ಮೋದಿ, ಅಮಿತ್ ಶಾ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ: ದೆಹಲಿಯಿಂದ ಮರಳಿದ ಬಿಎಸ್‌ವೈ ಈ ರೀತಿ ಹೇಳಿದ್ದೇಕೆ?
ಬೆಂಗಳೂರು, ಸೆಪ್ಟೆಂಬರ್ 14: ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರುವಾರ ಬೆಂಗಳೂರಿಗೆ ಮರಳಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ರಾಜ್ಯ ನಾಯಕರು ಬದ್ಧರಾಗಿರುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.
ದೆಹಲಿಯಿಂದ ಹಿಂದಿರುಗಿದ ನಂತರ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜ್ಯ ನಾಯಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

'ನಿನ್ನೆ ಜಿ20 ಮತ್ತು ಮಧ್ಯಪ್ರದೇಶ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ಬೇರೆ ಏನನ್ನೂ ಚರ್ಚಿಸಲು ಸಮಯವಿರಲಿಲ್ಲ. ಕರ್ನಾಟಕದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ' ಎಂದು ಯಡಿಯೂರಪ್ಪ ಹೇಳಿದರು.
ಮೈತ್ರಿ ಬಗ್ಗೆ ಕೆಲವು ರಾಜ್ಯ ನಾಯಕರ ಆಕ್ಷೇಪಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, 'ದೆಹಲಿ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದು ತಿಳಿಸಿದರು.
'ನಮಗಿಂತ ಹೆಚ್ಚಾಗಿ, ದೆಹಲಿ ನಾಯಕರು ಏನು ಹೇಳುತ್ತಾರೆ ಎಂಬುದು ಮುಖ್ಯ. ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ನಮ್ಮನ್ನು ಸಂಪರ್ಕಿಸುತ್ತಾರೆ. ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳಲಾರೆ. ನಾವು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ' ಎಂದು ಯಡಿಯೂರಪ್ಪ ಹೇಳಿದರು.

ಸಭೆಯಲ್ಲಿ ಹೈಕಮಾಂಡ್ ಈ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಯಡಿಯೂರಪ್ಪ ಕಳೆದ ವಾರ ಹೇಳಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಪ್ರಾದೇಶಿಕ ಪಕ್ಷಕ್ಕೆ ನಾಲ್ಕು ಸ್ಥಾನಗಳನ್ನು ನೀಡಲು ಒಪ್ಪಿದ್ದರು ಎಂಬುದರ ಕುರಿತು ವರದಿಯೂ ಆಗಿದೆ. ಆದರೆ, ಇದಕ್ಕೆ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿಲ್ಲವೆಂದು ಹೇಳಲಾಗುತ್ತಿದೆ.
ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಗಣೇಶ ಚತುರ್ಥಿಯ ನಂತರ ಬಿಜೆಪಿ ಜೊತೆ ಚರ್ಚೆ ನಡೆಸಬಹುದು ಎಂದು ಸುಳಿವು ನೀಡಿದ್ದಾರೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮತ್ತೆ ಪುಟಿದೇಳಲು ಯತ್ನ ನಡೆಸಿವೆ.












Click it and Unblock the Notifications