ಚುನಾವಣೆ ನಡೆದರೆ ಮತ್ತೆ ಈ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ: ಸಿ ಟಿ ರವಿ
ಬೆಂಗಳೂರು, ಜೂನ್ 29: ಇವತ್ತು ಚುನಾವಣೆ ನಡೆದರೆ ಮತ್ತೆ ಈ ಸರಕಾರ ಅಧಿಕಾರಕ್ಕೆ ಬರುವುದಿಲ್ಲ. ಸಚಿವ ಸಂಪುಟದ ಅರ್ಧದಷ್ಟು ಸದಸ್ಯರೇ ಸೋಲುತ್ತಾರೆ. ಮತ ಹಾಕಿದವರು ಹಾದಿಬೀದಿಯಲ್ಲಿ ಈ ಸರಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಿಡಿಕಾರಿದ್ದಾರೆ.
ಈ ಕುರಿತು ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರ ಬಂದು ಒಂದು ತಿಂಗಳು ಕಳೆದಿದೆ. ಒಂದು ತಿಂಗಳಲ್ಲೇ ಜನರು ಈ ಸರಕಾರದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಕಾಂಗ್ರೆಸ್‍ನವರು ವಿಷಯಾಂತರ ಮಾಡಲು ಹೀಗೆ ಮಾಡುತ್ತಿದ್ದಾರೆ. ಈ ಸರಕಾರ ವಿಶ್ವಾಸಾರ್ಹತೆ ಕಳಕೊಂಡಿದೆ. ಸುಳ್ಳು ಆರೋಪಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದರೆ, ಬೆಟ್ಟ ಅಗೆದರೆ ಏನು ಸಿಗುತ್ತದೆ? ಇಲಿನೂ ಸಿಗೋಲ್ಲ ಎಂದರು.

ನಮ್ಮ ಆಡಳಿತಾವಧಿಯಲ್ಲಿ ಹಗರಣ ನಡೆದಿದ್ದರೆ ನಾವು ಭಯ ಪಡಬೇಕು. ಸುಳ್ಳು ಆರೋಪ ಹೊರಿಸಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಒಂದು ವರ್ಷದ ಹಿಂದೆ ಒಂದು ದೂರು ದಾಖಲಿಸಿದ್ದರು. ಇವತ್ತಿನವರೆಗೂ ಹಣ ಕೊಟ್ಟವರು ಯಾರು? ತಗೊಂಡವರು ಯಾರೆಂದು ತಿಳಿಸಿಲ್ಲ. ಸಾಕ್ಷ್ಯಾಧಾರ ಒದಗಿಸಿಲ್ಲ.
ಈ ಸರಕಾರಕ್ಕೆ ವಿಶ್ವಾಸಾರ್ಹತೆ ಇದ್ದರೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಮಂಡಿಸಲಿ. ಸಿದ್ದರಾಮಯ್ಯರ ಹಿಂದಿನ ಸರಕಾರ ಅವರನ್ನು ನೇಮಿಸಿತ್ತು. ಕಂಟ್ರಾಕ್ಟರ್ ಕೆಂಪಣ್ಣನ ಮೇಲೆ ನಂಬಿಕೆ ಇಡುವ ಅವರಿಗೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಮೇಲೆ ನಂಬಿಕೆ ಇರಬೇಕಲ್ಲವೇ? ಆಯೋಗದ ವರದಿಯನ್ನು ಆಧರಿಸಿ ಎಫ್‍ಐಆರ್ ಬುಕ್ ಮಾಡಲಿ. 8 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗಿದೆ ಎಂದು ವರದಿ ತಿಳಿಸಿದೆ. ಇದ್ದವರು ಮೂರು ಜನ; ಕದ್ದವರು ಯಾರು? ಕಂಟ್ರಾಕ್ಟರ್‍ಗೆ ವೈಯಕ್ತಿಕ ಹಿತಾಸಕ್ತಿ ಇರಬಹುದು. ನ್ಯಾಯಮೂರ್ತಿಗಳಿಗೆ ಹಾಗಿರಲು ಸಾಧ್ಯವಿಲ್ಲ. ಆದ್ದರಿಂದ ವರದಿ ಮಂಡಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತನಿಖೆಯ ಹೆಸರಿನಲ್ಲಿ ರಾಜಕೀಯ ನರೇಟಿವ್ ಮಾಡಲು ಅವರು ಹೊರಟಿದ್ದಾರೆ. ಬಿಜೆಪಿ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಿದ ಕಾರಣ ಪೊಲೀಸ್ ಸಬ್ ಇನ್‍ಸ್ಪೆಕ್ಟರ್‍ಗಳ ನೇಮಕಾತಿ ಹಗರಣದಲ್ಲಿ 50ಕ್ಕೂ ಹೆಚ್ಚು ಜನ ಜೈಲಿನಲ್ಲಿದ್ದಾರೆ. ಮುಚ್ಚಿ ಹಾಕುವುದಾದರೆ ಅದೇನೂ ಅಸಾಧ್ಯವಾಗಿರಲಿಲ್ಲ. ಬಿಟ್ ಕಾಯಿನ್ ಬಗ್ಗೆ ಮಾಹಿತಿ ಇದ್ದರೆ ಕೊಡಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.
