ವಿಧಾನಸೌಧದಲ್ಲಿ ಅತ್ಯಾಚಾರ ಮಾಡಿರುವವರ ಬಗ್ಗೆ ಮಾತನಾಡಲ್ಲ: ಮುನಿರತ್ನ ವಿರುದ್ಧ ಡಿ ಕೆ ಸುರೇಶ್ ವಾಗ್ದಾಳಿ
ಬೆಂಗಳೂರು, ಮಾರ್ಚ್ 01: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಹೆದರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಅವರ ಹೇಳಿಕೆಗೆ ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಅತ್ಯಾಚಾರ ಮಾಡಿರುವವರ ಕುರಿತು ನಾನು ಮಾತನಾಡುವುದಿಲ್ಲ. ಮಾಧ್ಯಮಗಳು ಇಂತಹವರ ಬಗ್ಗೆ ಕೇಳುತ್ತಿದ್ದೀರಾ? ಆತನ ಅತ್ಯಾಚಾರ ಪ್ರಕರಣಗಳ ಬಗ್ಗೆ, ಆರೋಪ ಪಟ್ಟಿಯಲ್ಲಿರುವ ಅಂಶಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡಲಿ. ಆತ ಓರ್ವ ರೇಪಿಸ್ಟ್ ಎಂದು ದೂರುದಾರರು ಹೇಳಿದ್ದಾರೆ ಎಂದು ಡಿ ಕೆ ಸುರೇಶ್ ತಿಳಿಸಿದರು.
ದೇವಾಲಯ ಎಂದು ಪರಿಗಣಿಸಿರುವ ವಿಧಾನಸೌಧದಲ್ಲಿ ಇಂತಹ ನೀಚ ಕೃತ್ಯ ಎಸಗಿರುವುದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅತ್ಯಾಚಾರದ ಬಗ್ಗೆ ನೀವು ಆತನನ್ನು ಪ್ರಶ್ನೆ ಮಾಡಿದ್ದೀರಾ? ಈ ಪ್ರಕರಣಗಳಲ್ಲಿ ಆತ ನಿರ್ದೋಷಿ ಎಂದು ತೀರ್ಮಾನ ಆಗುವವರೆಗೂ ಆತನನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು. ಆತನಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿರುವುದು ಈಗಲ್ಲ. ಒಕ್ಕಲಿಗರ ತಾಯಂದಿರನ್ನು ಕೆಟ್ಟದಾಗಿ ಬಳಸಿಕೊಳ್ಳಲು ಆಲೋಚಿಸಿದಾಗ. ಒಕ್ಕಲಿಗರ ಬಗ್ಗೆ ಯಾವೆಲ್ಲಾ ಅವಾಚ್ಯ ಶಬ್ಧ ಬಳಸಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಈಗ ಈ ರೀತಿ ಮುಖವಾಡ ಹಾಕಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುನಿರತ್ನ ಅವರು ಎಸ್.ಎಂ ಕೃಷ್ಣ ಹಾಗೂ ಡಿ.ಕೆ. ರವಿ ಅವರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೇಳಿರುವುದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಕೊರಂಗು ಮುನಿರತ್ನ ನಾಯ್ಡು ಕಬ್ಬಿಣದ ಪ್ರತಿಮೆ ಮಾಡಬೇಕು ಎಂಬ ಅರ್ಜಿಯೂ ನನಗೆ ಬಂದಿದೆ. ಈ ಬಗ್ಗೆ ನಾನು ಡಿಸಿಎಂ ಬಳಿ ಮನವಿ ಮಾಡುತ್ತೇನೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಅವರು ತಿರುಗೇಟು ನೀಡಿದರು.
ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ ಎಂಬ ವಿಚಾರದ ಬಗ್ಗೆ ಕೇಳಿದಾಗ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದಾರೆ ಎಂದರೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಪಕ್ಷದ ಅಧ್ಯಕ್ಷರು. ಪ್ರತಿ ತಿಂಗಳು, ಹದಿನೈದು ದಿನಕ್ಕೊಮ್ಮೆ ದೆಹಲಿಗೆ ಹೋಗುತ್ತಾರೆ. ಅಧ್ಯಕ್ಷ ಸ್ಥಾನ ಇದ್ದಾಗ, ಇಲ್ಲದಿದ್ದಾಗಲೂ ಅವರು ಹೈಕಮಾಂಡ್ ನಾಯಕರ ಜತೆ ನಿರಂತರ ಒಡನಾಟ ಇಟ್ಟುಕೊಂಡಿರುತ್ತಾರೆ.
ಡಿ ಕೆ ಶಿವಕುಮಾರ್ ಅವರು ಸರ್ಕಾರಿ ಅಥವಾ ಖಾಸಗಿ ಕೆಲಸದ ಮೇಲೆ ದೆಹಲಿಗೆ ಹೋದರೂ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಹೀಗಾಗಿ ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸರ್ಕಾರದ ಉತ್ತಮ ಆಡಳಿತ, ಪಕ್ಷ ಸಂಘಟನೆ ಹೊರತಾಗಿ ಶಿವಕುಮಾರ್ ಅವರಿಗೆ ಬೇರೆ ಯಾವುದೇ ಅಜೆಂಡಾ ಇಲ್ಲ. ಅವರು ಈಗ ಉಪಮುಖ್ಯಮಂತ್ರಿಯಾಗಿದ್ದು, ಹಕ್ಕು ಪ್ರತಿಪಾದಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ ನಲ್ಲಿ ಅಜಿತ್ ಪವಾರ್, ಏಕನಾಥ ಶಿಂಧೆ ಹುಟ್ಟುಕೊಂಡಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, "ಬಿಜೆಪಿ ನಾಯಕರ ಮಾತಿಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಅವರು ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಅನಗತ್ಯವಾಗಿ ಕಾಂಗ್ರೆಸ್, ಶಿವಕುಮಾರ್ ಅವರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದೇಕೆ? ಎಂದು ಪ್ರಶ್ನಿಸಿದರು.
ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ನಿಮ್ಮನ್ನು ಯಾವ ಧರ್ಮದ ಆಚಾರದಂತೆ ಅಂತ್ಯಸಂಸ್ಕಾರ ಮಾಡುತ್ತಾರೆ? ಯಾರು ಯಾವ ಜಾತಿ, ಧರ್ಮದಲ್ಲಿ ಹುಟ್ಟಿರುತ್ತಾರೋ ಆ ಜಾತಿ ಧರ್ಮಗಳ ಆಚಾರ ವಿಚಾರ ಹುಟ್ಟು, ಸಾವು ತೀರ್ಮಾನವಾಗುತ್ತದೆ. ಸತ್ತ ನಂತರ ನಮ್ಮನ್ನು ಯಾವ ರೀತಿ ಮಣ್ಣು ಮಾಡುತ್ತಾರೆ ನಮಗೆ ಗೊತ್ತಾಗುವುದಿಲ್ಲ. ನಮ್ಮ.ಕುಟುಂಬದವರು, ಸ್ನೇಹಿತರು, ಬಂಧು ಬಳಗ, ಅಭಿಮಾನಿಗಳಿಗೆ ಗೊತ್ತಾಗುತ್ತದೆ. ಪ್ರತಿಯೊಬ್ಬರದ್ದು ತಮ್ಮದೇ ಆದ ಆಚರಣೆ ಇರುತ್ತದೆ ಎಂದು ಹೇಳಿದರು.












Click it and Unblock the Notifications