ಬಿಜೆಪಿಗೆ ಮುಮ್ತಾಜ್ ಅಲಿಖಾನ್ ಗುಡ್ ಬೈ
ಬೆಂಗಳೂರು, ಸೆ.24 : ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಮುಮ್ತಾಜ್ ಅಲಿಖಾನ್ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಗುರುವಾರ ಸಂಜೆ ಕಾಂಗ್ರೆಸ್ ಪಕ್ಷ ಸೇರಲಿರುವ ಖಾನ್ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗುರುವಾರ ಬೆಳಗ್ಗೆ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ನಿವಾಸಕ್ಕೆ ತೆರಳಿದ ಮುಮ್ತಾಜ್ ಅಲಿಖಾನ್, ಪರಿಷತ್ ಸದಸ್ಯತ್ವ ಸ್ಥಾನಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದರು. ಕಾಂಗ್ರೆಸ್ ಸೇರುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ತೊರೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯಲ್ಲಿ ನನಗೆ ಬಹಳ ಅನ್ಯಾಯವಾಗಿದೆ. ಅದರಲ್ಲೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಂದ ನನಗೆ ಬಹಳ ಅನ್ಯಾಯವಾಗಿದೆ. ಆದ್ದರಿಂದ ಪಕ್ಷ ಬಿಡುತ್ತಿದ್ದೇನೆ ಎಂದು ಅಲಿಖಾನ್ ಹೇಳಿದ್ದಾರೆ. ಕೆಪಸಿಸಿ ಕಚೇರಿಯಲ್ಲಿ ಗುರುವಾರ ಸಂಜೆ ಕಾಂಗ್ರೆಸ್ ಪಕ್ಷ ಸೇರಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯದಲ್ಲಿ ಹಾಳಾಗಲು ಆರ್ಎಸ್ಎಸ್ ನ ಸಂತೋಷ್ ಮತ್ತು ಕೆ.ಎಸ್.ಈಶ್ವರಪ್ಪ ಅವರರೇ ಕಾರಣ. ಇಲ್ಲದಿದ್ದರೆ, ಈ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತು ಎಂದು ಮುಮ್ತಾಜ್ ಅಲಿಖಾನ್ ಆರೋಪಿಸಿದ್ದಾರೆ.

ಕಾಂಗ್ರೆಸ್ `ಕೈ`ಹಿಡಿದ ಖಾನ್
ಮಾಜಿ ಸಚಿವ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಮುಮ್ತಾಜ್ ಆಲಿ ಖಾನ್ ಕಾಂಗ್ರೆಸ್ ಸೇರಿದ್ದಾರೆ. ಗುರುವಾರ ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಡಾ.ಜಿ.ಪರಮೇಶ್ವರ್ ಪಕ್ಷದ ಬಾವುಟ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇಂದು ಬೆಳಗ್ಗೆ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು.

ಕುಕ್ಕೆಗೆ ಮೋದಿ ಭೇಟಿ
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅಕ್ಟೋಬರ್ ನಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಕೇಂದ್ರ ವಿಶೇಷ ಭದ್ರತಾಪಡೆ ಮತ್ತು ಬೇಹುಗಾರಿಕೆ ತಂಡದ ಸದಸ್ಯರು ಈಗಾಗಲೇ ಶ್ರೀ ದೇವಳದ ಪರಿಸರ ಮತ್ತು ಸುರಕ್ಷಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ತೆರಳಿದ್ದಾರೆ. ಮೋದಿ ಭೇಟಿಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ.

ರೇವಣ್ಣಗೆ ಮಾಟ ತಟ್ಟೋಲ್ವಂತೆ
ನನ್ನದು ಸ್ವಾತಿ ನಕ್ಷತ್ರ. ಯಾವ ಮಾಟವೂ ನನಗೆ ತಟ್ಟುವುದಿಲ್ಲ ಎಂದು ಹೇಳುವ ಮೂಲಕ ಮಾಟ-ಮಂತ್ರ, ವಾಮಾಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಉತ್ಸುಕತೆ ತೋರುತ್ತಿರುವ ಸರ್ಕಾರವನ್ನು ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆಯಿಂದ ಇವುಗಳನ್ನು ಬೇರ್ಪಡಿಸಿ ಪ್ರತ್ಯೇಕ ಇಲಾಖೆ ರಚಿಸಿ ಈ ಬಗ್ಗೆ ಹೆಚ್ಚಿನ ಉತ್ಸಾಹ ತೋರುತ್ತಿರುವ ಟಿಬಿ ಜಯಚಂದ್ರ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡುವುದು ಒಳಿತು ಎಂದು ವ್ಯಂಗ್ಯವಾಡಿದರು.

ಕೆರೆಗೆ ಕಾರು ದಂಪತಿ ಪಾರು
ಮೈಸೂರು ಹೊರವಲಯದ ಮಂಡಕಳ್ಳಿ ಕೆರೆಗೆ ಕಾರು ಉರುಳಿ ಬಿದ್ದಿದ್ದು, ಅದರಲ್ಲಿ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ ಬೆಳಗ್ಗೆ ಮಂಡಕಳ್ಳಿ ಕೆರೆಗೆ ಕಾರು ಉರುಳಿ ಬಿದ್ದಿದೆ. ತಕ್ಷಣ ಸ್ಥಳೀಯರು ಕಾರಿನಲ್ಲಿದ್ದ ದಂಪತಿಯನ್ನು ರಕ್ಷಿಸಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ಕೆರೆಗೆ ತಡೆಗೋಡೆ ಇಲ್ಲದಿರುವುದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಖಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾವೇರಿ ವಿವಾವದ ಕುರಿತು ಚರ್ಚಿಸುತ್ತೇನೆ
ಸಂಸತ್ ನಲ್ಲಿ ಕಾವೇರಿ ವಿವಾದದ ಕುರಿತು ಚರ್ಚಿಸುತ್ತೇನೆ ಎಂದು ಮಂಡ್ಯ ಸಂಸದೆ ರಮ್ಯಾ ಹೇಳಿದ್ದಾರೆ. ಗುರುವಾರ ಪಾಂಡವಪುರ ತಾಲೂಕಿನ ಬ್ಯಾತನಹಳ್ಳಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರ ಹಿತ ಕಾಪಾಡಲು ಕಾವೇರಿ ವಿಚಾರದ ಕುರಿತು ಸಂಸತ್ ನಲ್ಲಿ ಮಾತನಾಡುತ್ತೇನೆ ಎಂದರು. ಜಿಲ್ಲೆಯ ಕಾರ್ಖಾನೆಗಳ ಅಭಿವೃದ್ಧಿ ಕುರಿತು ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಬಸ್ ಉರುಳಿ 31 ಮಂದಿಗೆ ಗಾಯ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಉರುಳಿ ಬಿದ್ದ ಪರಿಣಾಮ 31 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಕೆಂಗೇರಿ ಬಳಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಎಸ್‌ಎಸ್ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಬಸ್ಸಿನಲ್ಲಿ, ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ರಾಜರಾಜೇಶ್ವರಿ ನಗರದ ಆರ್ಚ್ ಬಳಿಗೆ ಬರುತ್ತಿದ್ದಂತೆ ಬಲಕ್ಕೆ ತಿರುಗಿಸಲು ಡ್ರೈವರ್ ಯತ್ನಿಸಿದ್ದಾನೆ. ಆದರೆ, ಬ್ರೇಕ್ ಫೇಲ್ ಅಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ನೆಲಕ್ಕೆ ಉರುಳಿಬಿದ್ದಿದೆ.

ಬೆಳಗಾವಿ ರಸ್ತೆ ಅಪಘಾತಕ್ಕೆ 3 ಬಲಿ
ನಿಂತಿದ್ದ ಲಾರಿಗೆ ಟಾಟಾ ಏಸ್ ಢಿಕ್ಕಿ ಹೊಡೆದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬೆಳಗಾವಿಯ ದೇಸೂರು ಕ್ರಾಸ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ. ಬೆಳಗಾವಿಯ ದೇಸೂರು ಕ್ರಾಸ್ ಬಳಿ ವೇಗವಾಗಿ ಬಂದ ಟಾಟಾ ಏಸ್‌ವಾಹನ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಅಪಘಾತದಲ್ಲಿ ಗಾಯಗೊಂಡಿದ್ದು, ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಅಪಘಾತಕ್ಕೆ ಮಗು ಬಲಿ
ಚಿತ್ರದುರ್ಗ ಜಿಲ್ಲೆಯ ಹಂಪನೂರು ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗುವೊಮದು ಮೃತಪಟ್ಟಿದೆ. ಗುರುವಾರ ಬೆಳಗ್ಗೆ ಇನ್ನೋವಾ ಕಾರೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಗು ಮೃತಪಟ್ಟಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಇದರಿಂದಾಗಿ ಆಕ್ರೋಶಗೊಂಡಿರುವ ಸ್ಥಳೀಯ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.












Click it and Unblock the Notifications