ರವಿ ಸಾವು ಮತ್ತು ಸದನಕ್ಕೆ ಸಿದ್ದು ಕೊಟ್ಟ ಲಿಖಿತ ಉತ್ತರ
ಬೆಂಗಳೂರು, ಮಾ. 23 : 'ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಬಗ್ಗೆ ನಮಗೂ ನೋವಿದೆ. ಪ್ರಕರಣವನ್ನು ಸರ್ಕಾರ ಲಘುವಾಗಿ ಪರಿಗಣಿಸಿಲ್ಲ, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸೋಮವಾರದ ವಿಧಾನಸಭೆ ಕಲಾಪದಲ್ಲಿ ಡಿಕೆ ರವಿ ಪ್ರಕರಣದ ಬಗ್ಗೆ ಸದನಕ್ಕೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿಗಳು, 'ಸರ್ಕಾರ ಡಿಕೆ ರವಿ ಅವರ ಪೋಷಕರ ಭಾವನೆಗಳಿಗೆ ಸ್ಪಂದಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ನಿರ್ಧಾರವನ್ನು ಕೈಗೊಂಡಿದೆ' ಎಂದು ಹೇಳಿದರು. [ಡಿಕೆ ರವಿ ಕೇಸ್ : ಚೆನ್ನೈ ಸಿಬಿಐ ತಂಡದಿಂದ ತನಿಖೆ]

'ಡಿಕೆ ರವಿ ಅವರ ಸಾವಿನ ಪ್ರಕರಣವನ್ನು ಸರ್ಕಾರ ಲಘುವಾಗಿ ಪರಿಗಣಿಸಿಲ್ಲ, ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿಲ್ಲ, ಸಿಐಡಿ ವರದಿ ಬಂದ ಬಳಿಕ ಸಿಬಿಐ ತನಿಖೆಗೆ ವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಹೇಳಿದ್ದೆವು ಎಂದರು.[ಡಿಕೆ ರವಿ ಪ್ರಕರಣ, ಸೋಮವಾದರ ಬೆಳವಣಿಗೆಗಳು]
'ಯಾವುದೇ ರಾಜ್ಯಗಳಲ್ಲೂ ಇಂತಹ ಘಟನೆಗಳು ನಡೆದ ತಕ್ಷಣ ಸಿಬಿಐ ತನಿಖೆಗೆ ವಹಿಸುವುದಿಲ್ಲ. ಸ್ಥಳೀಯ ಪೊಲೀಸರ ತನಿಖೆ ನಂತರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲವಾದಲ್ಲಿ ನಮ್ಮ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುತ್ತದೆ, ಆದ್ದರಿಂದ ಸಿಐಡಿ ವರದಿಗಾಗಿ ಕಾಯುತ್ತಿದ್ದೆವು'. [ಜನ ಸಾಮಾನ್ಯರು ಸಿಬಿಐಗೆ ದೂರು ನೀಡಬಹುದೇ?]
ಸಿಐಡಿ ವರದಿ ಮುಂದಿಡುತ್ತಿದ್ದೆ : 'ಡಿಕೆ ರವಿ ಸಾವಿನ ಪ್ರಕರಣದಲ್ಲಿ ವಿರೋಧ ಪಕ್ಷಗಳು ಮಾಡಿರುವ ಆಧಾರ ರಹಿತ ಆರೋಪಗಳಿಂದ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬಂದಿದೆ. ಆದ್ದರಿಂದ ಸಿಐಡಿ ವರದಿಯನ್ನು ಸದನಲ್ಲಿ ಮಂಡಿಸಲು ತೀರ್ಮಾನಿಸಿದ್ದೆ, ಆದರೆ, ಹೈಕೋರ್ಟ್ ಆದೇಶದಿಂದ ಇದು ಸಾಧ್ಯವಾಗುತ್ತಿಲ್ಲ' ಎಂದರು.

'ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ಹಲವು ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದೆವು. ಆದರೆ, ಆಗ ಬಿಜೆಪಿ ಸಿಬಿಐ ಕಾಂಗ್ರೆಸ್ ಕೈಗೊಂಬೆ ಎಂದೆಲ್ಲಾ ಹೇಳುತ್ತಿತ್ತು. ಈಗ ಅದೇ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications