Property: ಈ ಕಾರಣಕ್ಕೆ ಆಸ್ತಿ ಮೌಲ್ಯ ಹೆಚ್ಚಳ: ಕಾರಣ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 30: ಜನ ಸಾಮಾನ್ಯರ ಬದುಕು ಏಳಿಗೆಯಾಗಬೇಕು. ಎಲ್ಲರ ಬದುಕಿನಲ್ಲಿ ಹೊಸ ರೂಪ ಕಾಣಬೇಕು, ಎಲ್ಲರ ಆಸ್ತಿ ಮೌಲ್ಯ ಹೆಚ್ಚಳವಾಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದೇವೆ. ಜನತಾದಳದ ನಾಯಕರು ದೆಹಲಿಗೆ ಹೋಗಿ ಜಿಲ್ಲೆಯ ಹೆಸರು ಬದಲಾವಣೆ ಸಾಧ್ಯವಿಲ್ಲ ಎಂದು ಬರೆಸಿದ್ದರು. ಕುಮಾರಣ್ಣ ಇದರ ವಿರುದ್ಧ ಬಂದ್ ಮಾಡಿಸಿದರು. ಆದರೂ ಸಹ ಹೆಸರು ಬದಲಾವಣೆಗಾಗಿ ನಾನು ದೊಡ್ಡ ಹೋರಾಟ ಮಾಡಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಈ ವೇಳೆ ಮಾತು ಮುಂದುವರೆಸಿದ ಡಿ ಕೆ ಶಿವಕುಮಾರ್ ಅವರು, ಅವರ ಬದುಕನ್ನು ಏಳಿಗೆ ಮಾಡಿಕೊಳ್ಳಬೇಕು ಎಂದು ಇದೇ ಕುಮಾರಣ್ಣ ಹಾಸನದಿಂದ ಬೆಂಗಳೂರಿಗೆ ಬಂದು ಆಸ್ತಿ ತೆಗೆದುಕೊಂಡಿಲ್ಲವೇ? ರಾಮನಗರದಲ್ಲಿ ನೀವು, ನಿಮ್ಮ ತಂದೆಯವರು ರಾಜಕಾರಣ ಮಾಡಿದರೂ ನಾವು ಬೇಸರಿಸಿಕೊಳ್ಳಲಿಲ್ಲ. ನೀವು ನಿಮ್ಮ ಊರಿನಲ್ಲಿ ಆಸ್ತಿ ತೆಗೆದುಕೊಳ್ಳದೇ ಇಲ್ಲೇಕೆ ಆಸ್ತಿ ತೆಗೆದುಕೊಂಡಿರಿ? ಎಂದು ಪ್ರಶ್ನಿಸಿದರು.

ಕೆಲವರು ರಾಮನಗರ ಜಿಲ್ಲೆ ಎಂದು ಹೇಳುತ್ತಿದ್ದರು. ಇದು ಬೆಂಗಳೂರು ದಕ್ಷಿಣ ಜಿಲ್ಲೆ. ಶಾಸಕರಾದ ಹುಲಿಕಟ್ಟೆ ಬಾಲಕೃಷ್ಣ, ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್, ಎಚ್.ಡಿ ಕುಮಾರಸ್ವಾಮಿ ಹೀಗೆ ನಮ್ಮ ಗುರುತನ್ನು ಅಳಿಸಲು ಸಾಧ್ಯವಿಲ್ಲ. ಅದೇ ರೀತಿ ನಾವು ಬೆಂಗಳೂರು ಜಿಲ್ಲೆಯವರಾದ ನಮ್ಮ ಅಸ್ಮಿತೆಯನ್ನು ಬಿಟ್ಟು ಕೊಡಲು ಸಾಧ್ಯವೇ? ಎಂದರು ಪ್ರಶ್ನಿಸಿದರು. ನಾನು ಹಿಂದೆ ಬೆಂಗಳೂರಿನ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದೆ. ಹೀಗಿರುವಾಗ ನಮ್ಮ ಇತಿಹಾಸ ಕಳೆದುಕೊಳ್ಳಲು ಸಾಧ್ಯವೇ? ಜಿಲ್ಲೆಯ ಹೆಸರು ಬದಲಾವಣೆಯಿಂದ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿದ್ದೇವೆ, ಮೆಟ್ರೋ ಸುರಂಗಮಾರ್ಗ, ಡಬಲ್ ಡೆಕ್ಕರ್ ಹೀಗೆ ಹಲವಾರು ಯೋಜನೆ ರೂಪಿಸಿದ್ದೇವೆ ಎಂದರು.
