ಇ- ಪೋರ್ಟಲ್ ಹ್ಯಾಕ್ ಮಾಡಿದವರ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ
ಬೆಂಗಳೂರು, ಮಾ. 07: ಸರಕಾರದ ಇಲಾಖೆಯ ಇ- ಪೋರ್ಟಲ್ ಹ್ಯಾಕ್ ಮಾಡಿ ಸಾರ್ವಜನಿಕ ಹಣ ಲೂಟಿ ಮಾಡಿದವರು ಎಷ್ಟೇ ಬಲಾಢ್ಯರಾಗಿದ್ದರೂ ಲೆಕ್ಕಿಸದೇ ಹಣ ವಸೂಲಾತಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯ ಯು. ಬಿ ವೆಂಕಟೇಶ್ ನಿಯಮ 330 ರ ಅಡಿಯಲ್ಲಿ ಎತ್ತಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು ಉತ್ತರ ನೀಡಿದರು.
ಈ ಪೋರ್ಟ್‌ಲ್ ಹ್ಯಾಕ್ ಮಾಡಿ ಸಾರ್ವಜನಿಕರ ಹಣ ಲೂಟಿ ಮಾಡಿದ ಸಂಬಂಧ ಈವರೆಗೂ ಹನ್ನೆರಡು ಮಂದಿಯನ್ನು ಬಂಧಿಸಿ ಎರಡು ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹ್ಯಾಕರ್ ಶ್ರೀಕಿ ಹಾಗೂ ಇತರರು ಒಳಗೊಂಡಿದ್ದಾರೆ ಎನ್ನಲಾದ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ತನಿಖೆ ತೀವ್ರ ಪ್ರಗತಿಯಲ್ಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು.

ಇದಕ್ಕೆ ಮುನ್ನ ವಿಷಯ ಪ್ರಸ್ತಾಪಿಸಿದ, ಕಾಂಗ್ರೆಸ್ ಸದಸ್ಯ ಶ್ರೀ ಯು ಬಿ ವೆಂಕಟೇಶ್, ಬಿಟ್ ಕಾಯಿನ್ ವಿಷಯದಲ್ಲಿ, ಯಾವುದೇ ಕ್ರಮ ಆಗಿಲ್ಲ, ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಹಲವು ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ, ಸರಕಾರ ಈ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯರ ಆರೋಪವನ್ನು ತಳ್ಳಿಹಾಕಿದ ಗೃಹ ಸಚಿವರು, ಸರಕಾರ ಹ್ಯಾಕಿಂಗ್ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಯಾರ ಬಳಿಯಾದರೂ ಹೆಚ್ಚಿನ ದಾಖಲೆ ಇದ್ದರೆ ಒದಗಿಸಬೇಕು ಎಂದು ಮನವಿ ಮಾಡಿದರು.
ಇ ಪೋರ್ಟ್ ಲ್ ನಿಂದ ಹನ್ನೊಂದುವರೆ ಕೋಟಿ ರೂ. ಹ್ಯಾಕ್ ಮಾಡಿದ್ದು, ವಿವಿಧ 36 ಬ್ಯಾಂಕ್ ಖಾತೆಗಳಿವೆ ವರ್ಗಾವಣೆ ಮಾಡಲಾಗಿದೆ. ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಪರಿಷತ್ ನಲ್ಲಿ, ವಿರೋಧ ಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಜೆಡಿಎಸ್ ಸದಸ್ಯ ಮರಿ ತಿಬ್ಬೆಗೌಡ, ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ತೇಜಸ್ವಿನಿ ಗೌಡ, ಸಹ ಚರ್ಚೆಯಲ್ಲಿ ಪಾಲ್ಗೊಂಡರು.












Click it and Unblock the Notifications