ರಾಜ್ಯ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆ ಕೊಟ್ಟ ಸುಳಿವು ಕೊಟ್ಟ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 24: ಕೆಲ ದಿನದಲ್ಲೇ ರಾಜ್ಯ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸುಳಿವು ನೀಡಿದ್ದು, ಸದ್ಯ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ರಾಜ್ಯದಲ್ಲಿ ದೊಡ್ಡಮಟ್ಟದ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದು, ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ವಿಧಾನ ಪರಿಷತ್ ಸಭಾಧ್ಯಕ್ಷರ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಮ್ಮ ಬಳಿ ಬಹುಮತವಿದೆ. ಎಲ್ಲಾ ಪರಿಷತ್ ಸದಸ್ಯರು ನನ್ನನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ನಾವು ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಕುರಿತು ಮಾತನಾಡಿ, ತೀರ್ಪಿನ ಪ್ರತಿ ಬಂದಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ, ನಿಯೋಗವನ್ನು ಕರೆದುಕೊಂಡು ಹೋಗುವ ಬಗ್ಗೆ ಸಂಸದರಿಗೆ ಮಾಹಿತಿ ನೀಡಬೇಕು, ಸರ್ವಪಕ್ಷ ಸಭೆ ಕರೆಯಬೇಕು. ಈ ಸಭೆಯನ್ನು ದೆಹಲಿಯಲ್ಲಿ ಮಾಡಬೇಕೇ ಅಥವಾ ಬೆಂಗಳೂರಿನಲ್ಲಿ ಮಾಡಬೇಕೇ ಎಂದು ಸಿಎಂ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಸಿಡಬ್ಲ್ಯೂಎಂಎ, ಸಿಡಬ್ಲ್ಯೂಸಿ ಮುಂದೆಯೇ ಈ ಪ್ರಕರಣ ಇತ್ಯರ್ಥವಾಗಬೇಕು. ನ್ಯಾಯಾಲಯದ ಮೆಟ್ಟಿಲೇರುವ ಪ್ರಮೇಯ ಇರುವುದಿಲ್ಲ. ನಮ್ಮ ನೀರು ನಮ್ಮ ಹಕ್ಕು ಹೆಜ್ಜೆ ಹಾಕಿದ್ದಕ್ಕೆ, ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಡಿಪಿಆರ್ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನೂತನ ಕಾಯ್ದೆ ಪ್ರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಾಧಿಕಾರ ರಚನೆಗೆ ಅವಕಾಶವಿದೆ. ಆಮೂಲಕ ನ್ಯಾಯಾಲಯದ ಮೆಟ್ಟಿಲೇರದೆ ಇಲ್ಲೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲಾಗುವುದು. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಈ ಪ್ರಾಧಿಕಾರವನ್ನು ಯಾವ ರೀತಿ ರಚಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ನಮ್ಮ ಸರ್ಕಾರ ಈ ಪ್ರಾಧಿಕಾರ ರಚಿಸಲಿದೆ ಎಂದು ತಿಳಿಸಿದರು.
ಕೆಲವು ಸಂದರ್ಭದಲ್ಲಿ ಕಂದಾಯ ಇಲಾಖೆ ಭೂಸ್ವಾಧೀನ ಪ್ರಕ್ರಿಯೆ ಮಾಡಿದರೂ ಪರಿಹಾರ ಹಣ ನೀಡಬೇಕಾಗಿರುವುದು ನೀರಾವರಿ ಇಲಾಖೆಯ ವಿವಿಧ ನಿಗಮಗಳಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಈ ನಿಗಮಗಳನ್ನೇ ಪಾರ್ಟಿಯನ್ನಾಗಿ ಮಾಡದೇ ಪ್ರಕರಣ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಎಸ್ಎಲ್ ಪಿ ಅರ್ಜಿ ಹಾಕುತ್ತಿದ್ದು, ಕೆಲವು ಪ್ರಕರಣವನ್ನು ವಾಪಸ್ ತರಲು ಮುಂದಾಗಿದ್ದೇವೆ. ನೀರಾವರಿ ಇಲಾಖೆಯಲ್ಲಿ 9 ಲಕ್ಷ ರೂಪಾಯಿ ಪರಿಹಾರ ನಿಧಿ ಘೋಷಿಸಿದ್ದರೆ, ನ್ಯಾಯಾಲಯದಲ್ಲಿ ಅರ್ಜಿ ಹಾಕಿ 9, 10, 15, 20 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಹೀಗಾಗಿ ನಮ್ಮ ಸರ್ಕಾರ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.












Click it and Unblock the Notifications