E-Swathu: ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್‌: ನ.2ರಿಂದ ಇ-ಸ್ವತ್ತಿಗೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆಗಳಿರುವ ಹಾಗೂ ದಾಖಲೆಗಳಿಲ್ಲದ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ನವೆಂಬರ್ 2ರಿಂದ ಅರ್ಜಿ ಸ್ವೀಕರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಈ ನಿರ್ಧಾರದಿಂದ ರಾಜ್ಯದ ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ಆಸ್ತಿ ದಾಖಲೆಗಳ ಸಮಸ್ಯೆ ಎದುರಿಸುತ್ತಿರುವ ಅಂದಾಜು 25ರಿಂದ 30 ಲಕ್ಷ ಜನರಿಗೆ ಅನುಕೂಲವಾಗಲಿದೆ. ದಾಖಲೆಗಳಿಲ್ಲದ ಕಾರಣ ಇ-ಸ್ವತ್ತು ಪಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದ ಆಸ್ತಿ ಮಾಲೀಕರಿಗೂ ಇದೀಗ ಅವಕಾಶ ಕಲ್ಪಿಸಲಾಗಿದೆ.

E-Swathu Applications Open from Nov 2 for Rural Properties Without Documents 30 Lakh People to Benefit

ದಾಖಲೆಗಳಿಲ್ಲದ ಆಸ್ತಿಗೂ ಸಿಗಲಿದೆ ಇ-ಸ್ವತ್ತು

ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವಾರು ತಲೆಮಾರುಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಆಸ್ತಿ ದಾಖಲೆ ಪಡೆಯುವುದು ದೊಡ್ಡ ಸಮಸ್ಯೆಯಾಗಿತ್ತು. ಇದನ್ನು ಪರಿಹರಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇ-ಸ್ವತ್ತು 2.0 ತಂತ್ರಾಂಶದಲ್ಲಿಯೂ ಅಗತ್ಯ ಬದಲಾವಣೆ ಮಾಡಲಾಗಿದೆ ಎಂದು ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ. 2025ರ ಏಪ್ರಿಲ್ 7ಕ್ಕೂ ಹಿಂದಿನ ವಿದ್ಯುತ್ ಬಿಲ್ ಆಧಾರವಾಗಿ ಹಾಗೂ ಸ್ಥಳ ಪರಿಶೀಲನೆ ನಡೆಸಿ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಇಂತಹ ಆಸ್ತಿಗಳಿಗೆ ಇ-ಸ್ವತ್ತು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೆ, ಕುಟುಂಬದ ಸದಸ್ಯರ ನಡುವೆ ಭಾಗದ ತಗಾದೆಯಿದ್ದರೆ ಅಥವಾ ಅರ್ಜಿ ಸಲ್ಲಿಸಿದವರು ಮೂಲ ಮಾಲೀಕರಲ್ಲದಿದ್ದರೆ ಇ-ಸ್ವತ್ತು ನೀಡಿಕೆಗೆ ತೊಂದರೆಯಾಗಬಹುದು. ಅರ್ಜಿದಾರರಿಂದ ಪ್ರಮಾಣಪತ್ರ ಮತ್ತು ಮುಚ್ಚಳಿಕೆ ಪಡೆಯಲಾಗುತ್ತದೆ. ಸಲ್ಲಿಸಿರುವ ಮಾಹಿತಿ ತಪ್ಪಾಗಿರುವುದು ಕಂಡುಬಂದರೆ ನೀಡಿರುವ ಇ-ಸ್ವತ್ತು ಪ್ರಮಾಣಪತ್ರವನ್ನು ರದ್ದುಪಡಿಸಲು ಅವಕಾಶವಿರುತ್ತದೆ.

ಹಕ್ಕುಪತ್ರ ಇಲ್ಲದಿದ್ದರೂ ಇ-ಸ್ವತ್ತು ಪಡೆಯಲು ಅವಕಾಶ

ಸರ್ಕಾರದ ವಸತಿ ಯೋಜನೆಯಡಿ ಹಕ್ಕುಪತ್ರ ಪಡೆದಿದ್ದು, ಪ್ರಸ್ತುತ ಆ ಹಕ್ಕುಪತ್ರ ಕಳೆದುಹೋಗಿದ್ದರೆ ಅಂತಹವರಿಗೂ ಪರಿಹಾರ ಕಲ್ಪಿಸಲಾಗಿದೆ. ಹಕ್ಕುಪತ್ರ ವಿತರಿಸಿದ ಪ್ರಾಧಿಕಾರದಿಂದ ದೃಢೀಕರಣ ಪತ್ರ ಪಡೆದು ಇ-ಸ್ವತ್ತು ಪಡೆಯಬಹುದು. ಅಲ್ಲದೆ, ಮಲೆನಾಡು ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕಣ ಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲು ನಿರ್ಧರಿಸಲಾಗಿದೆ ಎಂದರು.

