PUC ನಂತರ ಮುಂದೇನು? ಕೇವಲ ಮೆಡಿಕಲ್, ಇಂಜಿನಿಯರಿಂಗ್ ಮಾತ್ರವಲ್ಲ: ಬದುಕು ಬದಲಿಸುವ 9 ಬೆಸ್ಟ್ ಕೋರ್ಸ್‌ಗಳ ಲಿಸ್ಟ್ ಇಲ್ಲಿದೆ
ಒಂದು ಕಾಲವಿತ್ತು, ಪಿಯುಸಿ ಅಂದ್ರೆ ಈ 12ನೇ ತರಗತಿಯಲ್ಲಿ ಸೈನ್ಸ್ ಮುಗಿಸಿದರೆ ಸಾಕು ಕೇವಲ ಎಂಬಿಬಿಎಸ್ ಅಥವಾ ಇಂಜಿನಿಯರಿಂಗ್ ಮಾತ್ರವೇ ಒಳ್ಳೆಯ ವೃತ್ತಿ ಆಯ್ಕೆಗಳು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ನಂಬಿದ್ದರು. ಹಾಗೆಯೇ ಸೀಟ್ ಬುಕಿಂಗ್ ಮಾಡಲು ಮುಗಿಬೀಳುತ್ತಿದ್ದರು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ಚಿತ್ರಣ ಸಂಪೂರ್ಣ ಬದಲಾಗಿದೆ.
ಹೌದು, ಕೇವಲ ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳನ್ನ ಹೊರತುಪಡಿಸಿ, ಇತರೆ ವಲಯಗಳಲ್ಲೂ ಅತ್ಯುನ್ನತ ಹುದ್ದೆ ಹಾಗೂ ಆಕರ್ಷಕ ವೇತನ ಪಡೆಯುವಂತಹ ಅದೆಷ್ಟೋ ಕೋರ್ಸ್‌ಗಳು ಇವೆ. 'ಯಾವ ಕಾಲೇಜು?' ಎಂದು ಯೋಚಿಸುವ ಬದಲು 'ನಾನು ಏನಾಗಬೇಕು?' ಎಂದು ಯೋಚಿಸಿದಾಗ ಅನೇಕ ಹೊಸ ದಾರಿಗಳು ನಮಗೆ ಕಾಣಸಿಗುತ್ತವೆ.

ಪಿಯುಸಿ ನಂತರ ಮುಂದೇನು ಎಂದು ಯೋಚಿಸುತ್ತಿರುವ ವಿದ್ಯಾರ್ಥಿಗಳು, ಸಾಂಪ್ರದಾಯಿಕ ಕೋರ್ಸ್‌ಗಳನ್ನ ಬಿಟ್ಟು ಆಯ್ಕೆ ಮಾಡಿಕೊಳ್ಳಬಹುದಾದ 9 ಬೆಸ್ಟ್ ಕೋರ್ಸ್‌ಗಳ ವಿವರ ಇಲ್ಲಿದೆ.
1. ಮ್ಯಾನೇಜ್‌ಮೆಂಟ್
ಹಿಂದೆಲ್ಲಾ ಡಿಗ್ರಿ ಮುಗಿದ ಮೇಲಷ್ಟೇ ಎಂಬಿಎ ಮಾಡಲು ಸಾಧ್ಯವಿತ್ತು. ಆದರೆ ಈಗ 12ನೇ ತರಗತಿ ಮುಗಿದ ತಕ್ಷಣವೇ ಐದು ವರ್ಷಗಳ 'ಇಂಟಿಗ್ರೇಟೆಡ್ ಪ್ರೋಗ್ರಾಮ್ ಇನ್ ಮ್ಯಾನೇಜ್‌ಮೆಂಟ್' (IPM) ಸೇರಬಹುದು. ಈ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಹಣಕಾಸು, ಅರ್ಥಶಾಸ್ತ್ರ, ಮಾರ್ಕೆಟಿಂಗ್, ಹಾಗೂ ಉದ್ಯಮಶೀಲತೆಯಂತಹ ವಿಷಯಗಳನ್ನ ಕಲಿಸಲಾಗುತ್ತದೆ.
ಇಲ್ಲಿಂದ ನೀವು ಕನ್ಸಲ್ಟಿಂಗ್, ಮಾರ್ಕೆಟಿಂಗ್ ಹಾಗೂ ಕಾರ್ಪೊರೇಟ್ ವಲಯದಲ್ಲಿ ಒಳ್ಳೆಯ ಭವಿಷ್ಯವನ್ನ ರೂಪಿಸಿಕೊಳ್ಳಬಹುದು.
