ಕರ್ನಾಟಕದ ಜಿಲ್ಲಾಸುದ್ದಿಗಳ ಕ್ವಿಕ್ ಲುಕ್
ಹಾಸನ, ಸೆ.19 : ರೈತರು ಡೈರಿಗೆ ನೀಡುತ್ತಿದ್ದ ಹಾಲಿನಲ್ಲಿ ಯೂರಿಯಾ ಮತ್ತು ನೀರನ್ನು ಮಿಶ್ರಣ ಮಾಡಿ ಅದನ್ನು ಹಾಲು ಉತ್ಪಾದಕರ ಸಂಘಕ್ಕೆ ನೀಡುತ್ತಿದ್ದ ಲಾರಿ ಚಾಲಕನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆ ವೀರಾಪುದಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಹಾಲಿನ ವಾಹನ ತಡೆದ ಗ್ರಾಮಸ್ಥರು, ಹಾಲಿನ ವ್ಯಾನ್ ನಿಂದ, ನೀರು ಮತ್ತು ಯೂರಿಯಾವನ್ನು ವಶಪಡಿಸಿಕೊಂಡಿದ್ದಾರೆ. ಕಲಬೆರಕೆ ಹಾಲನ್ನು ಉತ್ಪಾದಕರ ಸಂಘಕ್ಕೆ ನೀಡಿ ವಂಚಿಸುತ್ತಿದ್ದ ಚಾಲಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಹಲವು ದಿನಗಳಿಂದ ಹಾಲಿಗೆ ಯೂರಿಯಾ, ನೀರು ಮಿಶ್ರಣ ಮಾಡಿ 2-3ಕ್ಯಾನ್ ಗೆ ಹಾಲನ್ನು ಹೆಚ್ಚಿಸುತ್ತಿದ್ದ. ಚಾಲಕ ಅದನ್ನು ಉತ್ಪಾದಕೆ ಸಂಘಕ್ಕೆ ನೀಡುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಲಿನ ಬಣ್ಣ ಮತ್ತು ರುಚಿಯಲ್ಲಿ ವ್ಯತ್ಯಾಸವಾಗಿದ್ದನ್ನು ಗಮನಿಸಿದ ಡೈರಿಯವರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು.
ಇಂದು ಲಾರಿಯನ್ನು ಅಡ್ಡಗಟ್ಟಿ ಗ್ರಾಮಸ್ಥರು ಪರಿಶೀಲನೆ ನಡೆಸಿದಾಗ, ಹಾಲಿಗೆ ಯೂರಿಯಾ ಮತ್ತು ನೀರು ಬೆರೆಸುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಜಿಲ್ಲಾ ಹೆಚ್ಚುವರಿ ಎಸ್ಪಿ ರಶ್ಮಿ ಚಾಲಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಕರ್ನಾಟಕದ ಇತರ ಸುದ್ದಿಗಳು

ಸಂತೋಷ್ ಲಾಡ್ ಗೆ ಸಿಎಂ ಅಭಯ
ಬೇಲೆಕೆರಿ ಅದಿರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗುರುವವಾರ ಕೂಡಲ ಸಂಗಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್.ಆರ್. ಹಿರೇಮಠ ಆರೋಪಗಳಿಗೆ ಸಂಬಂಧಿಸಿದಂತೆ ಲಾಡ್ ತಮ್ಮೊಡನೆ ಮಾತುಕತೆ ನಡೆಸಿದ್ದಾರೆ. ತಮ್ಮ ಮೇಲೆ ಮಾಡಿರುವ ಆರೋಪ ಆಧಾರ ರಹಿತ ಎಂದು ಸಂತೋಷ್ ಲಾಡ್ ಮನವರಿಕೆ ಮಾಡಿಕೊಟ್ಟಿದ್ದಾರೆ ಆದ್ದರಿಂದ ಅವರನ್ನು ಸಂಪುಟದಿಂದ ಕೈ ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಅನುದಾನ ಕೊಡಿ ಪ್ಲೀಸ್
ಮೈಸೂರು ದಸರಾ ಹತ್ತಿರವಾಗುತ್ತಿದೆ ಆದರೆ, ಮೈಸೂರು ಮಹಾನಗರ ಪಾಲಿಕೆ ಹಣವಿಲ್ಲದ ಕಾರಣ ನಗರದಲ್ಲಿ ನಡೆಸುತ್ತಿದ್ದ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಪಾಲಿಕೆಗೆ ಸರ್ಕಾರದಿಂದ ಅನುದಾನ ಒದಗಿಸುವಂತೆ ಕೋರಿ ಮೇಯರ್ ರಾಜೇಶ್ವರಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ದಸರಾ ಉತ್ಸವಕ್ಕೆ 6 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಪಾಲಿಕೆ ಹಣವಿಲ್ಲ ಎಂದು ಹೇಳುತ್ತಿದೆ. ಈ ಗೊಂದಲ ಹೀಗೆ ಮುಂದುವರೆದರೆ, ದಸರಾ ಉತ್ಸವದ ಮೇಲೆ ಕರಿಛಾಯೆ ಆವರಿಸುವುದು ಖಂಡಿತ.

