ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಬಾಕಿ ಹಣ ಹಂತ ಹಂತವಾಗಿ ಬಿಡುಗಡೆ: ಸತೀಶ್ ಜಾರಕಿಹೊಳಿ
ಬೆಂಗಳೂರು, ಜುಲೈ 17: ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್ಲನ್ನು ಗುತ್ತಿಗೆದಾರರಿಗೆ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ವಿಧಾನ ಪರಿಷತ್ ನಲ್ಲಿ ಕೋಲಾರ ವಿಭಾಗದಲ್ಲಿನ ಗುತ್ತಿಗೆದಾರರಿಗೆ ಬಾಕಿ ಬಿಲ್ಲುಗಳನ್ನು ಪಾವತಿ ಮಾಡದಿರುವ ಕುರಿತು ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಅವರು ನಿಯಮ 72 ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅವರು, ಮೇ 2023 ರ ಅಂತ್ಯಕ್ಕೆ ಗುತ್ತಿಗೆದಾರರಿಗೆ ನೀಡಬೇಕಾಗಿರುವ ಬಾಕಿ ಹಣ ರೂ 8506 ಕೋಟಿ ಇದ್ದು, 2023-24 ನೇ ಸಾಲಿನ ಆಯವ್ಯಯದಲ್ಲಿ ರೂ 9111.20 ಕೋಟಿ ಅನುದಾನ ಒದಗಿಸಲಾಗಿರುತ್ತದೆ.

ಬಾಕಿ ಇರುವ ಬಿಲ್ಲುಗಳ ಆಧಾರದ ಮೇಲೆ ಪ್ರತಿ ಮಾಹೆ ವಿವಿಧ ವಲಯ ಹಾಗೂ ವಿಭಾಗಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಪ್ರಸ್ತುತ ಕೋಲಾರ ವಿಭಾಗದಲ್ಲಿ ಒಟ್ಟಾರೆ ರೂ 126.95 ಕೋಟಿ ಮೊತ್ತದ ಬಿಲ್ಲುಗಳು ಬಾಕಿ ಇದ್ದು, ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇನ್ನೂ ಮಾನ್ಯ ಉಚ್ಛ ನ್ಯಾಯಾಲಯದ ಅಂತಿಮ ಆದೇಶದ ನಂತರ ಸೆಂಚುರಿ ಕ್ಲಬ್‌ನ್ನು ಕಬ್ಬನ್ ಉದ್ಯಾನವನದ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಚಿಂತನೆ ನಡೆಸಲಾಗುವುದೆಂದು ಸಚಿವ ಹಾಗೂ ಸಭಾನಾಯಕರಾದ ಭೋಸರಾಜು.ಎನ್ .ಎಸ್ ತಿಳಿಸಿದರು.
ಸೆಂಚುರಿ ಕ್ಲಬ್ ಅನ್ನು ಉದ್ಯಾನವನದ ವ್ಯಾಪ್ತಿಯಿಂದ ಹೊರಗಿಡುವಂತೆ ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ ನಿಯಮ 330 ರ ಅಡಿ ಪ್ರಸ್ತಾಪಿಸಿದ ವಿಷಯಕ್ಕೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ಸೆಂಚುರಿ ಕ್ಲಬ್ ನ ಒಟ್ಟು ವಿಸ್ತೀರ್ಣ 4 ಎಕರೆ 37 ಗುಂಟೆಗಳಾಗಿದ್ದು, ಸದರಿ ಜಮೀನು 1913 ರಲ್ಲಿ ಅಂದಿನ ಮೈಸೂರು ಮಹಾರಾಜರಿಂದ ಕಾಸ್ಮೋಪಾಲಿಟನ್ ಕ್ಲಬ್ ನಿರ್ಮಾಣಕ್ಕೆ ಹಸ್ತಾಂತರವಾಗಿರುತ್ತದೆ.
ಸೆಂಚುರಿ ಕ್ಲಬ್ ಗೆ ಸೇರಿದ ಜಾಗವು ಗ್ರಾಂಟ್ ಆಗಿರುವುದರಿಂದ ಅದರ ಅಭಿವೃದ್ಧಿ ಹಾಗೂ ಕಾರ್ಯಚಟುವಟಿಕೆಗೆ ಯಾವುದೇ ಅಡೆ ತಡೆಯಾಗಿರುವುದಿಲ್ಲ.ಕೇಂದ್ರ ಗ್ರಂಥಾಲಯಕ್ಕೆ ಹೊಂದಿಕೊಂಡಂತಿರುವ ಸೆಂಚುರಿ ಕ್ಲಬ್ ಪ್ರವೇಶ ದ್ವಾರ ಕುರಿತಂತೆ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಾಗಿದ್ದು, ಮಧ್ಯಂತರ ಆದೇಶದನ್ನಯ ಸೆಂಚುರಿ ಕ್ಲಬ್ ಸದರಿ ಪ್ರವೇಶ ದ್ವಾರವನ್ನು ಬಳಸಿಕೊಳ್ಳುತ್ತಿದೆ. ನ್ಯಾಯಾಲಯದ ಅಂತಿಮ ಆದೇಶದ ನಂತರ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.












Click it and Unblock the Notifications