ಧರ್ಮಸ್ಥಳ ಪ್ರಕರಣ NIA ಗೆ ವಹಿಸುವಂತೆ ಮಾಜಿ ಸಿಎಂ ಆಗ್ರಹ
ಬೆಂಗಳೂರು, ಆಗಸ್ಟ್ 23: ಸತ್ಯ ಮೇವ ಜಯತೆ. ಧರ್ಮೊ ರಕ್ಷತಿ ರಕ್ಷಿತಃ. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತಿಳಿಸಲು ರಾಜ್ಯ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಗೆ ಕೊಡಬೇಕು. ಮುಸುಕುದಾರಿ ವ್ಯಕ್ತಿ ಚಿನ್ನಯ್ಯ ಹೇಳಿರುವ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಧರ್ಮಸ್ಥಳ ಪ್ರಕರಣ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಚಿನ್ನಯ್ಯನನ್ನು ವಿಚಾರಣೆಗೆ ಒಳಪಡಿಸದಿದ್ದರೆ ರಾಜ್ಯ ಸರ್ಕಾರ ಷಡ್ಯಂತ್ರದ ಒಂದು ಭಾಗ ಎಂದು ಜನರು ತೀರ್ಮಾನಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತನಿಖೆಯನ್ನು ಎನ್ ಐಎಗೆ ಕೊಡಬೇಕು ಎಂದು ಹೇಳಿದರು.

ಧರ್ಮಸ್ಥಳದ ವಿಚಾರದಲ್ಲಿ ಎಸ್ ಐಟಿ ಮೊದಲು ಮಾಡಬೇಕಿರುವ ಕೆಲಸವನ್ನು ಕೊನೆಯಲ್ಲಿ ಮಾಡುತ್ತಿದೆ. ದೂರುದಾರನ ಅರ್ಹತೆ, ದೂರಿನ ಅರ್ಹತೆ ಸಾಕ್ಷ್ಯಾಧಾರಗಳು ಇವುಗಳನ್ನು ಖಾತ್ರಿ ಪಡಿಸದೆ ಎಸ್ಐಟಿ ರಚನೆ ಮಾಡಲಾಗಿದೆ. ಎಸ್ಐಟಿ ಅಗೆಯಲು ಪ್ರಾರಂಭಿಸಿರುವುದು ಕತ್ತಲಲ್ಲಿ ಕಾರ್ಯ ಆರಂಭಿಸಿದಂತಾಯಿತು.
ಅಪಖ್ಯಾತಿ, ಅಪಮಾನ ಮಾಡುವ ದುರುದ್ದೇಶ
ಎಸ್ ಐಟಿ ಮಾಡಿಸುವ ಉದ್ದೇಶ ಮತ್ತು ಎಸ್ ಐಟಿ ಮಾಡುವ ಕೆಲವರ ಉದ್ದೇಶ ಧರ್ಮಸ್ಥಳವನ್ನು ಅಪಖ್ಯಾತಿಗೊಳಿಸುವ ಅಪನಂಬಿಕೆ ಮೂಡಿಸುವುದಾಗಿತ್ತು. ಧಾರ್ಮಿಕ ಸ್ಥಳಕ್ಕೆ ಅಪಮಾನ ಮಾಡುವ ಒತ್ತಾಯ ಇದ್ದಿದ್ದು ಸ್ಪಷ್ಟವಾಗಿದೆ. ಇಂತಹ ವಿಚಾರಧಾರೆಗೆ ರಾಜ್ಯ ಸರ್ಕಾರದಲ್ಲಿ ಪುಷ್ಠಿ ಸಿಗುತ್ತದೆ ಎಂದು ವಿಶ್ವಾಸ ಇಟ್ಟು ಒತ್ತಡ ಹಾಕಲಾಗಿದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಎಸ್ ಐಟಿ ಮಾಡಿದೆ ಎಂದು ಹೇಳಿದರು.
ಎಸ್ ಐಟಿಯಲ್ಲಿರುವ ದಕ್ಷ ಪೊಲಿಸ್ ಅಧಿಕಾರಿಗಳಿಗೆ ಮುಕ್ತವಾದ ಸ್ವತಂತ್ರ ಕೊಟ್ಟಿರಲಿಲ್ಲ ಅನ್ನುವುದು ತನಿಖೆ ನಡೆದಿರುವ ರೀತಿಯಲ್ಲಿ ಬಹಳ ಸ್ಪಷ್ಟವಾಗುತ್ತದೆ. ಒಂದು ರೀತಿಯಲ್ಲಿ ಮಾಧ್ಯಮಗಳು ಪ್ರತಿ ಹಂತದಲ್ಲಿ ಎಲ್ಲ ಉತ್ಖನನದ ಮಾಹಿತಿ ನೀಡಿದಾಗ ಸರ್ಕಾರದ ನೈತಿಕ ಸ್ಥೈರ್ಯ ಕರಗಿ ಹೋಗಿ ಸರ್ಕಾರವು ಜನಾಕ್ರೋಶವನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸಬೆಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿಯ ಚಳುವಳಿಯನ್ನು ಗುರುತಿಸಿ ತಮ್ಮ ಉದ್ದೇಶ ಮತ್ತು ತನಿಖೆಯ ದಾರಿಯನ್ನು ಬದಲಾವಣೆ ಮಾಡಿ ಈಗ ನಿಜವಾದ ತನಿಖೆ ಪ್ರಾರಂಭ ಮಾಡಿದ್ದಾರೆ. ಇದರಲ್ಲಿ ಇನ್ನಿತರ ಕೇಸಿನಲ್ಲಿ ದಕ್ಷಿಣ ಕನ್ನಡ ಪೊಲಿಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಿದ್ದರಿಂದ ಸತ್ಯ ಹೊರತರಲು ಎಸ್ ಐಟಿ ಮುಂದಾಗುವ ಅನಿವಾರ್ಯತೆ ಇದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಧ್ಯಮಗಳು ಪ್ರಚಾರ ಮಾಡಿದ್ದು ನೋಡಿದರೆ ತನಿಖೆ ವಿಚಾರ ಬಿಟ್ಟು ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಸರ್ಕಾರ ಕಡಿವಾಣ ಹಾಕದಿರುವುದು ನೋಡಿದರೆ ಎಸ್ ಐಟಿ ತನಿಖೆಯಿಂದ ಸತ್ಯ ಹೊರ ಬರುವ ನಂಬಿಕೆ ಇಲ್ಲ. ರಾಜ್ಯ ಸರ್ಕಾರ ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತಿಳಿಸಲು ತನಿಖೆಯನ್ನು ಎನ್ ಐಎಗೆ ನೀಡಬೇಕು ಎಂದು ಅವರು ಪುನರುಚ್ಚರಿಸಿದರು.












Click it and Unblock the Notifications