ನಾಲ್ವರು ಅಂದರ ಬಾಳಿಗೆ ಬೆಳಕು ನೀಡಿದ ಅಪ್ಪು ಎರಡು ಕಣ್ಣು!
ಬೆಂಗಳೂರು, ನ. 01: ನಟ ಪುನೀತ್ ರಾಜ್‌ಕುಮಾರ್ ದೇಹ ಮಣ್ಣಲ್ಲಿ ಮಣ್ಣಾಗಿರಬಹುದು. ಆದರೆ ಅಪ್ಪು ಎರಡು ನೇತ್ರಗಳು ನಾಲ್ವ ಜೀವಕ್ಕೆ ಬೆಳಕು ನೀಡಿವೆ. ಡಾ. ರಾಜ್ ಕುಮಾರ್ ಅವರ ಹಾದಿಯಂತೆ ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಬೆಳಕು ಕೊಡಿಸಿದೆ. ನಟ ಪುನೀತ್ ನಾಲ್ವರ ಕಣ್ಣಲ್ಲಿ ಇರಲಿದ್ದಾರೆ. ಅಪ್ಪು ಎರಡು ನೇತ್ರ ನಾಲ್ವರಿಗೆ ದೃಷ್ಟಿ ನೀಡುವ ಮೂಲಕ ಸಾವಿನಲ್ಲೂ ದಾಖಲೆ ಬರೆದಿದ್ದಾರೆ.
ಅದರಲ್ಲೂ ನಾಲ್ವರು ಕಡಿಮೆ ವಯಸ್ಸುಳ್ಳವರಾಗಿದ್ದಾರೆ. ಅದರಲ್ಲಿ ಒಬ್ಬರು ಮಹಿಳೆ, ಮೂವರು ಯುವಕರ ಬಾಳಿನಲ್ಲಿ ಅಪ್ಪು ಬೆಳಗುತ್ತಿದ್ದಾರೆ. ಆದರೆ ಅವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಅಪ್ಪು ಕಣ್ಣಿನಿಂದ ಬೆಳಕು ಪಡೆದವರಿಗೂ ಈ ವಿಷಯ ಗೊತ್ತಿಲ್ಲ. ಅಪ್ಪು ನೇತ್ರ ಪಡೆದವರು ಯಾರು ಎಂಬುದು ಜೀವನ ಪರ್ಯಂತ ನಿಗೂಢವಾಗಿಯೇ ಉಳಿಯಲಿದೆ.
ಪುನೀತ್ ನೇತ್ರದಾನ, ಎರಡು ನೇತ್ರಗಳಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಾಲ್ವರಿಗೆ ದೃಷ್ಟಿದಾನ ಮಾಡಿದ ಬಗ್ಗೆ ನಾರಾಯಣ ನೇತ್ರಾಲಯದ ವೈದ್ಯ ಡಾ. ಭುಜಂಗಶೆಟ್ಟಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಅಪ್ಪು ಅವರ ಎರಡು ನೇತ್ರಗಳಿಂದ ನಾಲ್ವರ ಬಾಳಲ್ಲಿ ಬೆಳಕು ಮೂಡಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಅಪ್ಪು ಎರಡು ನೇತ್ರಗಳಿಂದ ನಾಲ್ವರಿಗೆ ಬಳಕೆ ಮಾಡಿದ್ದು, ನಾಲ್ಕು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಅಪ್ಪು ಇಲ್ಲದಿದ್ದರೂ ಅಪ್ಪು ಕಣ್ಣು ಜೀವಂತವಾಗಿರಲಿವೆ ಎಂದು ಡಾ. ಭುಜಂಗಶೆಟ್ಟಿ ವಿವರ ನೀಡಿದರು.
ಡಾ. ರಾಜ್ ಕುಮಾರ್ ಇಡೀ ಕುಟುಂಬ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. 2006 ರಲ್ಲಿ ಡಾ. ರಾಜ್ ಕುಮಾರ್ ಅವರು ಎರಡು ಕಣ್ಣು ದಾನ ಮಾಡಿದ್ದರು. 2017 ರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ನೇತ್ರ ದಾನ ಮಾಡಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ತಮ್ಮ ಎರಡು ಕಣ್ಣು ದಾನ ಮಾಡಿದ್ದು, ಇಡೀ ಕುಟುಂಬದ ನೇತ್ರದಾನ ಕಾರ್ಯ ಶ್ಲಾಘನೀಯ ಎಂದು ಡಾ. ಭುಜಂಗಶೆಟ್ಟಿ ಸ್ಮರಿಸಿದರು.
ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣು ದಾನ ಮಾಡಿದ್ದರು. ಎರಡು ಕಣ್ಣು ಸಂಗ್ರಹ ಮಾಡಿ ಅನ್ವೇಷಣೆ ಮಾಡಿದೆವು. ಎರಡೂ ಕಣ್ಣು ತುಂಬಾ ಉತ್ತಮ ಸ್ಥಿತಿಯಲ್ಲಿದ್ದವು. ಮರು ದಿನವೇ ಬೇಕಾದ ನಾಲ್ವರು ರೋಗಿಗಳನ್ನು ಕರೆಸಿಕೊಂಡು ಟ್ರಾನ್ಸ್ ಪ್ಲೆಂಟ್ ಮಾಡಿದೆವು. ಶನಿವಾರ ನಾಲ್ವರ ಬದುಕಿನಲ್ಲಿ ಪುನೀತ್ ದೃಷ್ಟಿ ನೀಡಿ ಪುನೀತರಾಗಿದ್ದರು. ಡಾ. ಯತೀಶ್, ಶರಣ್, ಹರ್ಷಾ ನೇತೃತ್ವದ ತಂಡ ಸರ್ಜರಿ ಮಾಡಿದ್ದು, ಪುನೀತ್ ಕಣ್ಣುಗಳಿಂದ ದೃಷ್ಟಿ ಪಡೆದ ನಾಲ್ವರು ಚೆನ್ನಾಗಿದ್ದಾರೆ ಎಂದು ಭುಜಂಗಶೆಟ್ಟಿ ಇದೇ ವೇಳೆ ತಿಳಿಸಿದರು.

ನಾಲ್ವರಿಗೆ ಹೇಗೆ ಸಾಧ್ಯ?:
ಸಾಮಾನ್ಯವಾಗಿ ಒಂದು ಕಣ್ಣು ದಾನ ಮಾಡಿದರೆ ಒಂದು ಕಣ್ಣಿನಂತೆ ಇಬ್ಬರಿಗೆ ದಾನ ಮಾಡಲಾಗುತ್ತದೆ. ಆದರೆ, ಅಪ್ಪು ಅವರ ಎರಡು ಕಣ್ಣಿನಿಂದ ನಾಲ್ವರಿಗೆ ದೃಷ್ಟಿ ಹೇಗೆ ನೀಡಿದರು ಎನ್ನುವ ಪ್ರಶ್ನೆ ಸಾಮಾನ್ಯ. ಈಗಿನ ತಂತ್ರಜ್ಞಾನ ಬಳಿಸಿಕೊಂಡು ಅಪ್ಪು ಕಣ್ಣನ್ನು ಸ್ಲೈಸ್ ಮಾಡಿದೆವು. ಕಣ್ಣಿನ ಹಿಂಬದಿಯನ್ನು ಅದರ ಅಗತ್ಯ ಇರುವರಿಗೆ ಬಳಸಿದ್ದೇವೆ. ಕಣ್ಣಿನ ಕಾರ್ನಿಯಾ ಭಾಗ ಮತ್ತೊಬ್ಬರಿಗೆ ಬಳಿಸಿದ್ದೇವೆ. ಅಪ್ಪು ಕಣ್ಣು ತುಂಬಾ ಚೆನ್ನಾಗಿದ್ದರಿಂದ ಸ್ಲೈಸ್ ಮಾಡಿ ನಾಲ್ವರು ಅಂದರಿಗೆ ಶಸ್ತ್ರ ಚಿಕಿತ್ಸೆ ನಡೆಸಿ ದೃಷ್ಟಿ ನೀಡಲಾಗಿದೆ. ಕಣ್ಣಿನ ಹಿಂಬದಿ ಅಗತ್ಯವಿದ್ದ ಇಬ್ಬರಿಗೆ ಅಪ್ಪು ಕಣ್ಣಿನ ಹಿಂಬದಿಯ ಭಾಗ ಅಳವಡಿಸಿದ್ದೇವೆ. ಕಾರ್ನಿಯಾ ಭಾಗವನ್ನು ಇಬ್ಬರಿಗೆ ಅಳವಡಿಸಿದ್ದೇವೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಒಬ್ಬರಿಂದ ಎರಡು ಕಣ್ಣು ಪಡೆದು ನಾಲ್ವರಿಗೆ ದೃಷ್ಟಿ ನೀಡಲಾಗಿದೆ. ನಾಲ್ವರೂ ಈಗ ಚೆನ್ನಾಗಿದ್ದಾರೆ. ಇದಕ್ಕೆ ಕಾರಣಕರ್ತರು ನಾರಾಯಣ ನೇತ್ರಾಲಯದ ಡಾ.ಯತೀಶ್ ಮತ್ತು ತಂಡ ಎಂದು ಡಾ. ಭುಜಂಗಶೆಟ್ಟಿ ಸ್ಮರಿಸಿದರು.
