ಜೈಲು ಹಕ್ಕಿ ಗೇಲಿ ನಿಲ್ಲಿಸಿ: ಹೈಕೋರ್ಟ್ ಮೆಟ್ಟಿಲೇರಿದ ಯಡಿಯೂರಪ್ಪ
Recommended Video

ಬೆಂಗಳೂರು, ಮಾರ್ಚ್ 16: ಕಾಂಗ್ರೆಸ್ ನಾಯಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು 'ಜೈಲಿಗೆ ಹೋಗಿ ಬಂದವರು' ಎಂದು ಗೇಲಿ ಮಾಡುತ್ತಿದ್ದರು. ಇದೀಗ ಇದರ ವಿರುದ್ಧ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹಲವು ಪ್ರಕರಣಗಳಲ್ಲಿ ತಮಗೆ ಖುಲಾಸೆಯಾಗಿದೆ. ಹೀಗಿದ್ದರೂ ನ್ಯಾಯಾಂಗ ಬಂಧನವನ್ನು ಜೈಲು ಶಿಕ್ಷೆ ಎಂದು ಕಾಂಗ್ರೆಸ್ ನಾಯಕರು ಹಾಗೂ ಸಿದ್ದರಾಮಯ್ಯ ಬಿಂಬಿಸುತ್ತಿದ್ದಾರೆ. ಈ ಮೂಲಕ ನ್ಯಾಯಾಂಗದ ಘನತೆಗೆ ಚ್ಯುತಿ ತರುತ್ತಿದ್ದಾರೆ ಮತ್ತು ಮಾನ ಹಾನಿ ಮಾಡುತ್ತಿದ್ದಾರೆ ಎಂದು ಹೇಳಿ ಬಿಎಸ್ ವೈ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಯಡಿಯೂರಪ್ಪ ವಾದವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ನ ಏಕ ಸದಸ್ಯ ಪೀಠ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರಿಗೆ ಗುರುವಾರ ನೋಟಿಸ್ ಜಾರಿಗೊಳಿಸಿದೆ. ಭಾರತೀಯ ಪತ್ರಿಕಾ ಮಂಡಳಿ ಮತ್ತು ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೂ ನೋಟಿಸ್ ನೀಡಿದೆ.
ಪ್ರಕರಣದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಎಂ. ಬಿ. ಪಾಟೀಲ್, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ, ವಕ್ತಾರ ಬ್ರಿಜೇಶ್ ಕಾಳಪ್ಪರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಈ ನಾಯಕರಿಗೆ ತಾವು ಜೈಲಿಗೆ ಹೋಗಿ ಬಂದವರು ಎಂದು ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಬೇಕು ಮತ್ತು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಿಗೂ ಈ ಸಂಬಂಧ ವರದಿಗಳನ್ನು ಪ್ರಸಾರ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಇನ್ನು ವಿಚಾರ ಸಾರ್ವಜನಿಕವಾಗಿ ಅತ್ಯಂತ ಮಹತ್ವದ್ದಾಗಿರುವುದರಿಂದ ವಿವರವಾದ ವಿಚಾರಣೆ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದ್ದು ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ.












Click it and Unblock the Notifications