ಮಾಜಿ ಸಚಿವ ಗೂಳಿಹಟ್ಟಿಗೆ ಸ್ಮಾರ್ಟ್ ಫೋನ್ ಕೈಕೊಟ್ಟಾಗ

ನಮ್ಮ ಮಾಜಿ ಸಚಿವರು ಗೊತ್ತಲ್ಲಾ. ಅದೇ ವಿಧಾನಸೌಧದಲ್ಲಿ ಶರ್ಟ್ ಹರಿದುಕೊಂಡ ಗೂಳಿಹಟ್ಟಿ ಶೇಖರ್. ಅವರು ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗೋಣ ಅಂತ ಆರೇಳು ತಿಂಗಳ ಹಿಂದೆ ಒಂದು smartphone ಖರೀದಿಸಿಯೇ ಬಿಟ್ಟರು. ಅದೂ ಸುಮಾರು 40,000 ರೂಪಾಯಿಗೆ ಖರೀದಿಸಿದರು.
ಆದರೆ ಖರೀದಿಸಿದ ತಪ್ಪಿಗೆ ಅವರೀಗ ಬೆಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ 99,99,999 ರೂ. ಪರಿಹಾರ ಕೋರಿ ಅರ್ಜಿ ಹಾಕಿದ್ದಾರೆ. ನಾಳಿದ್ದು ಶುಕ್ರವಾರ ವಿಚಾರಣೆಗೂ ಬರಲಿದೆ. ಅಲ್ಲಾ ಸಾರ್, ಏನಿದು 99,99,999 ರೂ? ಅಂತ ಕೇಳಿದ್ದಕ್ಕೆ
ಇನ್ನೊಂದು ರೂಪಾಯಿ ಹೆಚ್ಚಿಗೆ ಕೇಳಿದರೂ ಅದಕ್ಕಾಗಿ ಸೀದಾ ದೆಹಲಿಗೆ ಹೋಗಬೇಕು. ಅದಕ್ಕೆ ಇಲ್ಲೇ ವ್ಯವಹಾರ ಮುಗಿಸಿಕೊಳ್ಳೋಣ ಅಂತ... ಎಂದು ಬೇಸರದ ದನಿಯಲ್ಲೇ ಗೂಳಿಹಟ್ಟಿ ತಮ್ಮ ದುಃಖ ತೋಡಿಕೊಂಡರು.
ವಿಷಯ ಏನಪ್ಪಾ ಅಂದರೆ ಮೇ 19ರಂದು 38,493 ರೂಪಾಯಿ ಕೊಟ್ಟು ಒಂದು ವರ್ಷ warrantyಯಿರುವ smartphone ಖರೀದಿಸಿದ್ದಾರೆ. ಆದರೆ ಒಂದು ವರ್ಷದೊಳಗಾಗಿ ಅದು ರಿಪೇರಿಗೆ ಬಂದಿದೆ.
ಸರಿ ರಿಪೇರಿ ಮಾಡಿಕೊಟ್ಟ ಕಂಪನಿಯು ಅದಕ್ಕೆ ತಗಲುವ ವೆಚ್ಚವನ್ನು ಕೊಡಿ ಎಂದು ಕೇಳಿದೆ. ಆದರೆ warranty ಇದೆಯಲ್ಲವಾ? ಹೊಸ ಸೆಟ್ಟೇ ಕೊಟ್ಬಿಡಿ ಎಂದು ಮಾಜಿ ಸಚಿವರಂಥಾ ಸಚಿವರೇ ಎರಡು ಬಾರಿ ಕೇಳಿದ್ದಾರೆ.
ಆದರೆ ಇಂತಹ ಕೇಸುಗಳನ್ನು ಅಂಗಡೀವರು ಎಷ್ಟು ನೋಡಿರೋಲ್ಲ ಹೇಳಿ. ಗೂಳಿಹಟ್ಟಿ ಮನವಿಗೆ ಅಂಗಡಿಯವನು ಕ್ಯಾರೇ ಅಂದಿಲ್ಲ. ಈ ಮಧ್ಯೆ, ಆಗಸ್ಟ್ ವೇಳೆಗೆ smartphone ತೀರಾ ಸ್ಮಾರ್ಟ್ ಆಗಿ ಕೆಲಸ ಮಾಡುವುದನ್ನೇ ಸ್ಥಗಿತಗೊಳಿಸಿಬಿಟ್ಟಿತು. ಅಂಗಡಿಯವನು manufacturing defect ಅಂತ ಹೇಳಿ ಫೋನ್ ಉತ್ಪಾದನಾ ಕಂಪನಿಯ ಮೇಲೆ ಎತ್ತಿಹಾಕಿದ.
