ಫ್ಯಾಮಿಲಿ ಹ್ಯಾಪಿನೆಸ್ ಕಿಟ್ ವಿತರಣೆಗೆ ಸಚಿವ ಬಿ.ಸಿ.ನಾಗೇಶ್ ಚಾಲನೆ
ಬೆಂಗಳೂರು, ಮಾರ್ಚ್ 4: ಬೆಂಗಳೂರಿನಲ್ಲಿ ದುರ್ಬಲ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಕುಟುಂಬಗಳಿಗೆ ಫ್ಯಾಮಿಲಿ ಹ್ಯಾಪಿನೆಸ್ ಕಿಟ್ ಅನ್ನು ವಿತರಿಸುವ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಿದ್ದಾರೆ.
ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ, ಮಲ್ಲೇಶ್ವರಂನ 10 ವಿದ್ಯಾರ್ಥಿಗಳಿಗೆ 'ಫ್ಯಾಮಿಲಿ ಹ್ಯಾಪಿನೆಸ್ ಕಿಟ್' ಗಳನ್ನು ವಿತರಿಸಿದರು. ಆ ಮೂಲಕ ಅಕ್ಷಯ ಪಾತ್ರೆ ಪ್ರತಿಷ್ಠಾನದ ಉಪಕ್ರಮವಾಗಿರುವ 'ಫ್ಯಾಮಿಲಿ ಹ್ಯಾಪಿನೆಸ್ ಕಿಟ್'ನ ಸಾಂಕೇತಿಕ ವಿತರಣಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
10,000 'ಫ್ಯಾಮಿಲಿ ಹ್ಯಾಪಿನೆಸ್ ಕಿಟ್' ಗಳನ್ನು ಫಲಾನುಭವಿ ಮಕ್ಕಳಿಗೆ ನೀಡುವ ಪ್ರತಿಷ್ಠಾನದ ಉಪಕ್ರಮವನ್ನು ಪ್ರಾರಂಭಿಸಲು ಈ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಂದಿನ ವಾರಗಳಲ್ಲಿ ನಗರದ ಹಲವು ಶಾಲೆಗಳಿಗೆ 10,000 'ಫ್ಯಾಮಿಲಿ ಹ್ಯಾಪಿನೆಸ್ ಕಿಟ್' ಗಳನ್ನು ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಫ್ಯಾಮಿಲಿ ಹ್ಯಾಪಿನೆಸ್ ಕಿಟ್ ನಲ್ಲಿ ಆಹಾರ ಪದಾರ್ಥ:
ಕುಟುಂಬದ ನಾಲ್ಕು ಸದಸ್ಯರ ಅಗತ್ಯಕ್ಕೆ ಅನುಗುಣವಾಗಿ ಕಿಟ್ ನಲ್ಲಿ ಸಾಮಗ್ರಿಗಳನ್ನು ನೀಡಲಾಗುತ್ತದೆ. ಪ್ರತಿ ಕಿಟ್ ನಲ್ಲಿ 10 ಕೆ.ಜಿ ಅಕ್ಕಿ, ತೊಗರಿ ಬೇಳೆ, ಕಡ್ಲೆ ಬೇಳೆ, ಕಡಲೆ ಬೀಜ, ಅಡುಗೆ ಎಣ್ಣೆ, ಸಾಂಬಾರ್ ಪುಡಿ, ಮೆಣಸಿನ ಪುಡಿ, ಅರಿಶಿನ, ಬೆಲ್ಲ, ಐಯೋಡಿನ್ ಉಪ್ಪು ಮತ್ತು ಗ್ಲುಕೋಸ್ ಬಿಸ್ಕೆಟ್ಸ್ ಇರುತ್ತದೆ. ಇದರ ಜೊತೆಗೆ ಟೂತ್ ಪೇಸ್ಟ್, ಸೋಪು ಹಾಗೂ ಸಾನಿಟರಿ ನ್ಯಾಪ್ಕಿನ್, ಎರಡು ಕ್ಲಾಸ್ ಮೇಟ್ ಪುಸ್ತಕ ಹಾಗೂ ಕೊ-19ವಿಡ್ ಜಾಗೃತಿ ಮಾಹಿತಿ ಪುಸ್ತಕವನ್ನು ನೀಡಲಾಗುತ್ತದೆ.

