ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ ಆಯ್ಕೆ
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಮಹಾಸಭೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಮಿತಿಯ ಎಲ್ಲ ಸದಸ್ಯರು ಒಮ್ಮತದಿಂದ ಖಂಡ್ರೆ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ಬಳಿಕ ಮಾತನಾಡಿದ ಈಶ್ವರ್ ಖಂಡ್ರೆ, "ನನ್ನನ್ನು ಈ ಮಹತ್ವದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಕಳೆದ 13 ವರ್ಷಗಳ ಕಾಲ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಈಶ್ವರ್ ಖಂಡ್ರೆ, ಇತ್ತೀಚಿನ ಒಂದು ವರ್ಷ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಗಾರಿಕೆಯನ್ನು ಕೂಡ ಯಶಸ್ವಿಯಾಗಿ ನಿಭಾಯಿಸಿದ್ದರು. ತಮ್ಮ ತಂದೆ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಆದರ್ಶಗಳನ್ನು ಸ್ಮರಿಸಿದ ಅವರು, ವೀರಶೈವ ಲಿಂಗಾಯತ ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯುವ ಸಂಕಲ್ಪವನ್ನು ಪುನರುಚ್ಚರಿಸಿದರು.

ವೀರಶೈವ ಮತ್ತು ಲಿಂಗಾಯತ ಬೇರೆ ಅಲ್ಲ
"ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ಸಮಾಜದ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸುವುದೇ ನಮ್ಮ ಪ್ರಮುಖ ಗುರಿ" ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು. ಒಗ್ಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ ಎಂಬ ನಂಬಿಕೆಯೊಂದಿಗೆ ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಸಮಾಜದಲ್ಲಿ ಶೇ.40-50ರಷ್ಟು ಬಡವರು ಹಾಗೂ ಶೇ.30ಕ್ಕಿಂತ ಹೆಚ್ಚು ತೀವ್ರ ಹಿಂದುಳಿದ ವರ್ಗದವರು ಇರುವುದನ್ನು ಉಲ್ಲೇಖಿಸಿದ ಖಂಡ್ರೆ, ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಹಕ್ಕುಗಳಿಗಾಗಿ ಮಹಾಸಭೆಯ ಮೂಲಕ ನಿರಂತರ ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಸಮುದಾಯಕ್ಕೆ ಖಂಡ್ರೆ ಭರವಸೆಗಳೇನು?
ರಾಷ್ಟ್ರೀಯ ಅಧ್ಯಕ್ಷರಾಗಿ ಬೆಂಗಳೂರು ನಗರದಲ್ಲಿ 1,000 ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕೆ ಮುಂದಿನ ಮಾರ್ಚ್ ತಿಂಗಳೊಳಗೆ ಶಂಕುಸ್ಥಾಪನೆ ಹಾಗೂ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎಂದರು. ಅಲ್ಲದೆ ವೀರಶೈವ ಲಿಂಗಾಯತ ಭವನ ಇಲ್ಲದ ಜಿಲ್ಲೆಗಳಲ್ಲಿ ಭವನಗಳ ನಿರ್ಮಾಣ ಮಾಡಲಾಗುವುದು. ಸಮುದಾಯದ ಪ್ರತಿಭಾವಂತ ಯುವಕರಿಗೆ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಂಚಾಚಾರ್ಯರು, ಜಗದ್ಗುರುಗಳು, ಮಠಾಧಿಪತಿಗಳು, ಹರ-ಚರ ಗುರುಮೂರ್ತಿಗಳು ಹಾಗೂ ವಿರಕ್ತರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ, ಎಲ್ಲ ಜಾತಿ-ಜನಾಂಗದವರನ್ನೂ ಜೊತೆಯಲ್ಲಿ ತೆಗೆದುಕೊಂಡು ಲೋಕಕಲ್ಯಾಣ, ಜನಹಿತ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವುದಾಗಿ ಖಂಡ್ರೆ ತಿಳಿಸಿದರು.
1904ರಲ್ಲಿ ಪರಮಪೂಜ್ಯ ಹಾನಗಲ್ ಕುಮಾರೇಶ್ವರ ಮಹಾಸ್ವಾಮೀಜಿ ಅವರ ದಿವ್ಯ ಸಂಕಲ್ಪದಿಂದ ಸ್ಥಾಪಿತವಾದ ಈ ಮಹಾಸಭೆಗೆ, ಸಿರಸಂಗಿ ಲಿಂಗರಾಜದೇಸಾಯರು, ರಾಜಾ ಲಖಮನಗೌಡರು, ಫ.ಗು.ಹಳಕಟ್ಟಿಯವರು, ಬಂಥನಾಳ ಸಂಗನ ಬಸವಸ್ವಾಮಿಗಳು, ಶತಾಯುಷಿ ಡಾ.ಶಿವಕುಮಾರ ಮಹಾಸ್ವಾಮೀಜಿ, ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಸೇರಿ ಮೊದಲಾದ ಮಹಾನ್ ನಾಯಕರು ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ಅಂತಹ ಮಹತ್ವದ ಪರಂಪರೆಯ ಈ ಸ್ಥಾನದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಜೀವನದ ದೊಡ್ಡ ಸೌಭಾಗ್ಯ ಎಂದು ಈಶ್ವರ್ ಖಂಡ್ರೆ ನುಡಿದರು.












Click it and Unblock the Notifications