Anil kumble: ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನೇಮಕ
ಬೆಂಗಳೂರು, ಮೇ 27: ಖ್ಯಾತ ಕ್ರೀಡಾಪಟು, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶನ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಈಶ್ವರ ಖಂಡ್ರೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಎರಡು ವರ್ಷ ತುಂಬಿದ ಸಂದರ್ಭದಲ್ಲಿಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅನಿಲ್ ಕುಂಬ್ಳೆ ವಿಶ್ವದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು. ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಅರಣ್ಯದ ಬಗ್ಗೆ ಪ್ರೀತಿ ಇದೆ. ಹೀಗಾಗಿ ಅವರು ಯಾವುದೇ ಸಂಭಾವನೆ ಪಡೆಯದೆ ರಾಯಭಾರಿ ಆಗಲು ಸಮ್ಮತಿಸಿದ್ದಾರೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ಜಗತ್ತೇ ಎದುರಿಸುತ್ತಿದ್ದು, ಈ ಕಾಲಘಟ್ಟದಲ್ಲಿ ಹಸಿರು ಹೊದಿಕೆಯ ಹೆಚ್ಚಳ, ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಇಲಾಖೆಯ ಜವಾಬ್ದಾರಿಯಾಗಿದ್ದು, ಕಳೆದ 2 ವರ್ಷಗಳಲ್ಲಿ ಸುಮಾರು 8848 ವನಮಹೋತ್ಸವ ನಡೆಸಲಾಗಿದ್ದು, ಅರಣ್ಯ ಪ್ರದೇಶ, ರಸ್ತೆಬದಿ ಮತ್ತು ಸರ್ಕಾರಿ ಜಾಗದಲ್ಲಿ ಸುಮಾರು 8.5 ಕೋಟಿ ಸಸಿಗಳನ್ನು ನೆಟ್ಟು, ಪೋಷಿಸಲಾಗಿದೆ, 2023-24 ಮತ್ತು 2024-25ರ ಸಾಲಿನಲ್ಲಿ ಒಟ್ಟು 120975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಮಾದಪ್ಪನಹಳ್ಳಿ 153 ಎಕರೆಯಲ್ಲಿ ಬೃಹತ್ ಉದ್ಯಾನ ನಿರ್ಮಾಣ
ಬೆಂಗಳೂರಿನಲ್ಲಿ ಶ್ವಾಸತಾಣಗಳನ್ನು ಉಳಿಸಲು, ಬೆಳೆಸಲು ಸರ್ಕಾರ ನಿರ್ಧರಿಸಿದ್ದು, ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. ಬೆಂಗಳೂರಿನಲ್ಲಿ ಲಾಲ್ ಬಾಗ್ ಹೈದರಾಲಿಯ ಕಾಲದಲ್ಲಿ ನಿರ್ಮಾಣವಾಗಿತ್ತು, ಕಬ್ಬನ್ ಪಾರ್ಕ್ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿತು. ಶತಮಾನವೇ ಕಳೆದರೂ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ಆಗಲಿಲ್ಲ. ಹೀಗಾಗಿ ತಾವು ಅರಣ್ಯ ಸಚಿವನಾದ ತರುವಾಯ ನೀಲಗಿರಿ ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ 153 ಎಕರೆ ಜಮೀನನ್ನು ಜೂ.2ರಂದು ಮರಳಿ ಅರಣ್ಯ ಇಲಾಖೆಗೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಲಾಗುವುದು, 2 ತಿಂಗಳಲ್ಲಿ ಇದರ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಬೆಂಗಳೂರು ಮಹಾನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿ ಹಲವು ದಶಕದಿಂದ ಅರಣ್ಯ ಭೂಮಿ ಒತ್ತುವರಿ ಆಗಿದ್ದು, ತಾವು ಸಚಿವನಾದ ತರುವಾಯ 2 ವರ್ಷದಲ್ಲಿ ಸುಮಾರು 4000 ಕೋಟಿ ರೂ. ಮಾರುಕಟ್ಟೆ ಮೌಲ್ಯದ 128 ಎಕರೆ ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿರುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 444 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅರಣ್ಯ ಜಮೀನು ಹಿಂಪಡೆದು, ಉದ್ಯಾನವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕಾನೂನು ಹೋರಾಟ ನಡೆದಿದೆ.. ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.












Click it and Unblock the Notifications