ಸ್ಟೆಮ್ಸ್ ಸೆಲ್ಸ್ ಬಳಕೆ:
ಅಪ್ಪು ಎರಡು ನೇತ್ರದಾನದಿಂದ ನಾಲ್ವರಿಗೆ ದೃಷ್ಟಿ ನೀಡಿದ್ದು ಮಾತ್ರವಲ್ಲ. ಇನ್ನೂ ಒಂದು ಅನುಕೂಲವಾಗಿದೆ. ಅಪ್ಪು ಕಣ್ಣಿನ ಬಿಳಿ ಗುಡ್ಡೆ ಭಾಗವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಈ ಬಿಳಿ ಗುಡ್ಡೆಯಲ್ಲಿರುವ ಸ್ಟೆಮ್ ಸೆಲ್ಸ್ ಗಳನ್ನು ಸಂಗ್ರಹಿಸಲಾಗಿದೆ. ಈ ಸ್ಟೆಮ್ ಸೆಲ್ಸ್ ನ್ನು ಬಳಕೆ ಮಾಡಿ, ಕಣ್ಣಿಗೆ ಗಾಯ ಮಾಡಿಕೊಂಡವರಿಗೆ ಬಳಕೆ ಮಾಡುವ ಮೂಲಕ ಕಣ್ಣನ್ನು ಗುಣಪಡಿಸಲಾಗುತ್ತದೆ. ನಟ ಪುನೀತ್ ಅವರ ಕಣ್ಣಿನ ಬಿಳಿ ಗುಡ್ಡೆ ಕೂಡ ದೀಪಾವಳಿ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಮಾಡಲಾಗುತ್ತದೆ.
ನಾಲ್ವರನ್ನು ಹುಡುಕಿ ಚಿಕಿತ್ಸೆ :
ಅಪ್ಪು ನೇತ್ರದಾನ ಮಾಡಿದ ಕೂಡಲೇ ಎರಡು ಕಣ್ಣನ್ನು ನಾಲ್ವರಿಗೆ ಬಳಕೆ ಮಾಡುವ ಹಿಂದೆ ನಾರಾಯಣ ನೇತ್ರಾಲಯ ಸಾಕಷ್ಟು ಶ್ರಮ ವಹಿಸಿದೆ. ಒಂದೇ ದಿನದಲ್ಲಿ ನಾಲ್ವರು ರೋಗಿಗಳನ್ನು ಹುಡುಕಬೇಕಿತ್ತು. ಈ ವೇಳೆ ಮಿಂಟೋ ಆಸ್ಪತ್ರೆಯ ಡಾ. ಸುಜಾತಾ ರಾಥೋಡ್ ಸಹಾಯ ಮಾಡಿದ್ದಾರೆ. ಅಂತಿಮವಾಗಿ ನಮ್ಮ ವೈದ್ಯರು ದಿನಪೂರ್ತಿ ಶ್ರಮ ವಹಿಸಿ ಸೂಕ್ತ ರೋಗಿಗಳನ್ನು ಹುಡುಕಿ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಡಾ. ಭುಜಂಗಶೆಟ್ಟಿ ಅವರು ಸ್ಪಷ್ಟ ಪಡಿಸಿದರು.