ಕೆ.ಜೆ.ಜಾರ್ಜ್ ಕೈ ತಪ್ಪಲಿದೆ ಗೃಹ ಖಾತೆ?
ಬೆಂಗಳೂರು, ಅಕ್ಟೋಬರ್ 29 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸೇರುವ ಡಾ.ಜಿ.ಪರಮೇಶ್ವರ ಅವರಿಗೆ ಗೃಹ ಖಾತೆಯನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ಗುರುವಾರ ಸಂಜೆ ಪರಮೇಶ್ವರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಂಪುಟಕ್ಕೆ ನಾಲ್ವರು ಹೊಸ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿಸಿಕೊಳ್ಳುತ್ತಿದ್ದು, ಪ್ರಮಾಣ ವಚನ ಸಮಾರಂಭ ಗುರುವಾರ ಸಂಜೆ 4.30ಕ್ಕೆ ರಾಜಭವನದಲ್ಲಿ ನಡೆಯಲಿದೆ. ನೂತನ ಸಚಿವರಿಗೆ ಯಾವ ಖಾತೆ ಸಿಗಲಿದೆ? ಎಂಬ ಲೆಕ್ಕಾಚಾರ ಈಗ ಆರಂಭವಾಗಿದೆ. [ಪರಮೇಶ್ವರ ಪರಿಚಯ ಓದಿ]

ಸದ್ಯದ ಮಾಹಿತಿ ಪ್ರಕಾರ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಖಾತೆ ಬದಲಾಗಲಿದ್ದು, ಪರಮೇಶ್ವರ ಅವರಿಗೆ ಗೃಹ ಖಾತೆ ದೊರೆಯಲಿದೆ. ಸಿದ್ದರಾಮಯ್ಯ ಬಳಿ ಇರುವ 'ಬೆಂಗಳೂರು ಅಭಿವೃದ್ಧಿ ಖಾತೆ'ಯನ್ನು ಬೆಂಗಳೂರಿನ ಸರ್ವಜ್ಞ ನಗರದ ಶಾಸಕರಾದ ಕೆ.ಜೆ.ಜಾರ್ಜ್ ಅವರಿಗೆ ಹಂಚಿಕೆ ಮಾಡಲಾಗುತ್ತದೆ. [ಗೃಹ ಸಚಿವ ಕೆಜೆ ಜಾರ್ಜ್ ಕಾಡಿದ 7 ವಿವಾದಗಳು]
ಡಿಸಿಎಂ ಪಟ್ಟ ನೀಡದಿದ್ದರೆ ಪ್ರಬಲ ಖಾತೆಯನ್ನು ನೀಡಬೇಕು ಎಂಬುದು ಪರಮೇಶ್ವರ ಅವರ ಬೇಡಿಕೆಯಾಗಿತ್ತು. ಆದ್ದರಿಂದ, ಅವರಿಗೆ ಗೃಹ ಖಾತೆಯನ್ನು ನೀಡಲಾಗುತ್ತದೆ ಎನ್ನುತ್ತವೆ ಪಕ್ಷದ ಮೂಲಗಳು. ಈ ಬಗ್ಗೆ ಸಂಜೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. [ಸಂಪುಟ ಸೇರುವವರ ಪಟ್ಟಿ ಅಂತಿಮ]
ಉಳಿದಂತೆ ಅರಕಲಗೂಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್ ಕುಲಕರ್ಣಿ, ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಅವರು ಸಚಿವರಾಗಿ ಸಂಪುಟ ಸೇರಲಿದ್ದಾರೆ. ವಿನಯ್ ಕುಲಕರ್ಣಿ ಅವರಿಗೆ ಅಬಕಾರಿ ಖಾತೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. [ಸಿದ್ದರಾಮಯ್ಯ ಸಂಪುಟ : ಯಾರಿಗೆ ಯಾವ ಖಾತೆ?]
ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹಣಕಾಸು, ಗಣಿ ಮತ್ತು ಭೂ ವಿಜ್ಞಾನ, ಅಬಕಾರಿ, ಉನ್ನತ ಶಿಕ್ಷಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಸೇರಿ ಒಟ್ಟು 8 ಖಾತೆಗಳಿವೆ.












Click it and Unblock the Notifications