ಬಾಗಲಕೋಟೆಯಲ್ಲಿ ಜನಸಾಮಾನ್ಯರ ಪಕ್ಷ ಉದಯ
ಬಾಗಲಕೋಟೆ, ಜನವರಿ 15: ಇಲ್ಲಿನ ಪುಣ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಜನಸಾಮಾನ್ಯರ ಪಕ್ಷ ಉದಯವಾಗಿದೆ. ರೈತರು, ಜನ ಸಾಮಾನ್ಯರಿಗಾಗಿ ಸ್ಥಾಪಿಸಿದ ಪಕ್ಷ ಇದಾಗಿದೆ. ಪ್ರೊ. ಚಂದ್ರಶೇಖರ ಪಾಟೀಲ ಅವರು ಹೊಸ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿ ಪಕ್ಷದ ಲಾಂಛನವನ್ನು ಅನಾವರಣಗೊಳಿಸಿದರು.
ರಾಜ್ಯದ ನೆಲ, ಜಲ, ಭಾಷೆಯ ರಕ್ಷಣೆ ಹಾಗೂ ಪ್ರಾದೇಶಿಕ ಅಸಮಾನತೆಗೆ ಧಕ್ಕೆ ಬಂದಿರುವ ಕಾರಣ, ಹೋರಾಟಗಾರರು, ಸಾಹಿತಿಗಳು, ಜನ ಸಾಮಾನ್ಯರು ಹೊಸ ಪಕ್ಷ ಸ್ಥಾಪನೆ ಮಾಡುವ ಅಗತ್ಯ ಕಂಡು ಬಂದಿದ್ದರಿಂದ ಹೊಸ ಪಕ್ಷ ಸ್ಥಾಪಿಸಲಾಗಿದೆ ಎಂದು ಶಿಕ್ಷಣ ತಜ್ಞ, ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ ಅವರು ಹೇಳಿದರು.
ಉತ್ತರ ಕರ್ನಾಟಕ ಹಲವಾರು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದೆ. ಇದರಲ್ಲಿ ಕಳಸಾ ಬಂಡೂರಿ ಸಮಸ್ಯೆ ಬಹಳ ಪ್ರಮುಖವಾದದ್ದು. ಹಲವಾರು ದಶಕಗಳಿಂದ ಈ ಬಗ್ಗೆ ರಾಜಕಾರಣಿಗಳು ದಿವ್ಯ ನಿರ್ಲಕ್ಷ ತೋರಿಸುತ್ತಾ ಬಂದಿದ್ದಾರೆ.
ಹಲವಾರು ಭರವಸೆಗಳನ್ನು ನೀಡುತ್ತಿರುವ ರಾಜಕಾರಣಿಗಳು ಈ ಸಮಸ್ಯೆಯ ಪರಿಹಾರಕ್ಕೆ ಯಾವುದೇ ಕಾಳಜಿಯನ್ನು ತೋರಿಸುತ್ತಿಲ್ಲ ಎನ್ನುವುದು ವಿಷಾದನೀಯ. ಮೂರು ಪಕ್ಷಗಳು ಕೂಡಾ ಒಗ್ಗಟ್ಟಾಗಿ ಈ ಸಮಸ್ಯೆಯನ್ನು ಪರಿಹರಿಸುವುದು ಬಹಳ ಮುಖ್ಯವಾಗಿದೆ. ಮುಂಬರುವ ಚುನಾವಣೆಯಲ್ಲಿ ಜನ ಸಾಮಾನ್ಯರ ಪಕ್ಷದ ಪರವಾಗಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಪ್ರಚಾರ ಮಾಡುವುದಾಗಿಯೂ ಸಾಹಿತಿ ಚಂದ್ರಶೇಖರ ಪಾಟೀಲರು ಹೇಳಿದರು.

