ಕಬ್ಬು ಬಿಲ್ ಪಾವತಿಗೆ ಎಥನಾಲ್ ಪರಿಗಣನೆ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಬೆಂಗಳೂರು,ಡಿಸೆಂಬರ್ 13: ರಾಜ್ಯ ಸರಕಾರವು ಇಲ್ಲಿನವರೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಸಕ್ಕರೆ, ಬಗಾಸ್, ಮೊಲಾಸಿಸ್, ಪ್ರೆಸ್‍ಮಡ್‍ಗಳಿಂದ ಬರುವ ಆದಾಯವನ್ನು ಮಾತ್ರ ಪರಿಗಣಿಸುತ್ತಿತ್ತು. ಸಕ್ಕರೆ ಉದ್ಯಮದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವರ್ಷದಲ್ಲಿ ಎಫ್‍ಆರ್ ಪಿ ದರದ ಮೇಲೆ ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲನ್ನು ಪಾವತಿಸಲು ಅನುಕೂಲವಾಗುವಂತೆ ಉಪ ಉತ್ಪನ್ನವಾದ ಎಥನಾಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸಕ್ಕರೆ ಖಾತೆ ಸಚಿವ ಶಂಕರ ಬಿ ಪಾಟೀಲ ಮುನೇನಕೊಪ್ಪ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅದರನ್ವಯ ಪ್ರಥಮ ಕಂತಿನಲ್ಲಿ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‍ಆರ್ ಪಿ ದರದ) ಜೊತೆಗೆ ಪ್ರತಿ ಮೆಟ್ರಿಕ್ ಟನ್ ಒಂದಕ್ಕೆ ರೂ. 50 ಅನ್ನು ಹೆಚ್ಚುವರಿಯಾಗಿ ಪಾವತಿಸಲು ಸಂಬಂಧಿಸಿದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ಕೊಡಲಾಗಿದೆ. ಇದರಿಂದಾಗಿ ರಾಜ್ಯದ ರೈತರಿಗೆ ರೂ. 204.47 ಕೋಟಿ ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲು ಸಿಗಲಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಕರ್ನಾಟಕವು ರಾಷ್ಟ್ರದ ಮೂರನೇ ಅತಿ ದೊಡ್ಡ ಸಕ್ಕರೆ ಉತ್ಪಾದಿಸುವ ರಾಜ್ಯವಾಗಿದೆ. ಮೊದಲನೇ ಸ್ಥಾನದಲ್ಲಿ ಉತ್ತರ ಪ್ರದೇಶ ಮತ್ತು ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯಗಳಿವೆ. ರಾಜ್ಯದಲ್ಲಿ ಒಟ್ಟು 89 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, 72 ಕಾರ್ಖಾನೆಗಳು ಕಾರ್ಯನಿರತವಾಗಿವೆ. ಇದರ ಪೈಕಿ 14 ಸಹಕಾರಿ ವಲಯದಲ್ಲಿವೆ. ಸಹಕಾರಿ ವಲಯ (ಗುತ್ತಿಗೆ)8, ಖಾಸಗಿ ವಲಯದಲ್ಲಿ 50 ಕಾರ್ಖಾನೆಗಳಿವೆ. ಇವುಗಳು 2021-22ರಲ್ಲಿ 622.26 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದು 59.78 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿವೆ ಎಂದರು.