2. ಅರ್ಥಶಾಸ್ತ್ರ
ಅರ್ಥಶಾಸ್ತ್ರವೆಂದರೆ ಕೇವಲ ಬ್ಯಾಲೆನ್ಸ್ ಶೀಟ್‌ಗಳಿಗೆ ಸೀಮಿತವಲ್ಲ. ರಾಷ್ಟ್ರೀಯ ಬಜೆಟ್, ಹಣದುಬ್ಬರ, ವ್ಯಾಪಾರ ಹಾಗೂ ಡೇಟಾ ಸೈನ್ಸ್‌ನ ಒಟ್ಟುಗೂಡುವಿಕೆ ಇಲ್ಲಿದೆ.
ಮಾರುಕಟ್ಟೆ ಹಾಗೂ ಆರ್ಥಿಕತೆಯ ಚಿತ್ರಣವನ್ನ ಅರ್ಥಮಾಡಿಕೊಳ್ಳುವ ಈ ಕೋರ್ಸ್ ಮಾಡಿದವರಿಗೆ, ಆರ್ಥಿಕ ನೀತಿ ನಿರೂಪಣೆ, ಮ್ಯಾಕ್ರೋ-ಎಕನಾಮಿಕ್ ಫೋರ್‌ಕಾಸ್ಟಿಂಗ್, ಸೆಂಟ್ರಲ್ ಬ್ಯಾಂಕಿಂಗ್ ಹಾಗೂ ಥಿಂಕ್ ಟ್ಯಾಂಕ್ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶಗಳಿವೆ.
3. ಹಣಕಾಸು
ಬಂಡವಾಳ, ಷೇರುಪೇಟೆ ಹಾಗೂ ಹೂಡಿಕೆಯ ಮೇಲೆ ಆಸಕ್ತಿ ಇರುವವರಿಗೆ ಫೈನಾನ್ಸ್ ಕೋರ್ಸ್ ಹೇಳಿಮಾಡಿಸಿದಂತಿದೆ. ಸಂಪತ್ತನ್ನ ಹೇಗೆ ಸೃಷ್ಟಿಸುವುದು ಹಾಗೂ ನಿರ್ವಹಿಸುವುದು ಎಂಬುದನ್ನ ಇಲ್ಲಿ ಕಲಿಸಲಾಗುತ್ತದೆ.
ವೃತ್ತಿ ಮಾರ್ಗದರ್ಶನದ ಪ್ರಕಾರ, ಇದನ್ನು ಓದಿದವರು ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್, ಕಾರ್ಪೊರೇಟ್ ಟ್ರೆಷರಿ, ಪ್ರೈವೇಟ್ ಈಕ್ವಿಟಿ ಹಾಗೂ ವೆಲ್ತ್ ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬಹುದು.
4. ಮಾರ್ಕೆಟಿಂಗ್
ಇಂದು ಮಾರ್ಕೆಟಿಂಗ್ ಎಂಬುದು ಕೇವಲ ವಸ್ತುಗಳನ್ನ ಮಾರುವುದಕಷ್ಟೇ ಸೀಮಿತವಾಗಿಲ್ಲ. ಡಿಜಿಟಲ್ ಜ್ಞಾನ, ಡೇಟಾ ಅನಾಲಿಸಿಸ್ ಹಾಗೂ ಕ್ರಿಯಾಶೀಲತೆಯನ್ನ ಬೇಡುವ ವಲಯವಿದು. ಬ್ರ್ಯಾಂಡ್ ಮ್ಯಾನೇಜ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಮಾರ್ಕೆಟ್ ರಿಸರ್ಚ್‌ನಂತಹ ಬೇಡಿಕೆಯುಳ್ಳ ಉದ್ಯೋಗಗಳನ್ನ ಇಲ್ಲಿ ಪಡೆಯಬಹುದು.
5. ಮನಃಶಾಸ್ತ್ರ (Psychology)
ಮನುಷ್ಯನ ವರ್ತನೆ ಹಾಗೂ ಮನಸ್ಸಿನ ತುಮುಲಗಳನ್ನ ಅರ್ಥಮಾಡಿಕೊಳ್ಳುವ ಆಸಕ್ತಿ ಇದ್ದರೆ, ಮನಃಶಾಸ್ತ್ರ ಅತ್ಯುತ್ತಮ ಆಯ್ಕೆ. ಕೌನ್ಸಿಲಿಂಗ್, ಹ್ಯೂಮನ್ ರಿಸೋರ್ಸ್, ಬಿಹೇವಿಯರಲ್ ರಿಸರ್ಚ್, ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸೈಕಾಲಜಿ ಓದಿದವರಿಗೆ ಭಾರಿ ಡಿಮ್ಯಾಂಡ್ ಇದೆ.
