ಉತ್ತರ ಕರ್ನಾಟಕ ಭಾಗದ ಸಮಸ್ಯೆಯ ಕುರಿತು ಚರ್ಚೆಯಾಗದ ಅಧಿವೇಶನ ಯಾರಿಗಾಗಿ..?
ಬೆಳಗಾವಿ,ಡಿಸೆಂಬರ್ 29: ಉತ್ತರ ಕರ್ನಾಟಕದ ಪ್ರಮುಖ ಸ್ಥಳವಾಗಿರುವ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವುದರಿಂದ ಈ ಭಾಗದ ಅಭಿವೃದ್ಧಿಗೆ ನಿಜಕ್ಕೂ ಅನುಕೂಲವಾಗಬೇಕು ಎನ್ನುವ ಇಚ್ಚೆಯಿಂದ ಅಧಿವೇಶನವನ್ನ ಮಾಡಲಾಗುತ್ತದೆ. ಆದರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಗಳಿಗೆ ಉತ್ತರ ಸಿಗ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಈ ಹಿನ್ನೆಲೆಯಲ್ಲಿ ಸದನವನ್ನು ಅನಿರ್ದಿಷ್ಟಾವಧಿಗಳ ಕಾಲ ಮುಂದೂಡಲಾಗಿದೆ. ಹೀಗಾಗಿ ಈ ಅಧಿವೇಶನ ಯಾರಿಗಾಗಿ ಎನ್ನುವ ಪ್ರಶ್ನೆ ಅಲ್ಲಿನ ಜನರದ್ದಾಗಿದೆ.
ಬೆಳಗಾವಿ ಚಳಿಗಾಲದ ಅಧಿವೇಶನ 10 ದಿನಗಳ ಕಾಲ ನಡೆಯಬೇಕಿತ್ತು. ಆದರೆ ಒಂದು ದಿನ ಮೊದಲೇ ಮೊಟಕುಗೊಳಿಸಲಾಗಿದೆ. ಡಿಸೆಂಬರ್ 30 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ಸಹಜವಾಗಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರೈತರ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಕೊನೆಯ ದಿನವೂ ಸೂಕ್ತ ಉತ್ತರ ಸಿಕ್ಕಿಲ್ಲ. ಇದರಿಂದ ಕೊನೆಯ ದಿನ ಕಾಂಗ್ರೆಸ್ ಸಭಾತ್ಯಾಗ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು
ಈ ಅಧಿವೇಶನವೂ ಸೇರಿದಂತೆ ಇದೀಗ ಹನ್ನೊಂದನೆ ಅಧಿವೇಶನ ನಡೆದಿದ್ದು, ಒಟ್ಟು 109 ದಿನಗಳ ಕಾಲ ಕಲಾಪ ನಡೆದಂತಾಗಿದೆ. ಇದಕ್ಕಾಗಿ ಅಂದಾಜು 168 ಕೋಟಿ ರೂ.ಗಳಷ್ಟು ಹಣ ವೆಚ್ಚವಾಗಿದೆ. ಪ್ರತಿ ಬಾರಿಯೂ 2 ದಿನಗಳ ಕಾಲ ಉತ್ತರ ಕರ್ನಾಟಕದ ವಿಚಾರಗಳನ್ನ ಚರ್ಚೆಗಳಾಗಿದ್ದರೂ ನಿರೀಕ್ಷೆಯ ಮಟ್ಟದಲ್ಲಿ ಅಲ್ಲಿನ ಜನರಿಗೆ ಸಮಾಧಾನ ತಂದಿರಲಿಲ್ಲ. ಇನ್ನೂ ಈ ಬಾರಿಯೂ ಎರಡು ದಿನಗಳ ಕಾಲ ಚರ್ಚೆಗೆ ಅವಕಾಶ ಸಿಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ, ಹೇಳಿಕೆಗೆ ಮಾತ್ರ ಸಿಮೀತವಾಯ್ತಾ ಎಂದು ಅಸಮಾಧಾನ ಈ ಭಾಗದ ಜನರಿಗಿದೆ.

ಬೆಳಗಾವಿಯಲ್ಲಿ ಅಧಿವೇಶನ ನಡೆದಿದೆ ಎಂಬುದನ್ನು ಬಿಟ್ಟರೆ ಆಗಿರುವುದೇನು ಎಂದು ಎಲ್ಲಿನ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಸಣ್ಣಪುಟ್ಟ ಇಲಾಖೆಗಳ ಬದಲಿಗೆ ಪ್ರತಿ ಇಲಾಖೆಯನ್ನು ವಿಭಜಿಸಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕಚೇರಿಗಳನ್ನು ಸ್ಥಾಪಿಸಲಿ, ಮುಖ್ಯಮಂತ್ರಿ ಸಚಿವಾಲಯದ ಕಚೇರಿಯೂ ಇಲ್ಲಿರಬೇಕು. ಸಚಿವ ಸಂಪುಟ ಸಭೆಗಳನ್ನು ನಡೆಸಿ ಈ ಭಾಗದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಇಲ್ಲಿಯೇ ನಿರ್ಣಯಿಸಬೇಕು. ಆ ಮೂಲಕ ಬೆಂಗಳೂರಿಗೆ ಅಲೆಯುವ ಕೆಲಸ ತಪ್ಪಬೇಕು ಎಂಬ ಆಗ್ರಹ ಇಲ್ಲಿನ ಜನರದ್ದಾಗಿದೆ.

ಉತ್ತರ ಕರ್ನಾಟಕ ಭಾಗದ ಬೇಡಿಕೆಗಳೇನು..?
* ತಿಂಗಳಿಗೊಂದು ಸಚಿವ ಸಂಪುಟ ಸಭೆ
* ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರ
* ಎಲ್ಲ ಇಲಾಖೆಗಳನ್ನು ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕವೆಂದು ವಿಭಜಿಸಿ ಕಚೇರಿಗಳ ಸ್ಥಾಪನೆ
* ಮುಖ್ಯಮಂತ್ರಿ ಸಚಿವಾಲಯದ ಕಚೇರಿ ಸ್ಥಾಪನೆ, ಕಾರ್ಯದರ್ಶಿಮಟ್ಟದ ಅಧಿಕಾರಿ ನಿಯೋಜನೆ
* ಕೈಗಾರಿಕೆಗಳ ಸ್ಥಾಪನೆ
* ಸಂಪರ್ಕ ವೃದ್ಧಿಗೆ ಆದ್ಯತೆ
* ನೀರಾವರಿ ಯೋಜನೆಗಳ ಹೆಚ್ಚಳ
* ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ
* ಕೃಷ್ಣಾ, ಮಹದಾಯಿ ಯೋಜನೆಯಲ್ಲಿ ನೀರಿನ ಪಾಲು ಸಂಪೂರ್ಣ ಬಳಕೆ
* ತುಂಗಭದ್ರಾಕ್ಕೆ ಸಮಾನಾಂತರ ಅಣೆಕಟ್ಟು
* ನೆರೆ ಸಂತ್ರಸ್ತರ ಪುನರ್ವಸತಿ
* ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ
* ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಬೇಕು
* ಯುಕೆಪಿ ಮೂರನೇ ಹಂತದ ಯೋಜನೆಗೆ ವೇಗ ನೀಡುವುದು












Click it and Unblock the Notifications