E-Swathu: ಇ-ಸ್ವತ್ತು ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ, ಸೇವೆಗೆ ವೇಗ; 1.40 ಲಕ್ಷ ಅರ್ಜಿಗಳ ವಿಲೇವಾರಿ
E Swathu Big update: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಪ್ರಮುಖ ಸೇವೆಯಾಗಿರುವ ಇ-ಸ್ವತ್ತು (E Swathu) ಮತ್ತಷ್ಟು ಜನಸ್ನೇಹಿಯಾಗಿದೆ. ಸಮಸ್ಯೆಗಳು ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಂಡು ಜೊತೆಗೆ ಇ-ಸ್ವತ್ತು ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಿಸಲಾಗುತ್ತಿದೆ. ಬಾಕಿ ಇರುವ ಅರ್ಜಿಗಳ ತ್ವರಿತ ವಿಲೇವಾರಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಬಗೆಗಿನ ಅಪ್ಡೇಟ್ ಇಲ್ಲಿದೆ.
ಗ್ರಾಮೀಣ ಭಾಗದ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ನಿರ್ವಹಿಸುವಲ್ಲಿ ಇ-ಸ್ವತ್ತು ಮುಖ್ಯಪಾತ್ರ ವಹಿಸುತ್ತದೆ. ಇ-ಸ್ವತ್ತು 2.0 ತಂತ್ರಾಂಶದಡಿ ಸ್ವೀಕರಿಸುತ್ತಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದೇವೆ. ಈವರೆಗೆ ಒಟ್ಟು 1,40,719 ಅರ್ಜಿಗಳನ್ನು ಅನುಮೋದಿಸಿ, ವಿಲೇವಾರಿ ಮಾಡಲಾಗಿದೆ ಎಂದು ಖುದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಖ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ.

ಹೊಸ ನಮೂನೆ 11ಬಿ ಅಡಿ ಈವರೆಗೆ 82,640 ಅರ್ಜಿಗಳು ಸ್ವೀಕೃತವಾಗಿವೆ. ವಿವಿಧ ಹಂತಗಳಲ್ಲಿ ಈ ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ. ಸದರಿ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಇ-ಸ್ವತ್ತು 2.0 ತಂತ್ರಾಂಶದಡಿ ಸಾರ್ವಜನಿಕರಿಂದ ಇದುವರೆಗೆ ಒಟ್ಟು 1,52,863 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ಲೆಕ್ಕ ನೀಡಿದ್ದಾರೆ.
ಸ್ವೀಕೃತ ಅರ್ಜಿಗಳ ಪ್ರಮುಖಾಂಶಗಳು
* 7,896 ಅರ್ಜಿಗಳು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಲಾಗಿನ್‌ನಲ್ಲಿವೆ.
* 3,182 ಅರ್ಜಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವ್ಯಾಪ್ತಿಯಲ್ಲಿ ಸಲ್ಲಿಕೆ ಆಗಿವೆ.
* 4,036 ಅರ್ಜಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರ/ಆಡಳಿತಾಧಿಕಾರಿ ವ್ಯಾಪ್ತಿಯಲ್ಲಿ ಸಲ್ಲಿಕೆಯಾಗಿವೆ. * 1,947 ಅರ್ಜಿಗಳು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಲಾಗಿನ್‌ನಲ್ಲಿ ಅನುಮೋದನೆಗಾಗಿ ಬಾಕಿ ಇವೆ.
* ಇನ್ನೂ 950 ಅರ್ಜಿಗಳು ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಗೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್ ನಲ್ಲಿವೆ.
* ವಿವಿಧ ಹಂತಗಳಲ್ಲಿ ಒಟ್ಟು 18,011 ಅರ್ಜಿಗಳು ಅನುಮೋದನೆ ಆಗಬೇಕಿದೆ ಎಂದರು.