ನಮೂನೆ 11ಬಿ ಪಡೆಯುವ ವಿಧಾನ ಸರಳೀಕರಣ

ಗ್ರಾಮೀಣ ಭಾಗದ ಜನರಿಗೆ ಮತ್ತೊಂದು ಪ್ರಮುಖ ಸೌಲಭ್ಯ ಕಲ್ಪಿಸಲಾಗಿದೆ. ನಮೂನೆ 11ಬಿ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ನೋಂದಾಯಿತ ದಾಖಲೆಗಳಿಲ್ಲದಿದ್ದರೂ ತಮ್ಮ ಕೃಷಿ ಜಮೀನಿನಲ್ಲಿ ವಾಸಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕೆ ನಿರ್ಮಿಸಿರುವ ಕಟ್ಟಡಗಳಿಗೆ ಇ-ಸ್ವತ್ತು ನಮೂನೆ 11ಬಿ ಪಡೆಯಲು ಅವಕಾಶ ನೀಡಲಾಗಿದೆ.

ಕೃಷಿ ಭೂಮಿಯಲ್ಲಿ ವಸತಿ ಯೋಜನೆಯಡಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದಿರುವ ಪಾರಂಪರಿಕ ಅರಣ್ಯವಾಸಿಗಳ ಆಸ್ತಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಮನೆಯಂಗಳ ಮತ್ತು ಹಿತ್ತಲು ಸೇರಿದಂತೆ ಒಟ್ಟು 4,000 ಚದರ ಅಡಿಯೊಳಗಿನ ನಿವೇಶನ ಹಾಗೂ ಆಸ್ತಿಗಳಿಗೆ ಈ ಸೌಲಭ್ಯ ಅನ್ವಯಿಸುತ್ತದೆ. ಈ ತಿದ್ದುಪಡಿಯಿಂದ ಗ್ರಾಮೀಣ ಪ್ರದೇಶದ ಶೇ.90ಕ್ಕೂ ಹೆಚ್ಚು ಆಸ್ತಿಗಳಿಗೆ ನಮೂನೆ 11ಎ ಮತ್ತು 11ಬಿ ನೀಡಲು ಅನುಕೂಲವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ ಮೊದಲ ವಾರದಿಂದ ಇ-ಸ್ವತ್ತು ವಿತರಣೆ

ಗ್ರಾಮಠಾಣಾ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನವನ್ನು ಗಾಂಧಿ ಜಯಂತಿಯಾದ ಅಕ್ಟೋಬರ್ 2ರಿಂದ ಆರಂಭಿಸಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಿಂದ ಇ-ಸ್ವತ್ತು ಪ್ರಮಾಣಪತ್ರ ವಿತರಿಸುವುದಾಗಿಯೂ ಪ್ರಕಟಿಸಲಾಗಿತ್ತು. ಆದರೆ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅಭಿಯಾನ ಆರಂಭಿಸಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ನವೆಂಬರ್ 2ರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿಗಳ ಪರಿಶೀಲನೆ ಬಳಿಕ ಡಿಸೆಂಬರ್ ಮೊದಲ ವಾರದಿಂದ ಇ-ಸ್ವತ್ತು ಪ್ರಮಾಣಪತ್ರಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.

ಬಿ-ಖರಾಬು ಜಮೀನಿನ ಸಮಸ್ಯೆಗೂ ಪರಿಹಾರ?

ಬೆಂಗಳೂರು ಸೇರಿದಂತೆ ನಗರ ಮತ್ತು ಪಟ್ಟಣಗಳ ಸಮೀಪವಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಡಾವಣೆಗಳನ್ನು ನಿರ್ಮಿಸುವಾಗ ಕೆಲವು ಕಡೆ ಬಿ-ಖರಾಬು ಜಮೀನುಗಳನ್ನೂ ನಿವೇಶನಗಳಾಗಿ ವಿಂಗಡಿಸಿರುವ ಸಮಸ್ಯೆ ಎದುರಾಗಿದೆ.

ಇಂತಹ ನಿವೇಶನಗಳಿಗೆ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿದಾಗ ದಾಖಲೆಗಳ ಪರಿಶೀಲನೆಯಲ್ಲಿ ತೊಂದರೆಯಾಗುತ್ತಿದೆ. ಬಿ-ಖರಾಬು ಭೂಮಿಗೆ ಖಾತೆ ನೀಡಲು ಸಾಧ್ಯವಿಲ್ಲ ಎಂಬ ನ್ಯಾಯಾಲಯದ ತೀರ್ಪು ಕೂಡ ಇದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಂದಾಯ ಸಚಿವರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಜನರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+