RSS ಸಿದ್ಧಾಂತವೇ ದೇಶದ ಸಿದ್ಧಾಂತ: ಮಾಜಿ ಸಿಎಂ ಬೊಮ್ಮಾಯಿ
ಹಾವೇರಿ, ಅಕ್ಟೋಬರ್ 22: ರಾಜ್ಯ ಸರಕಾರಕ್ಕೆ ಆರ್ ಎಸ್ ಎಸ್ ಸಂಘಟನೆಯನ್ನು ಏನೂ ಮಾಡಲು ಆಗುವುದಿಲ್ಲ. ಈ ದೇಶದ ಸಿದ್ದಾಂತವೇ ಆರ್ ಎಸ್ ಎಸ್ ಸಿದ್ದಾಂತವಾಗಿದೆ. ಇದು ಹಿಂದೂಗಳಿಗೆ ರಾಷ್ಟ್ರ ವಿರೋಧಿ ಸರಕಾರವಾಗಿ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ ಸರಕಾರಿ ನೌಕರರು ಅಮಾನತು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ರಾಜ್ಯದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಸರಕಾರ ನಾಗರಿಕರ ಹಕ್ಕನ್ನು ಸಂಪೂರ್ಣವಾಗಿ ಮೊಟಕುಗೊಳಿಸಿದೆ. ಕಾನೂನಿನಲ್ಲಿ ರಾಜಕೀಯ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದು ಅಂತಿದೆ. ಆರ್ ಎಸ್ ಎಸ್ ಸಂಘಟನೆ ಯಾವುದೇ ರಾಜಕೀಯ ಚಟುವಟಿಕೆಯ ಸಂಘಟನೆಯಲ್ಲ. ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಆರ್ ಎಸ್ ಎಸ್ ನ ಸದಸ್ಯರು. ಯಾವ ಕೋರ್ಟ್ ಆದೇಶದಲ್ಲಿ ಸಂಘ ಸಂಸ್ಥೆ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದಂತಿದೆ ಎಂದು ಪ್ರಶ್ನಿಸಿದರು.

ಜನಶಕ್ತಿ-ರಾಜ್ಯಶಕ್ತಿ ಸಂಘರ್ಷ
ಕನ್ಮೇರಿ ಮಠದ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ನಿರ್ಬಂಧ ಹೇರಿದ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ .ಪ್ರತಿಕ್ರಿಯಿಸಿದ ಅವರು, ಕನ್ನೇರಿ ಮಠದ ಸ್ವಾಮಿಗಳ ಸಾಧನೆ ಬಹಳ ದೊಡ್ಡದಿದೆ, ಅವರ ಸಾಧನೆ ನೋಡಬೇಕು ಅಂದರೆ,ಕನ್ನೇರಿ ಮಠಕ್ಕೆ ಹೋಗಬೇಕು. ನಡೆಯುತ್ತಿರುವ ಇವತ್ತಿನ ಗೊಂದಲಕ್ಕೆ ಸ್ವಾಮೀಜಿ ಕೆಲವು ಶಬ್ದಗಳನ್ನು ಬಳಸಿದ್ದಾರೆ. ಅವರು ಸಾರ್ವಜನಿಕರಿಗೆ ಯಾವಾಗಲೂ ಬಹಳ ಪ್ರೀತಿಗೆ ಪಾತ್ರರಾದವರು. ಅಂತವರು ಬಂದರೆ ಕಾನೂನು ಸುವ್ಯವಸ್ಥೆಗೆ ಭಂಗವಾಗುತ್ತದೆ ಅಂದರೆ ಏನು ?
ಉತ್ತರ ಪ್ರದೇಶ, ಬಿಹಾರದಿಂದ ಬಹಳಷ್ಟು ಜನ ಧರ್ಮಗುರುಗಳು ಬರುತ್ತಾರೆ. ಇಲ್ಲಿ ಮೈಕ್ ನಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡುತ್ತಾರೆ. ಒಬ್ಬರನ್ನು ಆದ್ರೂ ನಿರ್ಬಂಧ ಮಾಡಿದ್ದಾರಾ. ಅದಕ್ಕೆ ಈ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಬರುವಂತಹ ದಿನಗಳಲ್ಲಿ ಜನಶಕ್ತಿ, ರಾಜ್ಯಶಕ್ತಿ ನಡುವೆ ಸಂಘರ್ಷ ಆಗುತ್ತದೆ ಎಂದರು.
ಕಮಿಷನ್ ನಿಂದ ಕಗ್ಗಂಟು ಎಂದ ಬೊಮ್ಮಾಯಿ
ರಾಜ್ಯ ಸರಕಾರದಿಂದ ಗುತ್ತಿಗೆದಾರ ಬಿಲ್ ಬಾಕಿ ನೀಡಲು ಗಡುವು ಹಾಕಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಸಚಿವರು ಅಭಿವೃದ್ಧಿ ಮಾಡಿದ್ದೇವೆ,ಗ್ಯಾರಂಟಿ ಕೊಟ್ಟಿದ್ದೇವೆ ಅನ್ನುತ್ತಾರೆ. ಮೂರು ವರ್ಷ ಆದರೂ ಅನುದಾನ ಬಿಡುಗಡೆ ಮಾಡಲಿಕ್ಕೆ ಏನಾಗಿದೆ. ಇದರಲ್ಲಿ ಇವರೆಲ್ಲ ಕಮಿಷನ್ ಹೆಚ್ಚು ಕೇಳುತ್ರಿದ್ದಾರೆ. ಗುತ್ತಿಗೆದಾರರು ಮನೆ,ಮಠ ಮಾರಾಟ ಮಾಡಿ ಕಮಿಷನ್ ಕೊಡುವ ಪರಿಸ್ಥಿತಿ ಬಂದಿದೆ. ಅದಕ್ಕಾಗಿಯೇ ಕಗ್ಗಾಂಟ ಆಗಿ ನಿಂತಿದೆ ಎಂದು ಹೇಳಿದರು.












Click it and Unblock the Notifications