ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ರೇಣುಕಾಚಾರ್ಯ
ದಾವಣಗೆರೆ, ಜೂ.10: ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರನ್ನು ಬಿಜೆಪಿಯ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಆಗಾಗ ಬಾಯ್ತುಂಬಾ ಹೊಗಳುವುದು/ ತೆಗಳುವುದನ್ನು ಜಾರಿಯಲ್ಲಿಟ್ಟಿದ್ದಾರೆ.
'ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ವ್ಯಕ್ತಿ. 8 ಬಾರಿ ಬಜೆಟ್ ಮಂಡಿಸಿದ್ದಾರೆ. 2 ಬಾರಿ ಉಪಮುಖ್ಯಮಂತ್ರಿಯಾಗಿ, ಈಗ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ' ಎಂದು ರೇಣುಕಾಚಾರ್ಯ ಅವರು ಸಿದ್ದು ಅವರನ್ನು 2 ತಿಂಗಳ ಹಿಂದೆ ವಾಚಾಮಗೋಚರ ಹೊಗಳಿ ಅಟ್ಟಕ್ಕೇರಿಸಿದ್ದರು.
ಆದರೆ ಇಂದು ವರಸೆ ಬದಲಿಸಿದ ರೇಣುಕಾಚಾರ್ಯ ಅವರು ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದಲ್ಲಿರುವ ಅಸಮರ್ಥ ಸಚಿವರನ್ನು ಸಂಪುಟದಿಂದ ಕೈ ಬಿಡಿ' ಎಂದು ಸಲಹೆ ರೂಪದ ಫರ್ಮಾನು ಹೊರಡಿಸಿರುವ ಮಾಜಿ ಸಚಿವ ರೇಣುಕಾಚಾರ್ಯ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸೇರಿದಂತೆ 15ಕ್ಕೂ ಹೆಚ್ಚು ಸಚಿವರು ಅಸಮರ್ಥರು ಇದ್ದಾರೆ. ಮುಖ್ಯಮಂತ್ರಿಗಳು ಇಂತಹ ಸಚಿವರನ್ನು ತಕ್ಷಣ ಸಂಪುಟದಿಂದ ಕೈ ಬಿಡಬೇಕು, ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಂಪುಟದಲ್ಲಿ 15ಕ್ಕೂ ಹೆಚ್ಚು ಸಚಿವರು ತಮ್ಮ ತಮ್ಮ ಖಾತೆ ಹಾಗೂ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಚರ್ಚೆ ನಡೆಸಬೇಕು. ಆದರೆ ಅದು ಆಗುತ್ತಿಲ್ಲ. ಜಿಲ್ಲಾ ಪ್ರವಾಸವನ್ನೂ ಕೈಗೊಳ್ಳುತ್ತಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರು ಮತ್ತು ಮುಖ್ಯಮಂತ್ರಿಗಳ ನಡುವೆ ಸಮನ್ವಯತೆಯೇ ಇಲ್ಲವಾಗಿದೆ ಎಂದು ರೇಣುಕಾಚಾರ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಉಮಾಶ್ರೀ ಅಶ್ಲೀಲ-ದ್ವಂದ್ವಾರ್ಥ ಡೈಲಾಗ್ ಕಲಾವಿದೆ)
ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳ ಮುಂದೆ ಕಚ್ಚಾಟ ನಡೆಸಿದ ಪ್ರಸಂಗ ನಡೆದಿದೆ. ಪೊಲೀಸ್ ಇಲಾಖೆಯಲ್ಲಿನ ವರ್ಗ ಸಂಘರ್ಷದಿಂದ ಕರ್ನಾಟಕ ರಾಜ್ಯದ ಗೌರವ ಬೀದಿಪಾಲಾಗುವಂತೆ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ಅವರನ್ನು ಕರೆಸಿ ಬುದ್ಧಿವಾದ ಹೇಳುವಂತಾಗಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗ ಸಂಘರ್ಷ ನಡೆದರೆ ಗೃಹ ಸಚಿವರು ರಾಜ್ಯದ ಜನರನ್ನು ಹೇಗೆ ಕಾಪಾಡುತ್ತಾರೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರದಂತಹ ಘಟನೆಗಳು ನಡೆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಚಕಾರವೆತ್ತಲಿಲ್ಲ. ಮುಖ್ಯಮಂತ್ರಿಗಳು ಇಂತಹ ಅಸಮರ್ಥ ಸಚಿವರನ್ನು ತಕ್ಷಣ ಸಂಪುಟದಿಂದ ಕೈ ಬಿಡಬೇಕು. ರಾಜ್ಯದ ಅಭಿವೃದ್ಧಿ ಮುಖ್ಯವೇ ಹೊರತು, ಕುರ್ಚಿ ಶಾಶ್ವತವಲ್ಲ ಎಂದು ಅವರು ಗಂಭೀರವಾಗಿ ಹೇಳಿದರು.












Click it and Unblock the Notifications