6. ಲಿಬರಲ್ ಸ್ಟಡೀಸ್
ಕೇವಲ ಒಂದೇ ವಿಷಯಕ್ಕೆ ಸೀಮಿತವಾಗದೆ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಅರ್ಥಶಾಸ್ತ್ರ, ಕಲೆ, ಹಾಗೂ ಕಂಪ್ಯೂಟರ್ ಸೈನ್ಸ್‌ನಂತಹ ಬಹುಮುಖಿ ವಿಷಯಗಳನ್ನ ಕಲಿಯಲು ಬಯಸುವವರಿಗೆ ಈ ಕೋರ್ಸ್ ಉಪಯುಕ್ತವಾಗಿದೆ. ಇದು ವಿಮರ್ಶಾತ್ಮಕ ಚಿಂತನೆ ಹಾಗೂ ಸಂವಹನ ಕೌಶಲವನ್ನ ಹೆಚ್ಚಿಸುತ್ತದೆ.
7. ವಾಣಿಜ್ಯ
ಚಾರ್ಟರ್ಡ್ ಅಕೌಂಟೆಂಟ್ (CA), ಸಿಎಸ್ (CS) ಹಾಗೂ ಸಿಎಂಎ (CMA) ನಂತಹ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಬ್ರ್ಯಾಂಡ್ ಸ್ಟ್ರಾಟಜಿ, ಟ್ಯಾಲೆಂಟ್ ಅಕ್ವಿಸಿಷನ್ ಹಾಗೂ ಕಾರ್ಪೊರೇಟ್ ಗವರ್ನೆನ್ಸ್‌ನಂತಹ ವಿಶಾಲವಾದ ಉದ್ಯೋಗ ಅವಕಾಶಗಳನ್ನು ಕಾಮರ್ಸ್ ಕೋರ್ಸ್ ತೆರೆದಿಡುತ್ತದೆ.
8. ಸಾರ್ವಜನಿಕ ನೀತಿ (Public Policy)
ಇಡೀ ನಗರ ಅಥವಾ ರಾಜ್ಯದ ಅಭಿವೃದ್ಧಿಗೆ ಯಾವ ರೀತಿ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನ ತಿಳಿಸುವ ಕೋರ್ಸ್ ಇದಾಗಿದೆ. ಕಾನೂನು, ಆಡಳಿತ, ಹಾಗೂ ನಿರ್ವಹಣೆಯ ಸಮಾಗಮವಾಗಿರುವ ಈ ಕ್ಷೇತ್ರದಿಂದ, ಸರ್ಕಾರಿ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಸಮಾಜಮುಖಿ ಎನ್‌ಜಿಒಗಳಲ್ಲಿ ಕೆಲಸ ಮಾಡಬಹುದು.
9. ಕಾನೂನು
ಕಾನೂನು ಪದವಿ ಎಂದರೆ ಕೇವಲ ಕಪ್ಪು ಕೋಟು ಧರಿಸಿ ಕೋರ್ಟ್‌ನಲ್ಲಿ ವಾದ ಮಾಡುವುದಲ್ಲ. ತಂತ್ರಜ್ಞಾನ ಬೆಳೆದಂತೆ ಕಾರ್ಪೊರೇಟ್ ಲಾ, ಡೇಟಾ ಪ್ರೈವೆಸಿ, ಸ್ಟಾರ್ಟ್‌ಅಪ್ ಅಗ್ರಿಮೆಂಟ್ಸ್, ಮೀಡಿಯಾ ರೈಟ್ಸ್ ಹಾಗೂ ಅಂತರಾಷ್ಟ್ರೀಯ ವಹಿವಾಟುಗಳಂತಹ ಹೈ-ಪ್ರೊಫೈಲ್ ವಿಭಾಗಗಳಲ್ಲಿ ಕಾನೂನು ತಜ್ಞರಿಗೆ ಬಾರಿ ಬೇಡಿಕೆ ಇದೆ.
ಒಟ್ಟಿನಲ್ಲಿ, ವಿದ್ಯಾರ್ಥಿಗಳು ಕೇವಲ ಗುಂಪು ಸೇರುವ ಮನಸ್ಥಿತಿಯಿಂದ ಹೊರಬಂದು, ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಮಾರುಕಟ್ಟೆಯ ಇಂದಿನ ಬೇಡಿಕೆಗಳನ್ನ ಅರಿತುಕೊಂಡು ಕೋರ್ಸ್ ಆಯ್ಕೆ ಮಾಡಿಕೊಂಡರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು.




Click it and Unblock the Notifications