ವಿಜಯ್ ಕುಲಕರ್ಣಿ ಮಾತನಾಡಿ
ಕಳಸಾ ಬಂಡೂರಿ ಕೇಂದ್ರ ಯುವ ಸಮಿತಿ ಅಧ್ಯಕ್ಷ ವಿಜಯ್ ಕುಲಕರ್ಣಿ ಮಾತನಾಡಿ, ಮೂರು ಪಕ್ಷಗಳ ನಾಯಕರು ಮಹದಾಯಿ ಯೋಜನೆಗೆ ಎಳ್ಳು ನೀರು ಬಿಟ್ಟಿದ್ದಾರೆ. ಹೀಗಾಗಿ ನಮ್ಮ ಬೇಡಿಕೆಯನ್ನು ನಾವೇ ಈಡೇರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನಲೆಯಲ್ಲಿ ಜನ ಸಾಮಾನ್ಯರ ಪಕ್ಷದ ಉದಯವಾಗಿದ್ದು, 224 ಕ್ಷೇತ್ರಗಳಲ್ಲಿಯೂ ನಮ್ಮ ರೈತ ನಾಯಕರೇ ಸ್ಪರ್ಧೆಗೆ ಇಳಿಯಲಿದ್ದಾರೆ. ಮಹದಾಯಿ ಹೋರಾಟಗಾರರ ಸಮ್ಮುಖದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಎಲ್ಲರೂ ಸಹಮತ ಸೂಚಿಸಿರುವುದು ಬಹಳ ಸಂತಸದ ವಿಷಯವಾಗಿದೆ ಎಂದರು.
ಡಾ. ಸಿದ್ದರಾಮಯ ಸ್ವಾಮೀಜಿ ಮಾತನಾಡಿ
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮಯ ಸ್ವಾಮೀಜಿ ಮಾತನಾಡಿ, ಕರ್ನಾಟಕ ಅಭಿವೃದ್ದಿಗೆ ಸರಕಾರವೂ ತಾರತಮ್ಯವನ್ನು ಮಾಡಿದ ಕಾರಣ ಪ್ರತ್ಯೇಕ ರಾಜ್ಯದ ಕೂಗು ಆ ಭಾಗದ ಜನರಲ್ಲಿ ಮೂಡಿದೆ ಎಂದರು. ಯಾವುದೇ ಪಕ್ಷದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲಿ, ಆದರೆ ದಕ್ಷಿಣ ಕರ್ನಾಟಕ ಅಭಿವೃದ್ದಿಗೆ ನೀಡುವ ಒತ್ತನ್ನು ಉತ್ತರ ಕರ್ನಾಟಕಕ್ಕೆ ನೀಡಿಲ್ಲ. ಇಂದಿಗೂ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಈ ಭಾಗ ತೀರ ಹಿಂದುಳಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನ ಸಾಮಾನ್ಯರ ವೇದಿಕೆಯ ಅಧ್ಯಕ್ಷ ಡಾ. ಅಯ್ಯಪ್ಪ
ಜನ ಸಾಮಾನ್ಯರ ವೇದಿಕೆಯ ಅಧ್ಯಕ್ಷ ಡಾ. ಅಯ್ಯಪ್ಪ ಮಾತನಾಡಿ, ರಾಜಕಾರಣಿಗಳೂ ಸಮಸ್ಯೆಗಳನ್ನು ಜೀವಂತವಿಡುವಲ್ಲಿ ನಿಸ್ಸೀಮರು. ಹಲವಾರು ದಶಕಗಳಿಂದ ರಾಜಕಾರಣಿಗಳಿಗೆ ನೀಡಿರುವ ಮನವಿಗಳು ಘೋರ್ಕಲ್ಲ ಮೇಲೆ ನೀರು ಸುರಿದಂತಾಗಿವೆ. ಈ ಭ್ರಷ್ಟ ರಾಜಕಾರಣಿಗಳ ನಿಜವಾದ ಮುಖವಾಡವನ್ನು ಬಯಲು ಮಾಡುವುದು ಹಾಗೂ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಉದ್ದೇಶವಾಗಿದೆ ಎಂದರು. ಈ ಹಿನ್ನಲೆಯಲ್ಲಿ ಜನ ಸಾಮಾನ್ಯರ ಕೈಗೆ ಆಡಳೀತ ನೀಡುವ ಉದ್ದೇಶದಿಂದ ನಾವು ಈ ಪಕ್ಷವನ್ನು ಪ್ರಾರಂಭಿಸಿದ್ದೇವೆ ಎಂದರು.

ಉತ್ತರ ಕರ್ನಾಟಕಕ್ಕೆ ಹಣ ಮೀಸಲು ಇಟ್ಟಿಲ್ಲ
ರಾಜ್ಯ ಸರಕಾರವೂ ನಂಜುಂಡಪ್ಪ ವರದಿ ಅನ್ವಯ ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಹಣ ಮೀಸಲು ಇಟ್ಟಿಲ್ಲ. ರಸ್ತೆ, ನೀರಾವರಿ, ಶಿಕ್ಷಕರ ಕೊರತೆ, ಬಡತನ ಸೇರಿದಂತೆ ನಾನಾ ಸಮಸ್ಯೆಗಳಿಂದ ಅಲ್ಲಿನ ಜನರು ಭಾರಿ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಇನ್ನೂ ಗೋವಾ ರಾಜ್ಯಕ್ಕೆ ಹೋದರು ಅಲ್ಲಿಯೂ ಸೂಕ್ತ ರಕ್ಷಣೆ ಸವಲತ್ತುಗಳು ಇಲ್ಲದೆ ನೊಂದಿದ್ದಾರೆ ಎಂದು ಹೋರಾಟಗಾರರು ಹೇಳಿದರು.

ನೆಲ, ಜಲ, ಭಾಷೆಯ ಸ್ಥಾನವನ್ನು ಕಳೆದುಕೊಂಡಿದೆ
ರಾಜಕಾರಣಿಗಳ ನಿರ್ಲಕ್ಷದಿಂದಲೇ ಇಂದು ನಮ್ಮಲ್ಲಿನ ನೆಲ, ಜಲ, ಭಾಷೆಯ ಸ್ಥಾನವನ್ನು ಕಳೆದುಕೊಂಡಿದ್ದೇವೆ. ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹರಾಷ್ಟ್ರಕ್ಕೆ ನಮ್ಮ ನೆಲ ನೀಡಿ ಕಳೆದುಕೊಂಡಿದ್ದೇವೆ ಎಂದ ಅವರು ಬೆಳಗಾವಿ ಪ್ರದೇಶ ಮಹರಾಷ್ಟ್ರಕ್ಕೆ ಸೇರಬೇಕು ಎನ್ನುವುದು ತಪ್ಪು ಅದು ಎಂದಿಗೂ ಕರ್ನಾಟಕಕ್ಕೆ ಸೇರಿದ್ದು ಎಂದು ಸಿದ್ದರಾಮ ಸ್ವಾಮೀಜಿ ನುಡಿದರು.












Click it and Unblock the Notifications