ಕಂಪನಿಯವನೋ... ಹಾವು ತುಳಿದವನಂತೆ ಇಲ್ಲ ಇಲ್ಲಾ ಇದೆಲ್ಲಾ ಆ ಅಂಗಡಿಯವದ್ದೇ ಪ್ರಾರಬ್ಧ. ಅವನ ಬಳಿಯೇ ಸೆಟ್ಲ್ ಮಾಡಿಕೊಳ್ಳಿ ಎಂದು ಸಾಗಹಾಕಿದ. ಸರಿ ಅಂಗಡಿವನನ್ನು ಕೇಳಿದ್ದಕ್ಕೆ ಆಯ್ತು, ಇನ್ನೂ 18,000 ರೂ ಕೊಡಿ ಹೊಸ ಸೆಟ್ ಕೊಡ್ತೀವಿ ಎಂದು ರಾಜಿ ಕಬೂಲಿಗೆ ಇಳಿದ.
ಸಿಟ್ಟಿಗೆದ್ದ ಗೂಳಿಹಟ್ಟಿಗೆ ಶರ್ಟ್ ಹರಿದುಕೊಳ್ಳುವುದೊಂದೇ ಬಾಕಿ. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಿಗೆ ವಾಸ್ತವತೆಯಲ್ಲಿ ಯೋಚಿಸಿದವರೇ ಇದು ನನ್ನೊಬ್ಬನ ವಿಷಯವಲ್ಲ. ನನ್ನಂಥವರು ಇನ್ನೂ ಅನೇಕ ಮಂದಿ ಇರಬಹುದು. ಅವರಿಗೆಲ್ಲಾ ಇದು ಮಾರ್ಗದರ್ಶಕವಾಗಲಿ ಎಂದು ಆಲೋಚಿಸಿದವರೇ ಜೈ ಅಂತ ಗ್ರಾಹಕ ನ್ಯಾಯಾಲಯದ ಕಟಕಟೆ ಹತ್ತಿಬಿಟ್ಟರು.
ಮೊಬೈಲ್ ಮಾರಿದ ಅಂಗಡಿಯವನು ಮತ್ತು ಕಂಪನಿಯವನನ್ನು ಪಾರ್ಟಿ ಮಾಡಿ ತಮ್ಮ ವಕೀಲರ (ಶಂಕರಪ್ಪ) ಮೂಲಕ ಕೋರ್ಟಿನ ಮೊರೆಹೋದರು. ನನ್ನ ಕಕ್ಷಿದಾರರು ಮೊದಲೇ ಸಾರ್ವಜನಿಕ ವ್ಯಕ್ತಿ. ಅವರಿಗೆ ಎಷ್ಟೆಲ್ಲಾ ಇಂಪಾರ್ಟೆಂಟ್ ಕಾಂಟ್ಯಾಕ್ಟುಗಳು ಇರುತ್ತವೆ. ಅವೆಲ್ಲಾ ಈಗ ತಪ್ಪಿಹೋಗಿವೆ. ಜತೆಗೆ, ಮೂರ್ನಾಲ್ಕು ತಿಂಗಳಿಂದ ಸತಾಯಿಸ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಿ. ನಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಿ ಎಂದು ಶಂಕರಪ್ಪ ಕೋರ್ಟಿಗೆ ಅವಲತ್ತುಕೊಂಡಿದ್ದಾರೆ.
ಡಾಕ್ಯುಮೆಂಟ್ಸ್ ಎಲ್ಲಾ ಪಕ್ಕಾ ಇದಾವೆ. ಕೇಸ್ ಸ್ಟ್ರಾಂಗ್ ಆಗಿ ನಮ್ಮ ಕಡೆಯೇ ಇದೆ. ನೋಡೋಣ ಕೋರ್ಟ್ ಏನು ಹೇಳುತ್ತದೋ ಎನ್ನುತ್ತಾರೆ ಶಂಕರಪ್ಪ! ಇದು ಮನೆಮನೆಯ ಕಥೆ ಎನ್ನುವಂತೆ ಬಹುತೇಕ ಎಲ್ಲ (ಸ್ಮಾರ್ಟ್) ಮೊಬೈಲ್ ಖರೀದಿದಾರರ ಸಮಸ್ಯೆಯೂ ಹೌದು. ಒಂದು, ಸೆಟ್ ಸಮಸ್ಯೆಯಿರುತ್ತದೆ ಇಲ್ಲಾ ಆಪರೇಟರುಗಳ ಸಮಸ್ಯೆಯಿರುತ್ತದೆ. ಆದರೆ ಕೋರ್ಟು ಕಚೇರಿ ಅಂತ ಅಲೆದಾಡಲು ಜನರಿಗೆ ಸಮಯ ಇರುವುದಿಲ್ಲ. ಹಾಗಾಗಿ ನಾಲ್ಕು ಜನಕ್ಕೆ ಉಪಯೋಗವಾಗಲಿ ಎಂದು ಕೋರ್ಟಿಗೆ ಹೋಗಿದ್ದೇವೆ ಎಂದು ಗೂಳಿಹಟ್ಟಿ ಹೇಳುತ್ತಾರೆ.












Click it and Unblock the Notifications