Lok Sabha Election 2024: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಸದರು ಅಲರ್ಟ್? ಶುರುವಾಯ್ತು ಅಭಿವೃದ್ಧಿ ಮಂತ್ರ!
ಲೋಕಸಭೆ ಚುನಾವಣೆ ಹತ್ತಿರ ಬಂತು, ಇದಕ್ಕೆ ಬೇಕಾದ ಎಲ್ಲ ತಯಾರಿಗಳು ಅಬ್ಬರದಿಂದ ಸಾಗಿವೆ. ಈ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ರಾಜ್ಯದ ಸಂಸದರು ಚುನಾವಣೆ ಹತ್ತಿರ ಆಗುತ್ತಿದ್ದಂತೆ ಅಲರ್ಟ್ ಆಗಿದ್ದಾರೆ ಅನ್ನೋ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ. ಹಾಗೇ ಸಂಸದ ಡಿ.ಕೆ.ಸುರೇಶ್ & ಸಚಿವ ಸತೀಶ್ ಜಾರಕಿಹೊಳಿ ಮಾತುಕತೆ ಮಧ್ಯೆ ಇದೀಗ ಪ್ರಲ್ಹಾದ್ ಜೋಶಿ ಕೂಡ ಸುದ್ದಿಯಲ್ಲಿದ್ದಾರೆ!
ಹೌದು 2019ರ ಲೋಕಸಭೆ ಚುನಾವಣೆಯ ವೇಳೆ ಕರ್ನಾಟಕ ಸಾಕಷ್ಟು ಗಮನ ಸೆಳೆದಿತ್ತು. ಬಿಜೆಪಿ ಪಕ್ಷವು ಇದೊಂದೇ ರಾಜ್ಯದಿಂದ ಬರೋಬ್ಬರಿ 26 ಸಂಸದರನ್ನು ಪಡೆದಿತ್ತು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗುತ್ತಿದೆ. ಸಮೀಕ್ಷೆಗಳು ಹೇಳುವಂತೆ ಅವಕಾಶಗಳು ಕಾಂಗ್ರೆಸ್ & ಬಿಜೆಪಿ 50/50 ಇದೆ. ಪರಿಸ್ಥಿತಿ ಹೀಗಿದ್ದಾಗ ಹಾಲಿ ಸಂಸದರು ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಅಲರ್ಟ್ ಆಗಿ ಗಮನ ಹರಿಸಲು ಮುಂದಾಗಿದ್ದಾರೆ. ಈ ಪ್ರಯತ್ನವು ಪಕ್ಷಾತೀತ ಅನ್ನೋದು ಮತ್ತೊಂದು ವಿಶೇಷ.

ತೇಜಸ್ವಿ ಸೂರ್ಯ & ಡಿಸಿಎಂ ಭೇಟಿ
ಕೆಲ ದಿನದ ಹಿಂದಷ್ಟೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ ತಮ್ಮ ಕ್ಷೇತ್ರ ವ್ಯಾಪ್ತಿಯೂ ಸೇರಿ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದ್ದರು. ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಕೈವಾಕ್ ಮತ್ತು ಅಂಡರ್ ಪಾಸ್ ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಮಾತನಾಡಿದ್ದರು. ಹೀಗೆ ತೇಜಸ್ವಿ ಸೂರ್ಯ ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಬಗ್ಗೆ ಸುದ್ದಿಯಾದ ಕೆಲ ದಿನದಲ್ಲಿ ಡಿ.ಕೆ.ಸುರೇಶ್ ಅವರ ಭೇಟಿಯ ವಿಚಾರವು ಕೂಡ ಮುನ್ನೆಲೆಗೆ ಬಂದಿತ್ತು.
ಸತೀಶ್ ಜಾರಕಿಹೊಳಿ ಜೊತೆ ಚರ್ಚೆ
ಸಂಸದ ಡಿ.ಕೆ.ಸುರೇಶ್ ಅವರು ನಿನ್ನೆಯಷ್ಟೇ ಸಚಿವ ಸತೀಶ್ ಜಾರಕಿಹೊಳಿರನ್ನು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ್ರು. ಹಾಗೇ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದ್ದಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದರು. ಮಳೆಯ ಕಾರಣ, ಹಾಳಾಗಿರುವ ರಸ್ತೆ ರಿಪೇರಿ ಸೇರಿದಂತೆ ಹಲವು ಕಾಮಗಾರಿಗಳ ಬಗ್ಗೆ ಅವರು ಮಾತನಾಡಿದ್ದರು. ಇದೆಲ್ಲಾ ಮುಗಿದ ನಂತರ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಸುದ್ದಿಯಲ್ಲಿದ್ದಾರೆ.
ನೀರಾವರಿ ಯೋಜನೆ ಜಾರಿಗೆ ಮನವಿ
ಹೌದು, ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನ ಭೇಟಿ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಸೇರಿದಂತೆ ಅಂದಾಜು 484 ಕೋಟಿ ವೆಚ್ಚದ 167 ಯೋಜನೆ ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಗಣಿ & ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದ್ದಾರೆ.

ಒಟ್ನಲ್ಲಿ 2024ರ ಜಿದ್ದಾಜಿದ್ದಿನ ಲೋಕಸಭೆ ರಣಕಣಕ್ಕೆ ರಾಜ್ಯದ ಎಲ್ಲಾ ಪಕ್ಷಗಳ ಸಂಸದರು ಸಜ್ಜಾಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ, ಎನ್ನುವ ಮಾತು ಕೇಳಿಬರುತ್ತಿದೆ. ಹೀಗಾಗಿ ಅಭಿವೃದ್ಧಿ ಮಂತ್ರ ಯಾವೆಲ್ಲಾ ರೀತಿ ವರ್ಕೌಟ್ ಆಗಲಿದೆ? ಹಾಗೇ ಮತದಾರ ಪ್ರಭು ಯಾರ ಕೈಹಿಡಿಯುತ್ತಾನೆ? ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಹಿಂದೆಂದಿಗಿಂತ ಜಿದ್ದಾಜಿದ್ದಿನಿಂದ ಇರುವುದು ಪಕ್ಕಾ ಅಂತಿದ್ದಾರೆ ಜನರು. ಹೀಗಾಗಿ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ.












Click it and Unblock the Notifications