Lok Sabha Election 2024: ಆರಂಭದಲ್ಲೇ ಮೈತ್ರಿಯಲ್ಲಿ ಬಿರುಕು: ಬಿಜೆಪಿ-ಜೆಡಿಎಸ್ ದೋಸ್ತಿ ಮುರಿದು ಬೀಳುತ್ತಾ?- ಇಲ್ಲಿವೆ ಕಾರಣಗಳು
ಬೆಂಗಳೂರು, ಮಾರ್ಚ್ 21: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್ ಕೊಡಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ನ ಕಟ್ಟಿ ಹಾಕಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮಾಸ್ಟರ್ ಪ್ಲಾನ್ ಮಾಡಲಾಗಿತ್ತು. ಆದರೆ ಚುನಾವಣೆ ಆರಂಭದಲ್ಲೇ ಮೈತ್ರಿ ನಾಯಕರ ಮಧ್ಯೆ ಅಸಮಾಧಾನ ಭುಗಿಲೆದ್ದಿದ್ದು, ಕಮಲ-ದಳ ಮೈತ್ರಿ ಮುರಿದು ಬೀಳುತ್ತಾ ಎನ್ನುವ ಅನುಮಾನ ಶುರುವಾಗಿದೆ.
ಹೌದು, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರವನ್ನ ಗೆಲ್ಲಲು ಮೈತ್ರಿಯಾದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಆರಂಭದಲ್ಲಿ ಬಿರುಕು ಉಂಟಾಗಿದೆ. ಇಪ್ಪತ್ತು ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ವರಿಷ್ಠರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿಯೇ ಬಿಜೆಪಿ ನಮ್ಮನ್ನು, ನಮ್ಮ ಪಕ್ಷವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿ ನಾಯಕರು ಕರೆಯುತ್ತಿಲ್ಲ. ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಬಿಜೆಪಿ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನವನ್ನ ಹೊರಹಾಕಿದ್ದು, ಮೈತ್ರಿಯಲ್ಲಿ ಅಸಮಾಧಾನದ ಬೆಂಕಿಯ ಕಿಚ್ಚು ಹೊಗೆಯಾಡುತ್ತಿದೆ.
ಇತ್ತ ಬಿಜೆಪಿ ನಾಯಕರ ನಡೆ ಜೆಡಿಎಸ್ ಮುಖಂಡರಿಗೆ ಮಾತ್ರವಲ್ಲ ದಳಪತಿಗಳಿಗೂ ಬೇಸರವಾಗುವಂತೆ ಮಾಡಿದೆ. ಮಂಡ್ಯ, ಕೋಲಾರ ಸೀಟು ಹಂಚಿಕೆಯ ಹಗ್ಗಜಗ್ಗಾಟದ ಮಧ್ಯೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಡುವಿನ ಗೊಂದಲ ತಾರಕಕ್ಕೇರಿದೆ. ಬಿಜೆಪಿ ಮೈತ್ರಿ ಧರ್ಮ ಪಾಲನೆಯ ಬಗ್ಗೆ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾದರೇ ಈ ಮೈತ್ರಿಧರ್ಮ ಪಾಲನೆ ಯಾಕೆ ಆಗುತ್ತಿಲ್ಲ. ಈ ರೀತಿಯಲ್ಲಿ ಗೊಂದಲಗಳು ಸೃಷ್ಟಿಯಾಗಿದ್ಯಾಕೆ? ಮೈತ್ರಿ ಮುರಿದು ಬೀಳಲು ಪ್ರಮುಖ ಕಾರಣಗಳು ಇಲ್ಲಿವೆ ನೋಡಿ.

ಕಮಲ-ದಳ ಮೈತ್ರಿ ಮುರಿದು ಬೀಳಲು ಪ್ರಮುಖ ಕಾರಣಗಳು?
1. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳಲ್ಲಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ. ಆದರೆ,ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಸಭೆ ನಡೆಸಿ, ಹೈಕಮಾಂಡ್ ಅಂಗಳಕ್ಕೆ ಪಟ್ಟಿಯನ್ನ ರವಾನಿಸಿದ್ದಾರೆ. ಅಲ್ಲದೇ ರಾಜ್ಯದಿಂದ ಹೋದ ಪಟ್ಟಿಯನ್ನ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನ ಘೋಷಿಸಿದೆ. ಬಿಜೆಪಿ ಪಟ್ಟಿಯನ್ನ ಘೋಷಿಸುವಾಗ ಜೆಡಿಎಸ್ ನಾಯಕರನ್ನ ವಿಶ್ವಾಸಕ್ಕೆ ತಗೊಂಡಿಲ್ಲ ಎನ್ನುವ ಬೇಸರ.
2. ಬಿಜೆಪಿ-ಜೆಡಿಎಸ್ ಮೈತ್ರಿಯಾದ ಬಳಿಕ ಕ್ಷೇತ್ರ ಹಂಚಿಕೆ ಕುರಿತು ಸಾಕಷ್ಟು ಸಭೆ ಬಿಜೆಪಿ ಹೈಕಮಾಂಡ್ ನಾಯಕರ ಮಟ್ಟದಲ್ಲಿ ನಡೆದಿದೆ. ಈ ನಡುವೆ ಮೊದನಿಂದಲೂ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠೆರಾದ ಹೆಚ್ ಡಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನ ಹಾಸನ ಅಭ್ಯರ್ಥಿ ಎಂದು ಘೋಷಿಸಿದೆ. ಪ್ರಜ್ವಲ್ ರೇವಣ್ಣ ಅವರು ಕ್ಷೇತ್ರದಲ್ಲಿ ಪ್ರಚಾರವನ್ನ ಆರಂಭಿಸಿದ್ದಾರೆ. ಆದರೆ, ಹಾಸನದ ಸ್ಥಳೀಯ ಬಿಜೆಪಿ ನಾಯಕ ಪ್ರೀತಂಗೌಡರನ್ನ ಕಂಟ್ರೋಲ್ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದು ಸಹ ಜೆಡಿಎಸ್ ನಾಯಕರ ಕೋಪಕ್ಕೆ ಕಾರಣವಾಗಿದೆ.
3. ಲೋಕಸಭಾ ಚುನಾವಣೆಗೆ ಒಟ್ಟಾಗಿ ಪ್ರಚಾರ ಮಾಡುವುದಾಗಿ ಬಿಜೆಪಿ ಹೈಕಮಾಂಡ್ ಸೂಚನೆಯನ್ನ ನೀಡಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕಲಬುರಗಿ, ಶಿವಮೊಗ್ಗದಲ್ಲಿ ನಡೆದ ಬೃಹತ್ ಸಮಾವೇಶಗಳನ್ನ ಬಿಜೆಪಿ ನಡೆಸಿದೆ. ಈ ಕಾರ್ಯಕ್ರಮಗಳಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರ ಅಥವಾ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿಯಿಂದ ಯಾವುದೇ ಆಹ್ವಾನ ಇಲ್ಲ. ಶಿವಮೊಗ್ಗ ಹಾಗೂ ಕಲಬುರ್ಗಿಯಲ್ಲೂ ಜೆಡಿಎಸ್ ತನ್ನದೇ ಆದ ಪ್ರಾಬಲ್ಯವನ್ನ ಹೊಂದಿದೆ ಎಂದು ಜೆಡಿಎಸ್ ಹಿರಿಯ ನಾಯಕರು ಮುನಿಸಿಕೊಂಡಿದ್ದಾರೆ.
4. ಆರಂಭದಿಂದಲೂ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡುವಂತೆ ದಳಪತಿಗಳು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಸಹ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗಿದೆ. ಈ ನಡುವೆ ಮಂಡ್ಯದಲ್ಲಿ ಚುನಾವಣಾ ತಯಾರಿಯನ್ನ ಜೆಡಿಎಸ್ ನಾಯಕರು ನಡೆಸಿಕೊಳ್ಳುತ್ತಿದ್ದಾರೆ. ಆದರೆ, ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನ ಕರೆದು ಮಾತಾಡಿ ಮಂಡ್ಯದಲ್ಲಿ ಗೊಂದಲ ಮಾಡುತ್ತಿದ್ದಾರೆ ಎಂಬ ಬೇಸರ ಜೆಡಿಎಸ್ ನಾಯಕರಿಗಿದೆ.
5. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ 25 ಬಿಜೆಪಿಗೆ ಮೂರು ಕ್ಷೇತ್ರಗಳು ಜೆಡಿಎಸ್ ಗೆ ಎಂದು ಹಲವು ಸರಣಿ ಸಭೆಯನ್ನ ಅಮಿತ್ ಶಾ ಅವರ ಜೊತೆಗೆ ಮಾಜಿ ಹೆಚ್ ಡಿ ಕುಮಾರಸ್ವಾಮಿ ನಡೆಸಿದ್ದಾರೆ. ಆದರೆ, ಇದು ಕ್ಷೇತ್ರ ಹಂಚಿಕೆ ಕುರಿತು ಅಧಿಕೃತವಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿಲ್ಲ. ಅಲ್ಲದೇ ಈವರೆಗೂ ಬಿಜೆಪಿ-ಜೆಡಿಎಸ್ ನಾಯಕರ ಜೊತೆಗೆ ಸಮನ್ವಯ ಸಭೆಗಳೇ ನಡೆಸಿಲ್ಲ.
6. ಕೋಲಾರ ಜೆಡಿಎಸ್ ಪಕ್ಷಕ್ಕೆ ಬೇಸ್ ಇರುವ ಕ್ಷೇತ್ರ ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿ ನಮಗೆ ಬೇಕು ಅಂತ ಪಟ್ಟು ಹಿಡಿದಿದೆ. ಈಗಾಗಲೇ ಕೋಲಾರ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡುವಂತೆ ಹೈಕಮಾಂಡ್ ಜೊತೆಗೆ ಮಾತುಕತೆಯಾಗಿದೆ. ಆದರೂ ಸಹ ಬಿಜೆಪಿ ಕೊನೆ ಗಳಿಗೆಯಲ್ಲಿ ಕೋಲಾರಕ್ಕಾಗಿ ಪಟ್ಟು ಹಿಡಿದಿದೆ. ಮೈತ್ರಿ ಧರ್ಮದ ಬಗ್ಗೆ ಬಿಜೆಪಿ ನಾಯಕರು ನಿರ್ಲಕ್ಷ್ಯ ಧೋರಣೆಯನ್ನ ತೋರಿಸುತ್ತಿದ್ದಾರೆ. ಬಿಜೆಪಿಯೇ ಅಸಡ್ಡೆ ತೋರಿದರೆ ನಾವೇಕೆ ಮೈತ್ರಿ ಧರ್ಮ ಪಾಲಿಸಬೇಕು ಎಂದು ಜೆಡಿಎಸ್ ಮುಖಂಡರು ಪ್ರಶ್ನಿಸಿದ್ದಾರೆ.
7. ಬೆಂಗಳೂರು ಗ್ರಾಮಾಂತರ ಜೆಡಿಎಸ್ ಭದ್ರ ಕೋಟೆ, ಜೆಡಿಎಸ್ ಗೆ ಮೊದಲಿನಿಂದಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತಗಳಿವೆ. ಆದ್ರೂ ಬಿಜೆಪಿ ಪಕ್ಷದ ಚಿಹ್ನೆಯಡಿ ಡಾ. ಮಂಜುನಾಥ್ರನ್ನ ನಿಲ್ಲಿಸ್ತೇವೆ ಅಂತ ಬಿಜೆಪಿ ಕರೆಸಿದ್ದಕ್ಕೆ ಜೆಡಿಎಸ್ ನಾಯಕರಿಗೆ ಬೇಸರಗೊಂಡಿದ್ದಾರೆ ಎನ್ನಲಾಗಿತ್ತು. ಇದೇ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆಗಳನ್ನ ಮಾಡುತ್ತಿದ್ದಾರೆ.












Click it and Unblock the Notifications