ನಮ್ಮ ಗ್ಯಾರಂಟಿಗಳು ಜನರ ಕೈಗೆ ದುಡ್ಡು ನೀಡಲಿವೆ: ಸಿಎಂ ಸಿದ್ಧರಾಮಯ್ಯ
ಬೆಂಗಳೂರು, ಜುಲೈ 21: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಕೈಗೆ ದುಡ್ಡು ನೀಡಲು ನಮ್ಮ ಸರ್ಕಾರ ಐದು ಗ್ಯಾರೆಂಟಿಗಳನ್ನು ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಅವರು ಮಾತನಾಡಿದರು.
ಸಾಮಾಜಿಕ ಸ್ವಾತಂತ್ರ್ಯ ಇಲ್ಲದಿದ್ದರೆ , ದೇಶಕ್ಕೆ ಸ್ವಾತಂತ್ರ್ಯ ಬಂದರೂ ಪ್ರಯೋಜನವಿಲ್ಲ. ರಾಜಕೀಯ ಪ್ರಜಾಪ್ರಭುತ್ವ ಇದ್ದರೆ ಸಾಲದು, ಸಾಮಾಜಿಕ ಪ್ರಜಾಪ್ರಭುತ್ವವಿರಬೇಕು. ಸಮಾಜಿಕ ಹಾಗೂ ಆರ್ಥಿಕ ಅಸಮಾನತೆಯಿಂದ ಕಷ್ಟದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು ಎಂದು ನೆನಪಿಸಿಕೊಂಡರು.

ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯವೇ ಸಮಾಜವಾದ. ನಮ್ಮ ಸರ್ಕಾರ ಜನರ ಜೇಬಿಗೆ ದುಡ್ಡು ಕೊಡುವ ಮೂಲಕ ಉದ್ಯೋಗ ಸೃಷ್ಟಿ, ಜಿಡಿಪಿ ಬೆಳವಣಿಗೆ, ತೆರಿಗೆ ಮೂಲಕ್ಕೂ ದಾರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ
ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ನಾವು ಕೊಟ್ಟಿದ್ದ 165 ಭರವಸೆಗಳಲ್ಲಿ 158 ಭರವಷೆಗಳನ್ನು ಈಡೇರಿಸಿದ್ದೇವೆ. 2018 ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲ 2,45,000 ಕೋಟಿ ರೂಪಾಯಿ ಇತ್ತು. 2023ಕ್ಕೆ ಇದು 5,20,000 ಕೋಟಿ ರೂಪಾಯಿಗೆ ಹೆಚ್ಚಾಗಿದೆ.
ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ. 14 ಮತ್ತು 15 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ರಾಜ್ಯಕ್ಕೆ ಬರುವ ಅನುದಾನ ಕಡಿಮೆಯಾಗಿದೆ. 5495 ಕೋಟಿ ರೂ. ಮಧ್ಯಂತರ ಪರಿಹಾರ ನೀಡಲಿಲ್ಲ. 25 ಜನ ಸಂಸದರಿದ್ದರೂ ಇದರ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಲಿಲ್ಲ ಎಂದು ತಿಳಿಸಿದರು.
ರಾಜ್ಯಗಳಿಗೆ ನೀಡುವ ಸಬ್ಸಿಡಿಗಳು ಕಡಿಮೆಯಾಗಿದೆ. ಯೋಜನೆಯಲ್ಲಿ ಶೇ. 80 ರಷ್ಟು ರಾಜ್ಯ ಹಾಗೂ ಶೇ.20 ರಷ್ಟು ಕೇಂದ್ರ ಸರ್ಕಾರ ಹಾಕಿ, ತನ್ನ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಈ ವರ್ಷ ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ಹೋಗುತ್ತಿದ್ದು, ಅದರಲ್ಲಿ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೇರಿ ಕೇವಲ 50257 ಕೋಟಿ ಬರುತ್ತದೆ ಎನ್ನುವ ವಿಚಾರವನ್ನು ತಿಳಿಸಿದರು.
ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಗುರಿ
ತೆರಿಗೆ ಸೋರಿಕೆಯನ್ನು ತಡೆದು , ತೆರಿಗೆ ಸಂಗ್ರಹಕ್ಕೆ ಪ್ರಮುಖ ಇಲಾಖೆಗಳಿಗೆ ಹೆಚ್ಚಿನ ಗುರಿಯನ್ನು ನೀಡಲಾಗಿದೆ. 13,500 ಕೋಟಿ ತೆರಿಗೆ ಬಾಬ್ತುಗಳಿಂದ ಸಂಗ್ರಹವಾಗುತ್ತದೆ. ನಮ್ಮ ಸರ್ಕಾರ 85,808 ಕೋಟಿ ಹೆಚ್ಚುವರಿ ಸಾಲ ಪಡೆಯುತ್ತಿದೆ. ಯೋಜನೆಗಳ ಆದ್ಯತೀಕರಣದಿಂದ ರೂ. 34,650 ಕೋಟಿ ಕ್ರೋಢೀಕರಣ ಮಾಡಲಾಗುತ್ತದೆ. ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯೊಳಗೆ ಇದೆ. ಮುಂದೆಯೂ ಉಳಿತಾಯ ಬಜೆಟ್ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಗ್ಯಾರಂಟಿಗಳಿಂದ 1.30 ಕೋಟಿ ಕುಟುಂಬಗಳಿಗೆ ಪ್ರಯೋಜನ
ಸಂಪನ್ಮೂಲ ಕ್ರೋಢೀಕರಣ , ಪಂಚ ಯೋಜನೆಗಳಿಗೆ ಅನುದಾನ ಮೀಸಲು ಮಾಡಲಾಗಿದೆ. ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತಿಲ್ಲ. 76 ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಪ್ರತಿ ದಿನ ಸುಮಾರು 50 ಲಕ್ಷ ಜನ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 2800 ಕೋಟಿಯನ್ನು ಈ ಯೋಜನೆಗೆ ಈ ವರ್ಷ ಇಡಲಾಗಿದೆ.
ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಜಾರಿ ಮಾಡಲಾಗಿದೆ. ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ 2,29,000 ಮೆ.ಟನ್ ಅಕ್ಕಿ ಬೇಕಾಗುತ್ತದೆ. ಅಕ್ಕಿ ಸರಬರಾಜಿಗೆ ಕೇಂದ್ರ ನಿರಾಕರಿಸಿದ್ದರಿಂದ 5 ಕೆಜಿ ಬದಲು 170 ರೂ. ವೆಚ್ಚವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಈ ಯೋಜನೆಗೆ ಸುಮಾರು 10 ಸಾವಿರ ಕೋಟಿ ರೂ. ಮೀಸಲಿರಿಸಲಾಲಿದೆ. ಈವರೆಗೆ 57.51 ಲಕ್ಷ ಕುಟುಂಬಗಳಿಗೆ 337.08 ಕೋಟಿ ಬ್ಯಾಂಕ್ ಖಾತೆಗೆ ತಲುಪಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ 34000 ಕೋಟಿ ರೂ. ಬೇಕಾಗುತ್ತದೆ, ಈ ವರ್ಷ 18000 ಕೋಟಿ ರೂ ಮೀಸಲಿರಿಸಲಾಗಿದೆ. ಯುವನಿಧಿ ಯೋಜನೆಯಡಿ 2022-23 ರಲ್ಲಿ ಪಾಸಾದ ಪದವಿಧರರು ಹಾಗೂ ಡಿಪ್ಲೋಮಾ ಪಡೆದಿರುವವರಿಗೆ 3000 ರೂ. ಹಾಗೂ 1500 ರೂ. ಅನುಕ್ರಮವಾಗಿ 24 ತಿಂಗಳವರಗೆ ನೀಡಲಾಗುವುದು. ಪಂಚ ಗ್ಯಾರೆಂಟಿಗಳಿಂದ 1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದರು.
ಅವಕಾಶ ವಂಚಿತರಿಗೆ ನ್ಯಾಯ ಕೊಡಲು ಯತ್ನ
ನಮ್ಮ ಸರ್ಕಾರ ಸಮಾಜದ ಎಲ್ಲ ವರ್ಗದ ಜನರು, ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ, ಮುಂದೆಯೂ ಪ್ರಯತ್ನಿಸಲಿದೆ. ಜನಪರ , ಅಭಿವೃದ್ಧಿಪರ, ದೂರದೃಷ್ಟಿಯುಳ್ಳ, ರಾಜ್ಯ ಆರ್ಥಿಕತೆ ಬೆಳವಣಿಗೆಗೆ ಪೂರಕವಾದ ಬಜೆಟ್ ಮಂಡಿಸಲಾಗಿದೆ. ರಾಜ್ಯದ ಜನರು ಈ ಬಜೆಟ್ ಅನ್ನು ಸ್ವಾಗತಿಸಿದ್ದಾರೆ ಎಂದರು.












Click it and Unblock the Notifications