ಶಿವರಾಜ್ ಕುಮಾರ್ ಬಗ್ಗೆ ಯಾರೂ ಮಾತನಾಡಬಾರದು: ದುನಿಯಾ ವಿಜಯ್ ಖಡಕ್ ಹೇಳಿಕೆ
ರಾಜ್ಯ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕರ ಅಬ್ಬರ ಜೋರಾಗಿದೆ. ಸಿದ್ದರಾಮಯ್ಯ ಪರವಾಗಿ ಮೇ 4ರಂದು ಶಿವರಾಜ್ ಕುಮಾರ್, ರಮ್ಯಾ, ನಿಶ್ವಿಕಾ ನಾಯ್ಡು ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಬೇಟೆ ನಡೆಸಿದ್ದಾರೆ. ಇಂದು (ಮೇ 5) ಕೂಡ ದುನಿಯಾ ವಿಜಯ್ ಮತ್ತು ರಮ್ಯಾ ಸಿದ್ದರಾಮಯ್ಯ ಜೊತೆಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ದುನಿಯಾ ವಿಜಯ್ ಸಿದ್ದರಾಮಯ್ಯ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಮಾತ್ರವಲ್ಲದೆ ಈ ಬಾರಿ ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುವುದು ಖಚಿತ ಎಂದು ಹೇಳಿದರು. ನಾನು ಸಿದ್ದರಾಮಯ್ಯ ಅವರ ಅಭಿಮಾನಿ ಅದಕ್ಕಾಗಿ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಅವರ ಮೇಲೆ ನಮಗೆ ಪ್ರೀತಿ ಇದೆ, ಸದಾ ಅವರ ಹಿಂದೆ ಇರುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಿದ್ದಕ್ಕೆ ಶಿವರಾಜ್ ಕುಮಾರ್ ಬಗ್ಗೆ ಪ್ರತಾಪ್ ಸಿಂಹ ಮತ್ತು ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಮಾತನಾಡಿದ ದುನಿಯಾ ವಿಜಯ್, "ಚುನಾವಣೆ ಸಮಯದಲ್ಲಿ ಒಬ್ಬರು ಬಂದಾಗ ಇನ್ನೊಬ್ಬರಿಗೆ ಅಸಮಾಧಾನವಾಗುವುದು ಸಾಮಾನ್ಯ, ಶಿವರಾಜ್ ಕುಮಾರ್ ಎಲ್ಲರನ್ನೂ ಪ್ರೀತಿಸುವ ಮನುಷ್ಯ, ಯಾರೇ ಕರೆದರೂ ಅವರು ಹೋಗುತ್ತಾರೆ, ಅವರದ್ದು ದೇವರಂತ ಮನಸು. ಅಣ್ಣಾವ್ರ ಮನೆಯಲ್ಲಿ ಅವರು ದೊಡ್ಡ ಮಗ, ಅವರದ್ದು ದೊಡ್ಡ ಮನಸ್ಸು ಅವರ ಬಗ್ಗೆ ಯಾರೂ ಮಾತನಾಡಬಾರು. ಅವರ ಬಗ್ಗೆ ನಾವು ಮಾತನಾಡೋದೆ ತಪ್ಪು" ಎಂದು ಹೇಳಿದರು.
ರಂಗೇರಿದ ವರುಣಾ ಚುನಾವಣಾ ಕಣ
ವರುಣಾದಲ್ಲಿ ಸಿದ್ದರಾಮಯ್ಯ ಸುಲಭವಾಗಿ ಗೆಲ್ಲುತ್ತಾರೆ ಎನ್ನುವಾಗಲೇ ಬಿಜೆಪಿ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸುವ ಮೂಲಕ ಸಿದ್ದರಾಮಯ್ಯಗೆ ಸವಾಲೊಡ್ಡಿದೆ. ಮೊದಲೆಲ್ಲಾ ನಾನು ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಸದ್ಯ ವರುಣಾದಲ್ಲಿ ಬೀಡು ಬಿಟ್ಟಿದ್ದು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿ ಸೋಮಣ್ಣ ಅವರನ್ನು ಗೆಲ್ಲಿಸಲು ಅಮಿತ್ ಶಾ, ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಪ್ರತಾಪ್ ಸಿಂಹ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ.
ವರುಣಾದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿರುವುದರಿಂದ ಸೋಮಣ್ಣ ಸಿದ್ದರಾಮಯ್ಯಗೆ ತೀವ್ರ ಪ್ರತಿಸ್ಪರ್ಧೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಬಾವ ಹೊಂದಿರುವುದರಿಂದ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗಿದೆ.












Click it and Unblock the Notifications