ಗಂಡ ಮನೆ ತೊರೆದು ಪ್ರತ್ಯೇಕವಾಸವಿದ್ದರೂ ಪತ್ನಿ ಜೀವನಾಂಶಕ್ಕೆ ಅರ್ಹ
ಬೆಂಗಳೂರು, ಮೇ 05; ಗಂಡನ ಕಿರಕುಳಕ್ಕೆ ಬೇಸತ್ತು ಹೆಂಡತಿ ಮನೆ ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಸಹ ಜೀವನಾಂಶ ಪಡೆಯಲು ಅರ್ಹರು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇಂತಹ ಪ್ರಕರಣದಲ್ಲಿ ಸ್ವಯಿಚ್ಛೆ ಹಾಗೂ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿ ಮನೆಬಿಟ್ಟು ಹೋಗಿದ್ದಾಳೆಂದು ಕೋರ್ಟ್‌ಗಳಲ್ಲಿ ಪ್ರತಿಪಾದಿಸಲು ಪತಿಗೆ ಅವಕಾಶವಿಲ್ಲ ಎಂದೂ ಸಹ ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಜೀವನಾಂಶ ಕೋರಿ ಪತ್ನಿ ಸಲ್ಲಿಸಿರುವ ಅರ್ಜಿ ಕುರಿತ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ಕೋರ್ಟ್ ವಿಚಾರಣೆ ರದ್ದುಪಡಿಸಬೇಕೆಂದು ಕೋರಿ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಇಂತಹ ಪ್ರಕರಣದಲ್ಲಿ ಪತ್ನಿಗೆ ಜೀವನಾಂಶ ನೀಡಲು ಗಂಡ ನಿರಾಕರಿಸುವಂತಿಲ್ಲ. ಗಂಡನಿಂದ ಜೀವನಾಂಶ ಪಡೆಯಲು ಪತ್ನಿ ಅರ್ಹಳಾಗಿರುತ್ತಾರೆ ಎಂದು ಪತಿಯ ಅರ್ಜಿಯನ್ನು ವಜಾಗೊಳಿಸಿದೆ.

ಅಧೀನ ನ್ಯಾಯಾಲಯಕ್ಕೆ ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ, ಪತಿ ಹಾಗೂ ಅತ್ತೆ ತನಗೆ ತುಂಬಾ ಕಿರುಕುಳ ನೀಡುತ್ತಿದ್ದರು. ತಾಯಿ ಸೂಚನೆ ಮೇರೆಗೆ ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಕಿರುಕುಳ ಸಹಿಸಲಾಗದೆ ಪತಿಯ ಮನೆ ತೊರೆದು ಬೇರೊಂದು ಮನೆಯಲ್ಲಿ ವಾಸ ಮಾಡುತ್ತದೆ ಎಂದು ಪತ್ನಿ ಹೇಳಿದ್ದಾರೆ.
ಅಂತಹ ಪರಿಸ್ಥಿತಿಯಲ್ಲಿ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿಯು ಪತಿಯ ಮನೆ ತೊರದಿದ್ದಾರೆ ಹಾಗೂ ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಾರೆಂಬ ತೀರ್ಮಾನಕ್ಕೆ ಬರಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?; ಆ ಇಬ್ಬರು ದಂಪತಿಗಳು 2016 ನವೆಂಬರ್ 1ರಂದು ವಿವಾಹವಾಗಿದ್ದರು. ದಿನ ಕಳೆದಂತೆ ಅವರ ವೈವಾಹಿಕ ಸಂಬಂಧ ಹಳಸಿತ್ತು. ಕಿರುಕುಳ, ಶಾಂತಿಭಂಗ ಮಾಡುವ ಉದ್ದೇಶದಿಂದ ಅವಮಾನಿಸಿದ ಆರೋಪ ಸಂಬಂಧ ಪತಿ ವಿರುದ್ಧ 2020ರ ಡಿಸೆಂಬರ್ 7ರಂದು ಪೊಲೀಸರಿಗೆ ಪತ್ನಿ ದೂರು ದಾಖಲಿಸಿದ್ದರು. ನಂತರ ಜೀವನಾಂಶ ಕೋರಿ ದೊಡ್ಡಬಳ್ಳಾಪುರ ಜೆಎಂಎಫ್‌ಸಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ರವಿ, ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 125(4)ರ ಪ್ರಕಾರ ದಂಪತಿ ಪರಸ್ಪರ ಒಪ್ಪಂದದ ಮೇರೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಗಂಡನಿಂದ ಜೀವನಾಶ ಪಡೆಯಲು ಪತ್ನಿ ಅರ್ಹಳಾಗಿರುವುದಿಲ್ಲ. ಅದರಂತೆ ಪತ್ನಿ ಸಹ ಸ್ವಯಿಚ್ಛೆಯಿಂದ ಮನೆ ತೊರೆದಿದ್ದು, ಆಕೆಗೆ ಜೀವನಾಂಶ ಕೊಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು. ಆದರೆ ನ್ಯಾಯಾಲಯ ಆ ವಾದವನ್ನು ಸಂಪೂರ್ಣ ತಳ್ಳಿಹಾಕಿದೆ.












Click it and Unblock the Notifications