ಇದೇನಾ ವಿಶ್ವಗುರುವಿನ ಲಕ್ಷಣ?; ಪ್ರಧಾನಿ ಮೋದಿ ವಿರುದ್ಧ ಡಿಕೆಶಿ ಸಿಡಿಮಿಡಿ
ಕೀವ್, ಮಾರ್ಚ್ 1: ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ್ ಬಲಿಯಾಗಿರುವುದು ಬಹಳ ಆತಂಕ ಮೂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ನವೀನ್ ಸಾವಿನ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ತೆರಳಿದ್ದಾರೆ. ನಮ್ಮಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜುಗಳಿದ್ದರೂ ಬೇಡಿಕೆ ಹೆಚ್ಚಾಗಿರುವುದರಿಂದ ನಮ್ಮ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ವಿಶ್ವದ ಇತರೆ ದೇಶಗಳು ತಮ್ಮ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಂಡಿದ್ದರೆ, ನಮ್ಮ ದೇಶದ ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ. ಕೇಂದ್ರ ಸರ್ಕಾರ ನಿನ್ನೆಯಷ್ಟೇ ನಾಲ್ವರು ಸಚಿವರನ್ನು ವಿದ್ಯಾರ್ಥಿಗಳ ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದೆ. ಕೇಂದ್ರ ಸರ್ಕಾರಕ್ಕೆ ಎಷ್ಟು ಬೇಜವಾಬ್ದಾರಿ ಇದೆ ಎಂಬುದನ್ನು ಇದು ತೋರುತ್ತದೆ ಎಂದು ಡಿಕೆಶಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ಬಗ್ಗೆ ಡಿಕೆ ಶಿವಕುಮಾರ್ ಟೀಕೆ
ನಮ್ಮ ವಿದ್ಯಾರ್ಥಿಗಳ ರಕ್ಷಣೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಇನ್ನಾದರೂ ಸರ್ಕಾರಗಳು ತುರ್ತು ಕ್ರಮ ಕೈಗೊಂಡು ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆಸಿಕೊಳ್ಳಬೇಕು. ನಮ್ಮ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದ್ದು, ಭಾರತೀಯರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಸರ್ಕಾರ ಈ ಕೂಡಲೇ ಯುದ್ಧದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಬೇಕು ಎಂದು ಉಲ್ಲೇಖಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ವಿರುದ್ಧ ಟೀಕೆ
ಪ್ರಧಾನಿಗಳು ತಾವು ವಿಶ್ವಗುರು ಎಂದು ಬಿಂಬಿಸಿಕೊಳ್ಳುತ್ತಾರೆ. ಇದೇನಾ ವಿಶ್ವಗುರುವಿನ ಲಕ್ಷಣ? ಈ ವಿಚಾರವನ್ನು ನಿಮಗೆ ಬಿಡುತ್ತೇನೆ ಎಂದು ಡಿಕೆ ಶಿವಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರ ದುಃಖ, ದುಮ್ಮಾನವನ್ನು ನೀವು ನೋಡುತ್ತಿದ್ದೀರಿ. ಕೇವಲ ಬಾಯಿ ಮಾತಲ್ಲಿ ರಕ್ಷಣೆ ಮಾಡುತ್ತೇವೆ ಎಂದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ನವೀನ್ ಸಾವಿಗೆ ಬಿಜೆಪಿ ಸರ್ಕಾರದ ವೈಫಲ್ಯ ಕಾರಣ
ಭವ್ಯ ಕನಸುಗಳನ್ನು ಕಟ್ಟಿಕೊಂಡಿದ್ದ ಯುವ ವೈದ್ಯಕೀಯ ವಿದ್ಯಾರ್ಥಿಯು ಭವಿಷ್ಯದ ಸುದೀರ್ಘ ಪ್ರಯಾಣದಲ್ಲಿ ಹಲವು ಜೀವಗಳನ್ನು ಉಳಿಸಬೇಕಾಗಿತ್ತು. ಆದರೆ ಬಿಜೆಪಿ ಸರ್ಕಾರದ ವೈಫಲ್ಯದಿಂದಾಗಿ ತನ್ನ ಬದುಕನ್ನು ಅರ್ಧದಲ್ಲಿಯೇ ತೊರೆದು ಹೋಗುವಂತಾಗಿದೆ," ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಆರೋಪಿಸಿದ್ದಾರೆ. "ರಷ್ಯಾದಿಂದ ಸಾಕಷ್ಟು ಬಾರಿ ಎಚ್ಚರಿಕೆಗಳನ್ನು ನೀಡಲಾಗಿತ್ತು. ಭಾರತೀಯರ ಸ್ಥಳಾಂತರಿಸುವಿಕೆಗೆ ತಯಾರಿ ನಡೆಸಲು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಸಮಯವಿತ್ತು. ಆದರೆ ದುರದೃಷ್ಟವಶಾತ್, ಸರ್ಕಾರದ ಅಜ್ಞಾನದಿಂದಾಗಿ ನವೀನ್ ಬೆಲೆ ತೆರಬೇಕಾಯಿತು," ಎಂದು ಸಿದ್ದರಾಮಯ್ಯ ದೂಷಿಸಿದ್ದಾರೆ.

ದೇಶದ ಎಲ್ಲ ವಿಧ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ
"ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದು ಒಂದು ದುರಂತದ ಸಂಗತಿ, ಈ ಕುರಿತು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದೇನೆ. ನವೀನ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಉಳಿದ ವಿಧ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications