ಅರಣ್ಯ ಸಂರಕ್ಷಣೆಗೆ ಬರಲಿದೆ ಶ್ವಾನ ಪಡೆ, ತರಬೇತಿ ಆರಂಭ
ಬೆಂಗಳೂರು, ಫೆಬ್ರವರಿ 18: ಗಣ್ಯ ವ್ಯಕ್ತಿಗಳ ಭದ್ರತೆ, ಬಾಂಬ್ ನಿಷ್ಕ್ರಿಯ ದಳದಲ್ಲಿ ಶ್ವಾನಗಳ ಕಾರ್ಯ ವೈಖರಿಯನ್ನು ನಾವು ನೋಡಿದ್ದೇವೆ. ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆಗೆ ಸಹ ಶ್ವಾನದಳ ಸ್ಥಾಪನೆಯಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಕಳ್ಳ ಸಾಗಣೆ ತಡೆಯಲು ರಾಜ್ಯದಲ್ಲಿ ಶ್ವಾನದಳ ಕಾರ್ಯ ನಿರ್ವಹಣೆ ಮಾಡಲಿದೆ. ಇದಕ್ಕಾಗಿ ಚಾಮರಾಜನಗರದಲ್ಲಿ ಈಗಾಗಲೇ ನಾಯಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆ, ಮರಗಳ್ಳತನ ಮುಂತಾದ ಅಪರಾಧಗಳನ್ನು ತಡೆಯಲು ಅರಣ್ಯ ಇಲಾಖೆ ಶ್ವಾನದಳವನ್ನು ಬಳಕೆ ಮಾಡಿಕೊಳ್ಳಲಿದೆ. ಇದಕ್ಕಾಗಿ 10 ಬೆಲ್ಜಿಯಂ ಮಾಲಿನಾಯ್ಸ್ ತಳಿಯ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಸುಮಾರು 10 ತಿಂಗಳ ತರಬೇತಿ ಬಳಿಕ ನಾಯಿಗಳು ಕಾರ್ಯಚರಣೆ ಆರಂಭಿಸಲಿವೆ.

ರಾಜ್ಯದ ವಿವಿಧ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೊದಲು ಶ್ವಾನದಳವನ್ನು ನಿಯೋಜನೆ ಮಾಡಲಾಗುತ್ತದೆ. ಇದಕ್ಕಾಗಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಹುಲಿ, ಆನೆಗಳು ಇರುವ ಬಂಡೀಪುರ ಅರಣ್ಯದಲ್ಲಿ ಶ್ವಾನಗಳಿಗೆ ತರಬೇತಿಯನ್ನು ಪ್ರಾರಂಭಿಸಲಾಗಿದೆ.
ಹೇಗೆ ಕಾರ್ಯ ನಿರ್ವಹಣೆ ಮಾಡಲಿದೆ ದಳ?: ಬಂಡೀಪುರ ಅರಣ್ಯದಲ್ಲಿ ರಾಜ್ಯದ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ. ಅರಣ್ಯದಲ್ಲಿ ಮರಗಳ್ಳತನ, ದಂತಕ್ಕಾಗಿ ಆನೆಗಳ ಹತ್ಯೆ, ಅರಣ್ಯ ಸಂಪತ್ತುಗಳ ಕಳ್ಳಸಾಗಣೆ ಮುಂತಾದ ಅಪರಾಧಗಳನ್ನು ಪತ್ತೆ ಹಚ್ಚಲು ಶ್ವಾನದಳವನ್ನು ಬಳಕೆ ಮಾಡಲಾಗುತ್ತದೆ.