ಕೊವಿಡ್-19 ಕಾಲದಲ್ಲಿ ಕಿಟ್ ವಿತರಣೆ ಕಾರ್ಯಕ್ರಮ:
ಅಕ್ಷಯ ಪಾತ್ರೆ ಪ್ರತಿಷ್ಠಾನವು ದುರ್ಬಲ ವರ್ಗದವರಿಗೆ ಆಹಾರ ಪರಿಹಾರವನ್ನು - ಸರ್ಕಾರ, ಕಾರ್ಪೊರೇಟ್ ಸಂಸ್ಥೆಗಳು, ಸರ್ಕಾರದ ಅಂಗ ಸಂಸ್ಥೆಗಳಾದ ಬೆಂಗಳೂರು ಸಂಚಾರಿ ಪೊಲೀಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ನೀಡುತ್ತಿದೆ. ಬಿಸಿಯೂಟದ ಜೊತೆ, ಪ್ರತಿಷ್ಠಾನವು ಅಗತ್ಯಕ್ಕೆ ತಕ್ಕಂತೆ ದಿನಸಿ ಕಿಟ್, ಹ್ಯಾಪಿನೆಸ್ ಕಿಟ್, ಫ್ಯಾಮಿಲಿ ಹ್ಯಾಪಿನೆಸ್ ಕಿಟ್, ಶಕ್ತಿ ಕಿಟ್, ರಕ್ಷಾ ಕಿಟ್ ಗಳನ್ನು ಫಲಾನುಭವಿಗಳಿಗೆ ನೀಡುತ್ತಿದೆ.
7.80 ಲಕ್ಷ ಹ್ಯಾಪಿನೆಸ್ಸ್ ಕಿಟ್:
ಆಹಾರ ಪರಿಹಾರ (ಫುಡ್ ರಿಲೀಫ್) ಕಾರ್ಯಕ್ರಮದ ಪ್ರಾರಂಭವಾದಾಗಿನಿಂದ ಈವರೆಗೆ ಕರ್ನಾಟಕದ ಹಲವು ಸರ್ಕಾರಿ ಶಾಲೆಗಳಿಗೆ ಪ್ರತಿಷ್ಠಾನವು ಒಟ್ಟು 7.80 ಲಕ್ಷ ಹ್ಯಾಪಿನೆಸ್ಸ್ ಕಿಟ್ ಹಾಗೂ ಫ್ಯಾಮಿಲಿ ಹ್ಯಾಪಿನೆಸ್ಸ್ ಕಿಟ್ ಅನ್ನು ನೀಡಿದೆ. 2020-21ರಲ್ಲಿ ಅಂದಾಜು 4.45 ಲಕ್ಷ ಕಿಟ್ ಮತ್ತು 2021-22ರಲ್ಲಿ ಅಂದಾಜು 3.35 ಲಕ್ಷ ಕಿಟ್ ಅನ್ನು ವಿತರಿಸಲಾಗಿದೆ. ಆಹಾರ ಪರಿಹಾರ ಉಪಕ್ರಮದಲ್ಲಿ ರಾಜ್ಯದೆಲ್ಲೆಡೆ 22.30 ಲಕ್ಷ ಫಲಾನುಭವಿಗಳಿಗೆ 2 ಕೋಟಿಗೂ ಹೆಚ್ಚು ಬಿಸಿಯೂಟವನ್ನು ಅಕ್ಷಯ ಪಾತ್ರೆ ಪ್ರತಿಷ್ಠಾನವು ವಿತರಿಸಿದೆ.












Click it and Unblock the Notifications