ಬಗೆಹರಿದ ತಾಂತ್ರಿಕ ಸಮಸ್ಯೆಗಳು
ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಮತ್ತು ಬಳಕೆದಾರರು ಅರ್ಜಿಗಳನ್ನು ಅನುಮೋದನೆ ಮಾಡುವಂತಹ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಹುತೇಕ ಪರಿಹರಿಸಲಾಗಿದೆ.
ಹೊಸ ಬಡಾವಣೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದೆ. ಈವರೆಗೆ 2,238 ಹೊಸ ಬಡಾವಣೆಗಳಿಗೆ ಅರ್ಜಿ ಸಲ್ಲಿಕೆಯಾಗಿವೆ. ಅವುಗಳಲ್ಲಿ 998 ಹೊಸ ಬಡಾವಣೆಗಳಿಗೆ ಗ್ರಾಮ ಪಂಚಾಯತಿ ಹಂತದಲ್ಲಿ ಅನುಮೋದನೆ ನೀಡಲಾಗಿದೆ.
ನಮೂನೆ-11ಬಿ ಖಾತೆಗಳನ್ನು ನಮೂನೆ-11ಎ ಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶವಿದೆ. ಹೊಸ ಬಹುಮಹಡಿ (ಅಪಾರ್ಟ್‌ಮೆಂಟ್) ಗಳಿಗೆ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ಕೊಡಲಾಗಿದೆ.
ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಗುಂಟೆ ಮತ್ತು ಸೆಂಟ್ಸ್ ನಲ್ಲಿರುವ ವಿಸ್ತೀರ್ಣವನ್ನು ಚದರ ಮೀಟರ್‍ನಲ್ಲಿ ಪರಿವರ್ತಿಸಿ, ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ವಿವಿಧ ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ
ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿಗಳನ್ನು ಋಣಭಾರ ಪ್ರಮಾಣಪತ್ರಗಳನ್ನು ಸಲ್ಲಿಸುವಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇಂಟರ್ಫೇಸ್ ಮೂಲಕ ಅರ್ಜಿ ಸೇವ್ ವೇಳೆ, ಇಂಟರ್ಫೇಸ್ ಮೂಲಕ ಇ-ಖಾತಾಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಅದೇ ರೀತಿ ಅರ್ಜಿ ಸಲ್ಲಿಸುವಾಗ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ಮಾಡಲಾಗಿದ್ದ ಸಂಯೋಜನೆಯಲ್ಲಿ ತಾಂತ್ರಿಕ ಲೋಪಗಳು ಕಂಡು ಬಂದಿದ್ದವು. ಗ್ರಾಮ ಪಂಚಾಯತಿ ಬಳಕೆದಾರರುಗಳ ಲಾಗಿನ್‌ನಲ್ಲಿ ಅರ್ಜಿಗಳ ಅನುಮೋದನೆಯಲ್ಲಿ ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಹೀಗಾಗಿ ಪೋರ್ಟಲ್ ಜನಸ್ನೇಹಿಯಾಗಿದೆ.
ಹೊರ ದೇಶದ ಅರ್ಜಿದಾರುಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿಗಳನ್ನು ಸಲ್ಲಿಸಲು ಹಾಗೂ ಹೊಸ ಬಡಾವಣೆಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಮುಂದಿನ 10 ದಿನದೊಳಗೆ ಕಲ್ಪಿಸಲಾಗುವುದು. ಇ-ಸ್ವತ್ತು ತಂತ್ರಾಂಶದ ಬಳಕೆದಾರರು ಗಳ ಲಾಗಿನ್ ನಲ್ಲಿ ಉಂಟಾಗುತ್ತಿರುವ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು.
ಮುಖ್ಯವಾಗಿ, ಸಾರ್ವಜನಿಕರು ಇ-ಸ್ವತ್ತು 2.0 ತಂತ್ರಾಂಶದ ಮೂಲಕ ಆನ್-ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಬಾಪೂಜಿ ಸೇವಾ ಕೇಂದ್ರ ಗಳ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಒನ್ , ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.














Click it and Unblock the Notifications