ವರ್ಗಾವಣೆ ದಂಧೆ ಆರೋಪ ಕುರಿತು ಮಾತನಾಡಿ, ಎಷ್ಟು ದಿನ ಗುಟ್ಟು ಮುಚ್ಚಿಡಲು ಸಾಧ್ಯ? ಸರಕಾರ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡುತ್ತಿದೆಯಲ್ಲವೇ? ಅವರ ಹಿನ್ನೆಲೆ ಪರಿಶೀಲಿಸಿ. ಆಗ ಈ ಸರಕಾರದ ಪ್ರಾಮಾಣಿಕತೆ ಅರ್ಥವಾಗುತ್ತದೆ ಎಂದು ನುಡಿದರು. ಎಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಅವರಿಗೆ ನನಗಿಂತ ಹೆಚ್ಚಿನ ಮಾಹಿತಿ ಇರುತ್ತದೆ. ಅವರು ಆಧಾರ ಇಲ್ಲದೆ ಆರೋಪ ಮಾಡುತ್ತಾರೆಂದು ನನಗೆ ಅನಿಸುವುದಿಲ್ಲ ಎಂದು ತಿಳಿಸಿದರು.
ಹೆಚ್ಚು ಹಣ ನೀಡಿದವರಿಗೆ ಹುದ್ದೆ ನೀಡಲು ನಾಲ್ಕು ಬಾರಿ ನೇಮಕ ನಡೆದಿರುವ ಅನುಮಾನ ಬರುತ್ತಿದೆ ಎಂದು ಅವರು ನುಡಿದರು. ಸವಾಲು ಕರೆಯದೆ ಇದ್ದರೆ ಒಂದು ಹುದ್ದೆಗೆ ಒಂದು ತಿಂಗಳಲ್ಲಿ 4 ಬಾರಿ ಯಾಕೆ ಆದೇಶ ಬರುತ್ತದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಕಾಂಗ್ರೆಸ್ ಬೆಂಬಲದಿಂದಲೇ ಎರಡನೇ ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಕಾಂಗ್ರೆಸ್ ಸರಕಾರದ ಬಗ್ಗೆ ಆರೋಪ ಮಾಡುತ್ತಾರೆಂದರೆ ಅದು ನಿರಾಧಾರ ಎಂದು ಅನಿಸುವುದಿಲ್ಲ. ಹೆಚ್ಚಿನ ಆಧಾರ ಅವರ ಬಳಿ ಇರಬಹುದು ಎಂದು ತಿಳಿಸಿದರು.
ಆದೇಶ ಮಾಡಿ ಹಿಂಪಡೆಯುವುದು ಎಂದರೇನು? ಇದೊಂದು ರೀತಿಯ ದೆಹಲಿಯ ಮನೀಷ್ ಸಿಸೋಡಿಯ ಹಗರಣ ಇದ್ದಂತೆ ಎಂದು ವಿಶ್ಲೇಷಿಸಿದರು. ಮನೀಷ್ ಸಿಸೋಡಿಯ, ಅಬಕಾರಿ ಇಲಾಖೆಯಲ್ಲಿ ನಿಯಮಾವಳಿ ರಚಿಸಿ ಆಮೇಲೆ ಅದು ಕೊರಳಿಗೆ ಸುತ್ತಿಕೊಳ್ಳುವ ಸ್ಥಿತಿ ಬಂದಾಗ ಅದನ್ನು ಹಿಂಪಡೆದವರಲ್ಲವೇ? ಹಾಗೇ ಎಲ್1, ಎಲ್2 ಬಿಟ್ಟು ಬ್ಲ್ಯಾಕ್‍ಲಿಸ್ಟ್‍ನಲ್ಲಿರುವ ಎಲ್3 ಕಂಪೆನಿಗೆ ಕೊಟ್ಟು ಕೊರಳಿಗೆ ಸುತ್ತಿಕೊಳ್ಳುವ ಭೀತಿ ಕಾಡಿದಾಗ ಅದನ್ನು ಹಿಂಪಡೆದಿದ್ದಾರೆ ಎಂದು ವಿಶ್ಲೇಷಿಸಿದರು. ಸಹಿ ಹಾಕುವಾಗ ತಲೆಯಲ್ಲಿ ಸೆಗಣಿ ಇತ್ತೇ ಎಂದು ಕೇಳಿದರೆ ತಪ್ಪಾಗಲಾರದು ಅಲ್ಲವೇ? ಎಂದು ಪ್ರಶ್ನಿಸಿದರು.
ಇವರೇನೂ ಅನನುಭವಿಗಳಲ್ಲ. ಅನುಭವಿ ಸರಕಾರ, ಅನುಭವಿ ಸಿಎಂ. ಈ ಸರಕಾರ ಹಗರಣಗಳ ಮೂಲಕವೇ ಮುನ್ನುಡಿ ಬರೆದಿರುವುದು ಸ್ಪಷ್ಟವಾಗಿದೆ. ಈ ವಿಚಾರದಲ್ಲೂ ತನಿಖೆ ನಡೆಸಬೇಕು ಎಂದು ಸವಾಲು ಹಾಕಿದರು.












Click it and Unblock the Notifications