ಈದಿನ.ಕಾಮ್ ಸಮೀಕ್ಷೆ: ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಲಿದೆಯಾ ಬೊಮ್ಮಾಯಿ ಸರ್ಕಾರ?
ಬೆಂಗಳೂರು, ಏಪ್ರಿಲ್. 26: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಭಾರಿ ಆಡಳಿತ ವಿರೋಧಿ ಅಲೆ ಎದ್ದಿದೆ. ಇದು ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ ಎಂದು ಕನ್ನಡದ ಈದಿನ.ಕಾಮ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.
ಕನ್ನಡದ ಈದಿನ.ಕಾಮ್ ರಾಜ್ಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ರಾಜ್ಯದ ವಿವಿಧ ಭಾಗಗಳ ನಾನಾ ಸಮುದಾಯಗಳ ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಸಮೀಕ್ಷೆಯ ಭಾಗವಾಗಿ, ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಮತ್ತೊಂದು ಅವಕಾಶ ಸಿಗಬೇಕು ಎಂದು ನೀವು ಭಾವಿಸುತ್ತೀರಾ ಎಂದು ಜನರನ್ನು ಕೇಳಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ 32% ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ತಿಳಿಸಿಲ್ಲ.

ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿದವರಲ್ಲಿ ಶೇಕಡಾ 67 ರಷ್ಟು ಮತದಾರರು ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಬಾರದು ಎಂದು ಉತ್ತರಿಸಿದ್ದಾರೆ. ಶೇ.33 ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಅವಕಾಶ ಸಿಗಬೇಕು ಎಂದು ಉತ್ತರಿಸಿದ್ದಾರೆ.

ಈದಿನ.ಕಾಮ್ ರಾಜ್ಯದ 183 ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಇನ್ನೂ 28 ಕ್ಷೇತ್ರಗಳ ಸಮೀಕ್ಷೆ ನಡೆಯಬೇಕಿದೆ. ರಾಜ್ಯದ ಜನಸಂಖ್ಯೆಯನ್ನು ಪ್ರತಿನಿಧಿಸಲು ವಿವಿಧ ಸಮುದಾಯಗಳಿಂದ ಆಯ್ಕೆಯಾದ ಸುಮಾರು 40,000 ಜನರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ 16 ಬೂತ್‌ಗಳ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆಯಲ್ಲಿ 55% ಪುರುಷರು ಮತ್ತು 45% ಮಹಿಳೆಯರು ಭಾಗಿಯಾಗಿದ್ದಾರೆ.

ಸಮೀಕ್ಷೆಯ ಪ್ರಕಾರ, ಬಸವರಾಜ ಬೊಮ್ಮಾಯಿ ಅವರಿಗೆ ಆಡಳಿತ ನಡೆಸಲು ಮತ್ತೊಂದು ಅವಕಾಶ ನೀಡಬೇಕೇ ಎಂಬ ಪ್ರಶ್ನೆಗೆ 27% ಬಿಜೆಪಿ ಬೆಂಬಲಿಗರು ಬೇಡ ಎಂಬ ಉತ್ತರವನ್ನು ನೀಡಿದ್ದಾರೆ. ನಿರೀಕ್ಷೆಯಂತೆ, ಹೆಚ್ಚಿನ ಕಾಂಗ್ರೆಸ್ (87%) ಮತ್ತು ಜಾತ್ಯತೀತ ಜನತಾ ದಳ (88%) ಬೆಂಬಲಿಗರು ಬಿಜೆಪಿಗೆ ಮತ್ತೊಂದು ಅವಕಾಶ ನೀಡಬಾರದು ಎಂದಿದ್ದಾರೆ.
ಸಮೀಕ್ಷೆಯಲ್ಲಿ ಈದಿನ.ಕಾಮ್ ಜಾತಿ ಮತ್ತು ಸಮುದಾಯವಾರು ಪ್ರತಿಕ್ರಿಯೆಗಳನ್ನು ಸಹ ಬಹಿರಂಗಪಡಿಸಿದೆ. ಮೇಲ್ಜಾತಿ ಹಿಂದೂಗಳು (ಬ್ರಾಹ್ಮಣರು, ವೈಶ್ಯರು, ಇತ್ಯಾದಿ) ಪ್ರಸ್ತುತ ಸರ್ಕಾರದ ಪರವಾಗಿ ಮತ ನೀಡಿದ್ದಾರೆ. ಶೇ.57ರಷ್ಟು ಮೇಲ್ಜಾತಿಗಳು ಬಿಜೆಪಿಯನ್ನೇ ಮರು ಆಯ್ಕೆ ಮಾಡಬೇಕೆಂದು ಬಯಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಲಿಂಗಾಯತರಲ್ಲಿ 53% ಸರ್ಕಾರದ ಪರವಾಗಿದ್ದರೇ, 47% ಸರ್ಕಾರದ ವಿರುದ್ಧವಾಗಿದ್ದಾರೆ. ಇನ್ನು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು, ಒಕ್ಕಲಿಗರು ಮತ್ತು ಕುರುಬರು ಈ ಸರ್ಕಾರದ ವಿರುದ್ಧವಾಗಿ ಹೆಚ್ಚಿನ ಒಲವು ತೋರಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.












Click it and Unblock the Notifications