ನ್ಯಾಯಾಲಯಕ್ಕೆ ಪೂಜಾಗಾಂಧಿ
ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುಣಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ನಟಿ ಪೂಜಾಗಾಂಧಿ ಗುರುವಾರ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ಪೂಜಾಗಾಂಧಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗದೆ ಇದ್ದುದ್ದರಿಂದ ಬಂಧನದ ವಾರೆಂಟ್ ಹೊರಡಿಸಲಾಗಿತ್ತು. ಆದ್ದರಿಂದ ಗುರುವಾರ ಎಫ್ಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಹುದ್ದೆಗಳ ಭರ್ತಿ
ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ಶೀಘ್ರವೇ 8 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಗುರುವಾರ ತುಮಕೂರಿನಲ್ಲಿ ಮಾತನಾಡಿದ ಅವರು ಎರಡೂ ಇಲಾಖೆಗಳಲ್ಲಿ ಒಟ್ಟು 16 ಸಾವಿರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 8 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಮರವೇರಿದ ಚಾಲಕ
ಬಾಗೇಪಲ್ಲಿ ಕೆಎಸ್ಆರ್ ಟಿಸಿ ಡಿಪೋ ಮ್ಯಾನೇಜರ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಚಾಲಕನೊಬ್ಬ ಮರವೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ಕೃಷ್ಣಪ್ಪ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಡಿಪೋ ಮ್ಯಾನೇಜರ್ ರಾಜೇಶಖರಯ್ಯ ಪ್ರತಿದಿನ ತನಗೆ 700 ಕಿ.ಮೀ.ಸಂಚರಿಸುವಂತೆ ಹೇಳುತ್ತಾನೆ. ಕೆಕ್ಷನ್ ಆಗುತ್ತಿಲ್ಲ ಎಂದು ಕಿರುಕುಳ ನೀಡುತ್ತಾನೆ. ನನಗೆ ಆಂಧ್ರಪ್ರದೇಶ ಕಡೆ ಮಾರ್ಗ ಹಾಕಿದ್ದು, ತೆಲಂಗಾಣ ಪ್ರತಿಭಟನೆಯಿಂದಾಗಿ ಕಲೆಕ್ಷನ್ ಕಡಿಮೆ ಆಗಿದೆ. ಮ್ಯಾನೇಜರ್ ಕಿರುಕುಳ ನೀಡುವುದು ನಿಲ್ಲಿಸದಿದ್ದರೆ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ. ಪೊಲೀಸರು ಆತನ ಮನವೊಲಿಸಿ ಮರದಿಂದ ಕೆಳಕ್ಕೆ ಇಳಿಸಿದರು.

ಸಂಬಂಧಿಕರಿಂದ ಅತ್ಯಾಚಾರ
6 ವರ್ಷದ ಬಾಲಕಿ ಮೇಲೆ ಆಕೆಯ ಸಂಬಂಧಿಕ ನರಸಪ್ಪ(55) ಎಂಬ ವ್ಯಕ್ತಿ ಅತ್ಯಾಚಾರ ನಡೆಸಿದ ಘಟನೆ ಗೌರಿಬಿದನೂರು ತಾಲೂಕಿನ ರಾಯನಕಲ್ಲು ಎಂಬ ಗ್ರಾಮದಲ್ಲಿ ನಡೆದಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಕುಟುಂಬದವರು ನರಸಪ್ಪ ವಿರುದ್ಧ ಗೌರಿಬಿದನೂರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications