ಫೆ.22ರ ಶನಿವಾರದಿಂದ ಲಕ್ಕುಂಡಿ ಉತ್ಸವ
ಗದಗ, ಫೆ.21 : ಮೂರು ವರ್ಷಗಳ ನಂತರ ನಡೆಯುತ್ತಿರುವ ಲಕ್ಕುಂಡಿ ಉತ್ಸವಕ್ಕೆ ಗದಗ ಜಿಲ್ಲೆ ಸಜ್ಜಾಗಿದ್ದು, ಫೆ.22ರಿಂದ 24ರವರೆಗೆ ಉತ್ಸವ ನಡೆಯಲಿದೆ. ಫೆ.22ರ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಲಕ್ಕುಂಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಲಕ್ಕುಂಡಿ ಗ್ರಾಮ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಉತ್ಸವಕ್ಕೆ ಸಂಬಂಧಿಸಿದಂತೆ 15 ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಉತ್ಸವವನ್ನು ಯಶಸ್ವಿಯಾಗಿಸಲು ಸಿದ್ಧವಾಗಿದ್ದಾರೆ.
ಲಕ್ಕುಂಡಿ ಉತ್ಸವವನ್ನು 60 ಲಕ್ಷ ವೆಚ್ಚದಲ್ಲಿ ಆಚರಿಸಲಾಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 30 ಲಕ್ಷ, ಪ್ರವಾಸೋದ್ಯಮ ಇಲಾಖೆ 10 ಲಕ್ಷ ಹಾಗೂ ಸ್ಥಳೀಯ ಸಂಪನ್ಮೂಲಗಳಿಂದ ರು. 20 ಲಕ್ಷ ರೂ. ಹಣ ಸಂಗ್ರಹಿಸಲಾಗಿದೆ. 2011ರ ನಂತರ ಲಕ್ಕುಂಡಿ ಉತ್ಸವ ಆಚರಿಸಿರಲಿಲ್ಲ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಶುಕ್ರವಾರ ಲಕ್ಕುಂಡಿ ಉತ್ಸವ
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಫೆ.22ರಿಂದ 24ರವೆಗೆ ಲಕ್ಕುಂಡಿ ಉತ್ಸವ ನಡೆಯಲಿದ್ದು, ಶನಿವಾರ ಸಿಎಂ ಸಿದ್ದರಾಮಯ್ಯ ಉತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಉತ್ಸವವನ್ನು ಯಶಸ್ವಿಯಾಗಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ.

ನಗರಸಭೆಯಲ್ಲಿ ಉಳಿತಾಯ ಬಜೆಟ್ ಮಂಡನೆ
ಚಾಮರಾಜನಗರ ಜಿಲ್ಲೆಯ ನಗರಸಭೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ 66.35 ಕೋಟಿ ವೆಚ್ಚದ 2014- 15 ಸಾಲಿನ ಬಜೆಟ್ ಅನ್ನು ಅಧ್ಯಕ್ಷ ನಂಜುಂಡಸ್ವಾಮಿ ಮಂಡಿಸಿದ್ದಾರೆ. ಬಜೆಟ್ ನಲ್ಲಿ 66 ಕೋಟಿ ವ್ಯಯ ಮಾಡುವ ಯೋಜನೆ ರೂಪಿಸಿದ್ದು, 34.32 ಲಕ್ಷ ರೂ ಉಳಿತಾಯ ಮಾಡಲಾಗಿದೆ. ಸ್ವಂತ ಮೂಲಗಳಿಂದ 341.51 ಲಕ್ಷ ಆದಾಯ ಹಾಗೂ ವಿವಿಧ ಅನುದಾನಗಳ ಮೂಲಕ 4698. 42 ಲಕ್ಷ ಸೇರಿದಂತೆ ಒಟ್ಟು 66.35 ಕೋಟಿ ಬಜೆಟ್ ಮಂಡಿಸಲಾಗಿದೆ.

