ರಾಮನಗರ ಆಯ್ತು, ಇದೀಗ ತುಮಕೂರು ಸರದಿ! ಗ್ರೇಟರ್ ಬೆಂಗಳೂರಿಗೆ ಈ ಜಿಲ್ಲೆಯ ಸೇರ್ಪಡೆ?
ಬೆಂಗಳೂರು, ಜೂನ್ 09: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಪ್ರಭಾವಿ ನಾಯಕರು ಪ್ರತಿಷ್ಠೆಗಾಗಿ ಜಿಲ್ಲೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ರಾಮನಗರ ಜಿಲ್ಲೆಯ ಅಭಿವೃದ್ದಿಯ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆ ಚರ್ಚೆಯ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ರಚನೆ ಆದಲ್ಲಿ ಅದಕ್ಕೆ ತುಮಕೂರು ಜಿಲ್ಲೆಯನ್ನೂ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮುಂದೆ ಪ್ರಸ್ತಾವ ಇಡುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕು ಎನ್ನುವ ಗೃಹಸಚಿವ ಪರಮೇಶ್ವರ್ ಅವರ ಹೇಳಿಕೆ ಕುರಿತು ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ಮಾತನಾಡಿ, ಅದು ಸರ್ಕಾರದ ತೀರ್ಮಾನ. ಅವರು ಸರ್ಕಾರದ ಹಿರಿಯ ಸಚಿವರು, ಸಚಿವ ಸಂಪುಟದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಿ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿಯವರು ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯ ಮಾಡುತ್ತಿರುವ ಕುರಿತು ಮಾತನಾಡಿ, ಎರಡೂ ಪಕ್ಷಗಳು ಮೆರವಣಿಗೆಗೆ ಒತ್ತಾಯ ಮಾಡಿದ್ದರು. ಕ್ರೀಡಾ ಅಭಿಮಾನಿಗಳಿಗೆ ಅವಮಾನ ಮಾಡುತ್ತಿದ್ದೀರಿ, ನಿಮಗೆ ಮೆರವಣಿಗೆ ನಡೆಸಲು ಆಗುವುದಿಲ್ಲವೇ ಎಂದು ಕೇಳಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಇದೇ ಪ್ರವೃತ್ತಿ ಹೊಂದಿದ್ದಾರೆ. ಜನ ಅವರಿಗೆ ಬಹುಮತ ನೀಡಿಲ್ಲ. ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಆಗಿರುವ ಘೋರ ದುರಂತಗಳ ಪಟ್ಟಿ ನೀಡುತ್ತೇವೆ. ಬಿಜೆಪಿ ನಾಯುಕರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜಿನಾಮೆ ನೀಡಲಿ ಎಂದು ಹೇಳಿದರು.
ಮುಂಬೈ ದಾಳಿಯಾದಾಗ ಮನಮೋಹನ್ ಸಿಂಗ್ ಅವರು ರಾಜಿನಾಮೆ ನೀಡಿದ್ದರೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಈ ಘಟನೆ ನಂತರ ವಿಲಾಸ್ ರಾವ್ ದೇಶ್ಮುಖ್ ಅವರು ರಾಜಿನಾಮೆ ನೀಡಿದ್ದರು. ಇದನ್ನು ಕುಮಾರಸ್ವಾಮಿ ಅವರು ಮರೆತು ಹೋಗಿದ್ದಾರೆ. ಇವರಿಗೆ ಡಿ.ಕೆ.ಶಿವಕುಮಾರ್ ಅವರನ್ನು ನೆನಪಿಸಿಕೊಳ್ಳದೆ ಊಟ, ನಿದ್ದೆ ಏನೂ ಆಗುವುದಿಲ್ಲ. ಅವರು ಮೊದಲು ಆರೋಗ್ಯದ ಬಗ್ಗೆ ಗಮನವಿಡಲಿ, ಈ ರಾಷ್ಟ್ರದ ಜನರ ಸೇವೆ ಮಾಡಲಿ ಎಂದು ಮನವಿ ಮಾಡುತ್ತೇನೆ ಎಂದರು.
ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ ಎನ್ನುವ ಕುಮಾರಸ್ವಾಮಿ ಪ್ರತ್ಯುತ್ತರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಎಲ್ಲರ ಆರೋಗ್ಯವನ್ನು ದೇವರೇ ನೋಡಿಕೊಳ್ಳುವುದು. ಮಂಡ್ಯದ ಜನರ ಆಶೀರ್ವಾದ ಇರಬಹುದು ಕರ್ನಾಟಕದ ಜನರ ಹಾರೈಕೆ ಅಲ್ಲವಲ್ಲ. ಅವರು ಖುಷಿಯಾಗಿದ್ದರೆ ನಮಗೆ ಸಂತೋಷ ಎಂದು ಹೇಳಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎ ಗೆ ವಹಿಸಿರುವ ಬಗ್ಗೆ ಮಾತನಾಡಿ, ನಮ್ಮ ಪೊಲೀಸರು ಸಮರ್ಥರಿದ್ದಾರೆ. ಬಿಜೆಪಿಯವರು ಉನ್ನತ ತನಿಖೆಗೆ ಒತ್ತಾಯಿಸಿದ ಅನೇಕ ಪ್ರಕರಣಗಳನ್ನು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಿಬಿಐಗೆ ನೀಡಿದೆ. ಇದರ ಫಲಿತಾಂಶ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕರಾವಳಿ ಭಾಗದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಸರಿಯಲ್ಲ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಹೈಕಮಾಂಡ್ ಕರೆ ಮೇರೆಗೆ ಡಿ.ಕೆ.ಶಿವಕುಮಾರ್ ಅವರು ದೆಹಲಿ ಭೇಟಿ ನೀಡಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, "ಸತ್ಯಕ್ಕೆ ದೂರವಾದ ಮಾತನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಬೆಂಗಳೂರಿನ ಕಸ ವಿಲೇವಾರಿಗೆ ವಿಚಾರವಾಗಿ ಟೆಂಡರ್ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರು ದೆಹಲಿಯಲ್ಲಿ ಇರುವ ಕಸ ವಿಲೇವಾರಿ ಬಗ್ಗೆ ಇರುವ ಹೊಸ ತಂತ್ರಜ್ಞಾನ ವೀಕ್ಷಿಸಲು ಬಿಬಿಎಂಪಿಯ 15 ಜನ ಅಧಿಕಾರಿಗಳ ತಂಡದ ಜೊತೆ ತೆರಳಿದ್ದಾರೆ. ಹೊಸ ರಸ್ತೆ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಲು ದೆಹಲಿಯ ನಗರಾಭಿವೃದ್ದಿ ಇಲಾಖೆಯ ಜೊತೆ ಸಭೆ ನಡೆಸಲು ತಡರಳಿದ್ದಾರೆ" ಎಂದು ಹೇಳಿದರು.
ಹೈಕಮಾಂಡ್ ಭೇಟಿ ಮಾಡಬೇಕು ಎಂದು ಹೇಳಿಲ್ಲ. ಶಿವಕುಮಾರ್ ಅವರು ದೆಹಲಿಗೆ ಹೋದಂತಹ ಸಂದರ್ಭದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸುವುದು ಸರ್ವೇ ಸಾಮಾನ್ಯ. ತಿಂಗಳಿಗೆ ಎರಡು ಬಾರಿಯಾದರೂ ದೆಹಲಿಗೆ ಭೇಟಿ ನೀಡುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಅವರಿಗೂ ಬೇರೆ, ಬೇರೆ ಕೆಲಸಗಳು ಇರುತ್ತವೆ. ನನಗೆ ಇರುವ ಮಾಹಿತಿ ಪ್ರಕಾರ ಮಾಧ್ಯಮಗಳಲ್ಲಿ ಬರುತ್ತಿರುವ ಮಾತು ಸುಳ್ಳು ಎಂದು ತಿಳಿಸಿದರು.












Click it and Unblock the Notifications