31.10.2022ರ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆಗಳು 2021-22ನೇ ಹಂಗಾಮಿನಲ್ಲಿ ನುರಿಸಿದ ಕಬ್ಬಿಗೆ ರೂ. 19,634.84 ಕೋಟಿ ಪಾವತಿಸಬೇಕಿದ್ದು, 19,922.39 ಕೋಟಿ ಪಾವತಿಸಿದ್ದು, ಯಾವುದೇ ಬಾಕಿ ಇರುವುದಿಲ್ಲ. ಪಾವತಿ ಪ್ರಮಾಣವು ಶೇ 100ರಷ್ಟಿದೆ. ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರಕಾರ ನಿಗದಿಪಡಿಸಿದ ಎಫ್‍ಆರ್ ಪಿದರಕ್ಕಿಂತ ಹೆಚ್ಚು ಕಬ್ಬಿನ ದರ ಪಾವತಿಸಿವೆ. 2022-23ನೇ ಸಾಲಿನಲ್ಲಿ ಒಟ್ಟು 78 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸುವ ಅಂದಾಜಿದೆ. ಈ ಪೈಕಿ 68 ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಿವೆ. 17-11-2022ರಲ್ಲಿದ್ದಂತೆ ಈ ಕಾರ್ಖಾನೆಗಳು 119.46 ಲಕ್ಷ ಮೆ.ಟನ್. ಕಬ್ಬು ನುರಿಸಿ 38.77 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿವೆ ಎಂದು ಹೇಳಿದರು.
ಸಕ್ಕರೆ ನಿರ್ದೇಶನಾಲಯವು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಾಗೂ ಮಂಡ್ಯದ ಭಾರತರತ್ನ ಕಬ್ಬು ಸಂಶೋಧನಾ ಸಂಸ್ಥೆಗೆ ಕಬ್ಬಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಮತ್ತು ತರಬೇತಿ ಸಂಬಂಧ ವಾರ್ಷಿಕ ಅನುದಾನವಾಗಿ 2022-23ನೇ ಆರ್ಥಿಕ ವರ್ಷಕ್ಕೆ ರೂ. 75 ಲಕ್ಷ ಅನುದಾನ ನೀಡಿದೆ ಎಂದರು.
ರಾಜ್ಯದಲ್ಲಿ ಕೆಲವು ಸಹಕಾರಿ ಸಕ್ಕರೆ ಕಾರ್ಖಾನೆಗಳು ದುಡಿಯುವ ಬಂಡವಾಳದ ಕೊರತೆ ಮತ್ತು ಹಣಕಾಸಿನ ದುಸ್ಥಿತಿಯಿಂದ ಸ್ಥಗಿತವಾಗಿದ್ದವು. ಸರಕಾರವು ಈ ಪೈಕಿ 9 ಸಕ್ಕರೆ ಕಾರ್ಖಾನೆಗಳನ್ನು ಕಬ್ಬು ಬೆಳೆಗಾರ ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಪುನಶ್ಚೇತನಗೊಳಿಸಲು ಗುತ್ತಿಗೆ ಆಧಾರದ ಮೇಲೆ ಖಾಸಗಿ ಉದ್ಯಮಿಗಳಿಗೆ ಕೊಟ್ಟಿದೆ ಎಂದು ತಿಳಿಸಿದರು
ಮಂಡ್ಯದ ಸರಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಂಪನಿಯನ್ನು ಸಾರ್ವಜನಿಕ ವಲಯದಲ್ಲಿ ಮುಂದುವರಿಸಿ ಪುನಶ್ಚೇತನಗೊಳಿಸಲು ಸರಕಾರ ನಿರ್ಧರಿಸಿದೆ. 2022-23ರಲ್ಲಿ ರೂ. 50 ಕೋಟಿಯನ್ನು ಬಜೆಟ್‍ನಲ್ಲಿ ಮೀಸಲಿಟ್ಟಿದೆ. ಇಲ್ಲಿನವರೆಗೆ 45 ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ 2022ನೇ ಸಾಲಿನಲ್ಲಿ ಹೊಸ ಸಕ್ಕರೆ ಕಾರ್ಖಾನೆ ಹಾಗೂ ಎಥನಾಲ್ ಘಟಕ ಸ್ಥಾಪನೆಗಾಗಿ ಅಂತರ ಪ್ರಮಾಣಪತ್ರ ಕೋರಿ 42 ಹೊಸ ಅರ್ಜಿಗಳು ಉದ್ಯಮಿಗಳಿಂದ ಸ್ವೀಕೃತವಾಗಿವೆ ಎಂದು ತಿಳಿಸಿದರು.












Click it and Unblock the Notifications