ವಿಮ್ಸ್ ಗೆ ಬಂತು ಸಂಚಾರಿ ಚಿಕಿತ್ಸಾ ವಾಹನ
ಬಳ್ಳಾರಿಯ ವಿಮ್ಸ್ ಗೆ ಸಂಚಾರಿ ಚಿಕಿತ್ಸಾ ವಾಹನ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ. ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಭೀಕರ ದುರಂತ ಸಂಭವಿಸಿದ ತಕ್ಷಣವೇ ಈ ವಾಹನ ತೆರಳಲಿದೆ. 108 ಆ್ಯಂಬುಲೆನ್ಸ್‌ನಂತೆ ಈ ಸಂಚಾರಿ ವಾಹನಕ್ಕೂ ಟೋಲ್ ಫ್ರೀ ಸಂಖ್ಯೆ ನೀಡಲಾಗುತ್ತದೆ. ತಲಾ 6 ಹಾಸಿಗೆಗಳಂತೆ ಒಟ್ಟು 18 ಫೋಲ್ಡಿಂಗ್ ಮಂಚಗಳನ್ನು ಹಾಕಿ ಗಾಯಾಳುಗಳ ತಕ್ಷಣ ಚಿಕಿತ್ಸೆ ನೀಡಲು ಸಂಚಾರಿ ವಾಹನ ನೆರವಾಗಲಿದೆ. ಈ ವಾಹನ, ಶೌಚಾಲಯ, ವಾಶ್‌ಬೇಸಿನ್, 12ಕೆ.ವಿ.ಸಾಮರ್ಥ್ಯದ ಜನರೇಟರ್ ಹೊಂದಿರಲಿದೆ.

ಬೆಲ್ಜಿಜಿಯಂಗೆ ಸಾಗಲಿದೆ `10 ಪೈಸಾ' ಸಾಕ್ಷ್ಯ ಚಿತ್ರ
ಉತ್ತರ ಕರ್ನಾಟಕದ ಕೆಲ ಜಿಲ್ಲೆಯ ಜನರು ಸೇವಿಸುವ ಫ್ಲೋರೈಡ್‌ಯುಕ್ತ ನೀರಿನಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಹುಬ್ಬಳ್ಳಿಯ ಚೇತನಕುಮಾರ ಪೂಜಾರಿ ನಿರ್ಮಿಸಿರುವ '10 ಪೈಸಾ' ಸಾಕ್ಷ್ಯ ಚಿತ್ರ ಅಂತಾರಾಷ್ಟ್ರೀಯ ಆರೋಗ್ಯ ಚಲನಚಿತ್ರೋತ್ಸವ ಸ್ಪರ್ಧೆಗೆ ಆಯ್ಕೆಯಾಗಿದೆ. ನಗರದ ದೇಶಪಾಂಡೆ ಫೌಂಡೇಶನ್‌ನ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡ ಈ ಚಿತ್ರ ಮಾರ್ಚ್ 17ರಿಂದ 22ರವರೆಗೆ ಬೆಲ್ಜಿಯಂನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಹೆಲ್ತ್ ಫಿಲ್ಮ್ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಅನ್ನಭಾಗ್ಯ ಅಕ್ರಮ ಅಧಿಕಾರಿ ಅಮಾನತು
ಅನ್ನಭಾಗ್ಯ ಯೋಜನೆಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಬಿಜಾಪುರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ಅಮಾನತುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸಹಾಯಕ ನಿರ್ದೇಶಕ ವಿಶ್ವೇಶ್ವರಯ್ಯಹಿರೇಮಠ ಅಮಾನತಾಗಿರುವ ಅಧಿಕಾರಿಯಾಗಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ರಮದಲ್ಲಿ ಹಿರೇಮಠ ಭಾಗಿಯಾಗಿದ್ದರೆ ಎಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ನೀಡಿದ ಹಿನ್ನಲೆಯಲ್ಲಿ ಸರ್ಕಾರ ಅಮಾನತು ನಿರ್ಧಾರ ಕೈಗೊಂಡಿದೆ.











Click it and Unblock the Notifications