ಎಸ್ ಇ ಎಸ್ ಪಿ, ಟಿಎಸ್ ಪಿ ಅಡಿ 40 ಸಾವಿರ ಕೋಟಿ ಮೀಸಲಿಡಲಾಗಿದೆ. ಕಳೆದ 30 ವರ್ಷಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ವಿಚಾರವನ್ನು ನಾವು ಬಗೆಹರಿಸಿದ್ದೇವೆ. ಇದನ್ನು ಇಡೀ ದೇಶ ಗಮನಿಸುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವವನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಈ ರೀತಿಯ ಒಂದೇ ಒಂದು ಕೆಲಸವನ್ನು ದಳ- ಬಿಜೆಪಿಯವರು ಮಾಡಿದ್ದಾರೆಯೇ ಎಂದು ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದರು.
ಹೈ ವೋಲ್ಟೇಜ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಯೋಜನೆಯ ಅಡಿ ಒಬ್ಬ ಅಥವಾ ಇಬ್ಬರು ರೈತರಿಗೆ ಟ್ರಾನ್ಸ್ ಫಾರ್ಮರ್ಸ್ ಗಳನ್ನು ಹಂಚಿದ ಇತಿಹಾಸ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಇಡೀ ದೇಶದಲ್ಲಿಯೇ ಈ ಯೋಜನೆ ಗಮನ ಸೆಳೆದಿತ್ತು. ಯಾವ ಕ್ಷೇತ್ರದಲ್ಲಿಯೂ ಆಗದ ಕೆಲಸ ಇಲ್ಲಿ ಆಗಿದೆ. ಟ್ರಾನ್ಸ್ ಫಾರ್ಮರ್ ಗಳನ್ನು ದುರಸ್ಥಿಗೊಳಿಸಲು ಈ ಹಿಂದೆ 30-40 ಸಾವಿರ ಲಂಚ ಕೇಳುತ್ತಿದ್ದರು. ಆದರೆ ಈಗ ರೈತರೇ ಇದನ್ನು ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ನಾವು ಪರಿಚಯಿಸಿದೆವು ಎಂದರು.
ನಾವು ಗ್ಯಾರಂಟಿಗಳನ್ನು ಚುನಾವಣೆಗಾಗಿ ಮಾಡುತ್ತಿದ್ದೇವೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದವು. ಆದರೆ ನಾವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು ಹಾಗೂ ಮಹಿಳೆಯರ ಖಾತೆಗೆ ಹಣ ಹಾಕಿದೆವು. ನಿಮ್ಮ ಮನೆಯ ದೀಪ ಬೆಳಗಿ, ಹೊಟ್ಟೆ ತುಂಬಾ ಅನ್ನ ನೀಡಿದೆವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ ಅವರ ಸಬಲೀಕರಣಕ್ಕೆ ನಾಂದಿ ಹಾಡಲಾಯಿತು ಎಂದರು
ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇವರುಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಇವರುಗಳು ಅಧಿಕಾರದಲ್ಲಿದ್ದಾಗ ಜನರ ಹೊಟ್ಟೆ ತುಂಬಿಸುವ ಜನಪರವಾದ ಒಂದೇ ಒಂದು ಕೆಲಸ ಮಾಡಿದ್ದರೆ ತಿಳಿಸಲಿ. ಉಳುವವನೆ ಭೂಮಿ ಒಡೆಯ, ಪಿಂಚಣಿ, ಆಶಾ, ಪಡಿತರ ವ್ಯವಸ್ಥೆ, ಅಂಗನವಾಡಿ ಕಾರ್ಯಕ್ರಮ ಸೇರಿದಂತೆ ನೂರಾರು ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಜಾತಿ ಮಾಡಿದವರಲ್ಲ ನೀತಿ ಮಾಡಿದವರು ಎಂದರು.












Click it and Unblock the Notifications