ಮಾದಕ ವಸ್ತು, ಅನಿಲ ಸೋರಿಕೆ ಮುಂತಾದವುಗಳನ್ನು ಪತ್ತೆ ಹಚ್ಚುವಲ್ಲಿ ಹೆಚ್ಚು ಚಾಣಾಕ್ಷವಾಗಿರುವ ಬೆಲ್ಜಿಯಂ ಮಾಲಿನಾಯ್ಸ್ ತಳಿಯ ನಾಯಿಗಳನ್ನು ಅರಣ್ಯ ಶ್ವಾನದಳಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದ್ದರಿಂದ ನುರಿತ ತರಬೇತುದಾರರ ಮೂಲಕ ನಾಯಿಗಳನ್ನು ಅರಣ್ಯಕ್ಕೆ ಕರೆದುಕೊಂಡು ಬಂದು ಅವುಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ಈ ಶ್ವಾನಗಳ ಪಾಲನೆ, ಪೋಷಣೆಗೆ ಒಂದು ಶ್ವಾನಕ್ಕೆ ಇಬ್ಬರನ್ನು ನಿಯೋಜನೆ ಮಾಡಲಾಗಿದೆ. ಈ ಹ್ಯಾಂಡ್ಲರ್‌ಗಳಿಗೆ ಸಹ ತರಬೇತಿಯನ್ನು ನೀಡಲಾಗುತ್ತಿದೆ. ಶ್ರೀಗಂಧ, ರಕ್ತ ಚಂದನ ಮುಂತಾದ ಮರಗಳನ್ನು ಗುರುತಿಸುವುದು. ಪ್ರಾಣಿಗಳ ಮೂಳೆ, ಉಗುರು, ದಂತ, ಚರ್ಮಗಳ ಮೂಲಕ ಅವುಗಳನ್ನು ಪತ್ತೆ ಹಚ್ಚುವ ತರಬೇತಿಯನ್ನು ಶ್ವಾನಗಳು ಪಡೆಯುತ್ತಿವೆ.
ತರಬೇತಿ ಪೂರ್ಣಗೊಂಡ ಬಳಿಕ ಮೊದಲ ಹಂತದಲ್ಲಿ ಎರಡು ಶ್ವಾನಗಳನ್ನು ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ ಮತ್ತು ಬಿಟಿಆರ್ ಹುಲಿ ಸಂರಕ್ಷಿತ ಪ್ರದೇಶಗಳಿಗೆ ನಿಯೋಜನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದಲ್ಲಿಯೇ ಮೊದಲು ಅರಣ್ಯ ಸಂರಕ್ಷಣೆಗೆ ಶ್ವಾನದಳವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಬಂಡೀಪುರ ಅರಣ್ಯದಲ್ಲಿ ಟ್ರ್ಯಾಕರ್ ಡಾಗ್ ತರಬೇತಿ ಶಾಲೆ ಆರಂಭಿಸಲಾಗಿದೆ. ಈಗ ತರಬೇತಿ ಪಡೆಯುತ್ತಿರುವ 10 ನಾಯಿಗಳು ಹೇಗೆ ಕಾರ್ಯ ನಿರ್ವಹಣೆ ಮಾಡಲಿವೆ? ಎಂಬುದನ್ನು ತಿಳಿದುಕೊಂಡು ಬಳಿಕ ಇನ್ನಷ್ಟು ನಾಯಿಗಳನ್ನು ದಳಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಅರಣ್ಯಗಳ ಸಂರಕ್ಷಣೆಯಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಮರಗಳ್ಳತನ, ಆನೆಗಳ ಹತ್ಯೆ, ಅರಣ್ಯ ಸಂಪತ್ತುಗಳ ಕಳ್ಳಸಾಗಣೆ ತಡೆಯುವುದು ಪ್ರಮುಖ ಸವಾಲಾಗಿದೆ. ದಟ್ಟವಾದ ಕಾಡಿನಲ್ಲಿ ಶ್ವಾನದಳದ ಸಹಾಯದಿಂದ ಇಂತಹ ಕಾರ್ಯಾಚರಣೆ ಮಾಡಲು ಇಲಾಖೆ ಶ್ವಾನಗಳಿಗೆ ತರಬೇತಿಯನ್ನು ನೀಡುತ್ತಿದೆ.












Click it and Unblock the Notifications