DK Shivakumar: ಹೆಲಿಕ್ಯಾಪ್ಟರ್‌ಗೆ ಹದ್ದು ಡಿಕ್ಕಿ: ದೇವರ ಮೊರೆ ಹೋದ ಡಿಕೆಶಿಗೆ ಜ್ಯೋತಿಷಿ ದ್ವಾರಕನಾಥ್ ಮಹತ್ವದ ಸಲಹೆ!
ಮೇ 2ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿತ್ತು. ಹೆಲಿಕ್ಯಾಪ್ಟರ್ ಮುಂಭಾಗದ ಗಾಜು ಪುಡಿ ಪುಡಿಯಾಗಿತ್ತು, ಪೈಲಟ್ ಸಮಯ ಪ್ರಜ್ಞೆಯಿಂದ ಸುರಕ್ಷಿತವಾಗಿ ಹೆಚ್‌ಎಎಲ್‌ನಲ್ಲಿ ಇಳಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಡಿಕೆಶಿ ಸದ್ಯ ದೇವರ ಮೊರೆ ಹೋಗಿದ್ದಾರೆ.
ಮೇ 3ರಂದು ನಂಜನಗೂಡಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಜ್ಜಯ್ಯನ ಆಶೀರ್ವಾದ ಪಡೆದುಕೊಂಡ ಅವರು, ನಂತರ ಚುನಾವಣಾ ಪ್ರಚಾರಕ್ಕೆ ತೆರಳಿದರು.

ಡಿಕೆ ಶಿವಕುಮಾರ್ ದೇವರ ಮೇಲೆ ಹೆಚ್ಚಿನ ನಂಬಿಕೆ, ಭಕ್ತಿ ಹೊಂದಿದ್ದಾರೆ. ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಕೂಡ ಅವರು ಪ್ರಣಾಳಿಕೆ ಪುಸ್ತಕದ ಮೇಲೆ ಸಿದ್ದರಾಮಯ್ಯ ಮತ್ತು ಖರ್ಗೆ ಅವರಿಂದ ಅರಿಶಿಣ-ಕುಂಕುಮ ಹಾಕಿಸಿದ್ದು ಸಾಕಷ್ಟು ಗಮನ ಸೆಳೆದಿತ್ತು. ಶೃಂಗೇರಿಯಲ್ಲಿ ಕೂಡ ಇತ್ತೀಚೆಗೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದಿದ್ದ ಡಿಕೆ ಶಿವಕುಮಾರ್, ಚಂಡಿಕಾ ಯಾಗವನ್ನು ಕೂಡ ಮಾಡಿಸಿದ್ದರು.
ಈ ಬಾರಿ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ನಾಮಪತ್ರ ತಿರಸ್ಕೃತವಾಗುವ ಭಯ ಕೂಡ ಕಾಡಿತ್ತು. ಆ ಸಂದರ್ಭದಲ್ಲಿ ಕೂಡ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಸದ್ಯ ದೊಡ್ಡ ಅಪಾಯದಿಂದ ಪಾರಾಗಿರುವ ಡಿಕೆಶಿಗೆ ಅವರ ಆಧ್ಯಾತ್ಮಿಕ ಗುರು, ಜ್ಯೋತಿಷಿ, ರಾಜಗುರು ದ್ವಾರಕನಾಥ್ ಕೂಡ ಹಲವು ಸಲಹೆ ನೀಡಿದ್ದಾರೆ.
ದೋಷ ಪರಿಹಾರಕ್ಕೆ ಸಲಹೆ ನೀಡಿದ ದ್ವಾರಕನಾಥ್
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಯೋತಿಷಿ ದ್ವಾರಕನಾಥ್, ಡಿಕೆಶಿ ಪತ್ನಿಯ ಗ್ರಹಗತಿ ಚೆನ್ನಾಗಿರುವುದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಡಿಕೆಶಿ ಗುರುಬಲ, ಶನಿ ಬಲ ಎರಡೂ ಚನ್ನಾಗಿಲ್ಲ. ಪತ್ನಿ ಉಷಾ ಅವರ ಗ್ರಹಗತಿ ಚನ್ನಾಗಿದ್ದು, ದೈವಬಲ ಡಿಕೆಶಿಯನ್ನು ಕಾಪಾಡುತ್ತಿದೆ ಎಂದು ತಿಳಿಸಿದರು.
ಡಿ.ಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್‌ಗೆ ಡಿಕ್ಕಿ ಹೊಡೆದ ಹದ್ದು ಮೃತಪಟ್ಟಿದೆ. ಈ ಬಗ್ಗೆ ದ್ವಾರಕನಾಥ್ ಅವರು ಪಂಚ ಪಕ್ಷಿ ಶಾಸ್ತ್ರ ಪರಿಣಿತ ಗಜೇಂದ್ರ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಹದ್ದು ಮೃತಪಟ್ಟ ದೋಷವನ್ನು ಪರಿಹರಿಸಿಕೊಳ್ಳಲು, ಅಲಸೂರಿನಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಇನ್ನು 22 ದಿನಗಳ ಒಳಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡುವಂತೆ ಸಲಹೆ ನೀಡಲಾಗಿದೆ. ಈ ಘಟನೆಯನ್ನು ಡಿಕೆ ಶಿವಕುಮಾರ್ ಹಗುರವಾಗಿ ಪರಿಗಣಿಸಿ ಸುಮ್ಮನಾಗಬಾರದು ಎಂದು ಕೂಡ ದ್ವಾರಕನಾಥ್ ಹೇಳಿದ್ದಾರೆ.












Click it and Unblock the Notifications