮುಂದಾಗಿರುವ ಮುನ್ಸೂಚನೆ ಸಿಕ್ಕಿದೆ.

ಜನರ ಜತೆ ಇದ್ದು ಹೋರಾಟ ಮಾಡಿ!
ಹಾಗೇ ಪಕ್ಷದಲ್ಲಿ ನಾಯಕರಾಗಿ ಬೆಳೆಯುವ ಯುವಜನರಿಗೆ ಅವಕಾಶ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಯುವ ಜನರನ್ನ ಪಕ್ಷಕ್ಕೆ ಹೆಚ್ಚಾಗಿ ಸೇಳೆಯಲಾಗುವುದು ಎಂದು ಮಾಜಿ ಸಿಎಂ HDK ತಿಳಿಸಿದರು. ಪದಾಧಿಕಾರಿ ಆದಾಕ್ಷಣ, ಶಾಸಕರಾದಕ್ಷಣ, ಮಂತ್ರಿ ಆದಾಕ್ಷಣ ನಾಯಕರಾಗಿ ಬೆಳೆಯಲಾಗದು. ಜನರ ಜತೆ ಇದ್ದು ಹೋರಾಟ ನಡೆಸಿದರೆ ಮಾತ್ರ ನಾಯಕರಾಗುತ್ತೇವೆ ಎಂದು ಕಿವಿಮಾತು ಹೇಳಿದರು. ಸಂಘಟನೆ ಬಗ್ಗೆ ನಿರ್ಲಕ್ಷ್ಯ ಸಲ್ಲದು, ಅಂಥವರಿಗೆ ಅವಕಾಶವೂ ಇಲ್ಲ. ಬದಲಾವಣೆಗೆ ಇದು ಸೂಕ್ತ ಸಮಯ. ಹಿರಿಯರು ಕೂಡ ಕಿರಿಯರಿಗೆ ಅವಕಾಶ ಮಾಡಿಕೊಡಿ ಎಂದರು. ಮಾಜಿ ಸಿಎಂ ಹೇಳಿರುವ ಈ ಮಾತುಗಳು, ಪಕ್ಷ ಸಂಘಟನೆ ಮಾಡದ ಜೆಡಿಎಸ್ ಮುಖಂಡರಿಗೆ ನಡುಕ ತರಿಸಿದೆ.
ಇನ್ನು ಜೆಡಿಎಸ್ ಪಕ್ಷದ ಈ ಮಹತ್ವದ ಸಭೆಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಷೆಂಪೂರ್, ಶಾಸಕರಾದ ನೇಮಿರಾಜ್ ನಾಯಕ್, ರಾಜುಗೌಡ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿದಂತೆ ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಜರಿದ್ದರು. ಈ ಮೂಲಕ ಕಠಿಣ ಬದಲಾವಣೆ ತಂದು ಮಂದೆ ಜನತಾ ದಳವನ್ನ ಇನ್ನಷ್ಟು ಬಲಪಡಿಸುವ ಸೂಚನೆಯನ್ನ ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಹಾಗೇ ಲೋಕಸಭೆ ಚುನಾವಣೆ ವೇಳೆಗೆ ಕಂಬ್ಯಾಕ್ ಮಾಡುವ ವಿಶ್ವಾಸವನ್ನೂ ಮಾಜಿ ಸಿಎಂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications